ತಾಳಿಕೋಟಿ

ಮಲೆನಾಡಿನಂತಾದ ಬಿಸಿಲ ನಾಡು

ಮಲೆನಾಡಿನಂತಾದ ಬಿಸಿಲ ನಾಡು
ತಾಳಿಕೋಟೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಂಡು ಬಂದು ಮಲೆನಾಡಿದ ಸೊಬಗು

ತಾಳಿಕೋಟೆ11: ಪಟ್ಟಣದ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ರಾತ್ರಿಯಿಂದ ನಿರಂತರವಾಗಿ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ಮೋಡ ಮುಸಿಕಿದ ವಾತಾವರಣ ಹಾಗೂ ಜಿಟಿ ಮಳೆಯಿಂದಾಗಿ ಬಿಸಿಲು ನಾಡಿನಲ್ಲಿ ಮಲೆನಾಡಿನ ದೃಶ್ಯ ಕಂಡು ಜನ ಸಂತಸಗೊಳ್ಳುವಂತೆ ಮಾಡಿದೆ. 

ತಾಲೂಕಿನ ಕಲಕೇರಿ, ಮಿಣಜಗಿ, ಕೊಣ್ಣೂರ, ಬ.ಸಾಲವಾಡಗಿ ಸೇರಿದಂತೆ ಬಹುತೇಕ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ಮಳೆಯಿಂದಾಗಿ ತೊಗರಿಗೆ ಜೀವ ಕಳೆಬಂದರೆ, ಮುಂಗಾರು ಆರಂಭದಲ್ಲಿ ಬಿತ್ತಿದ ಬೆಳೆಗೆ ಯಾವುದೇ ಪ್ರಯೋಜವಾಗಲಿಲ್ಲ. ಆರಂಭದಲ್ಲಿ ಅಬ್ಬರಿಸಿ, ಬೊಬ್ಬರಿಸಿದ ಮುಂಗಾರು ಮಳೆ, ಇನ್ನೇನೂ ಕೈಕೊಟ್ಟಿತು ಎನ್ನುವಷ್ಟರಲ್ಲೇ ಉತ್ತಮ ಮಳೆಯಾಗುತ್ತಿರುವದರಿಂದ ರೈತರು ಸಂತಸ ಪಡುವಂತಾಗಿದೆ. ಜಿಟಿ ಜಿಟಿ ಮಳೆಯಲ್ಲಿ ಬಸ್, ಆಟೋ ಎಂದಿನಂತೆ ಓಡಾಟ ನಡೆಸಿವೆ. ಜನರು ಛತ್ರಿ ಆಶ್ರಯದಲ್ಲಿ ಓಡಾಟ ನಡೆಸಿದ್ದಾರೆ. ಇನ್ನು ಮೂರು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇರುವದರಿಂದ ರೈತರ ಆತಂಕ ಮನೆ ಮಾಡಿದೆ. ಜಿಲ್ಲೆಯಾಧ್ಯಂತ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ಪಟ್ಟಣಕ್ಕೆ ಹೊಂದಿಕೊಂಡಿರುವ ಡೋಣಿ ನದಿ ತುಂಬಿ ಹರಿಯುತ್ತಿದೆ. ನದಿಯಲ್ಲಿ ನೀರು ಹೆಚ್ಚಾಗಿ ಪಟ್ಟಣದಿಂದ ಹಡಗಿನಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಿರು ಸೇತುವೆ ಮುಳುಗಡೆ ಆಗಿದೆ. ಇದರಿಂದ ಗ್ರಾಮಸ್ಥರು ಪರದಾಡುವಂತಾಯಿತು. ಹಡಗಿನಾಳ ಗ್ರಾಮಸ್ಥರು ಮಿಣಜಗಿ ಮೂಲಕ ಸುತ್ತುವರೆದು ಸಂಚಾರ ಮಾಡುವಂತಾಯಿತು. ತುಂತು ಮಳೆಯಿಂದಾಗಿ ಜನ ಹೊರ ಬರಲಿಲ್ಲ. ಇದರಿಂದ ವ್ಯಾಪಾರು ವಹಿವಾಟು ಕಡಿಮೆಯಾಗಿತ್ತು. ಜನ ಹೊರಬರದಿದ್ದರಿಂದ ಪಟ್ಟಣದ ಜನನೀಬೀಡ ಪ್ರದೇಶದಲ್ಲಿಯೂ ಸಹ ಬಿಕೋ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. 

ಸುದ್ದಿ ಓದಿ