ಗ್ರಾಹಕ ಸಂಪರ್ಕ ಕಾರ್ಯಕ್ರಮಗಳು ಅತ್ಯಂತ ಸಹಕಾರಿ : ಶಾಸಕ ಸೋಮಶೇಖರ ರೆಡ್ಡಿ
ಬಳ್ಳಾರಿ 08: ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳ ಪ್ರಯೋಜನ ಸಮಾಜದ ಎಲ್ಲಾ ವರ್ಗದ ಜನರಿಗೂ ತಲುಪುವ ನಿಟ್ಟಿನಲ್ಲಿ ಗ್ರಾಹಕ ಸಂಪರ್ಕ ಕಾರ್ಯಕ್ರಮಗಳು ಅತ್ಯಂತ ಸಹಕಾರಿ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು.
ಆರ್ಥಿಕ ಸೇವಾ ಇಲಾಖೆ ಸಾಂಪ್ರದಾಯಿಕ ಸಪ್ತಾಹ ಆಚರಣೆ ಪ್ರಯುಕ್ತ ಅಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಬಳ್ಳಾರಿಯ ಲೀಡ್ ಬ್ಯಾಂಕ್, ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ಗಳು, ವಾಣಿಜ್ಯ ಬ್ಯಾಂಕ್ಗಳು, ಗ್ರಾಮೀಣ ಬ್ಯಾಂಕ್ಗಳು, ಕೋ-ಆಪರೇಟಿವ್ ಬ್ಯಾಂಕ್ ಹಾಗೂ ಎಲ್ಲಾ ಬ್ಯಾಂಕ್ಗಳ ಸಹಯೋಗದೊಂದಿಗೆ ನಗರದ ರಾಯಲ್ ಫೊರ್ಟ್ ಆವರಣದಲ್ಲಿ ಬುಧವಾರ ಏರಿ್ಡಸಿದ್ದ ಗ್ರಾಹಕ ಸಾಲ ಸಂಪರ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ಸ್ವನಿಧಿ, ಮುದ್ರಾ, ಸ್ಟಾರ್ಟ್ ಅಪ್ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಗಳ ಸಾಲಸೌಲಭ್ಯ ಪಡೆದುಕೊಂಡು ಸ್ವಾವಲಂಭಿಗಳಾಗಿ ಮುಂದೆ ಬನ್ನಿ. ಸಾಲ-ಸೌಲಭ್ಯ ಪಡೆದುಕೊಂಡವರು ಜವಾಬ್ದಾರಿಯುತವಾಗಿ ಸಕಾಲಕ್ಕೆ ಸಾಲಮರುಪಾವತಿ ಮಾಡಬೇಕು ಎಂದರು.
ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರು ಮಾತನಾಡಿ ಪ್ರಧಾನ ಮಂತ್ರಿ ಸ್ವನಿಧಿ ಕಾರ್ಯಕ್ರಮವು ಬಳ್ಳಾರಿ ನಗರ ಬ್ಯಾಂಕಗಳ ಸಹಕಾರದಿಂದ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯ ಕುರಿತು ಸಂಕ್ಷಿಪ್ತವಾಗಿ ತಿಳಿಸಿದ ಅವರು ಇದರ ಸೌಲಭ್ಯವನ್ನು ನಗರ ಪ್ರದೇಶದ ಜನರು ಉಪಯೋಗಿಸಿಕೊಳ್ಳಬೇಕು ಎಂದರು.
ಕೆನರಾ ಬ್ಯಾಂಕ್ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕಗಳು ಈಗಾಗಲೇ ಮುಂಡರಗಿ ವಸತಿ ಸಮುಚ್ಚಯದಲ್ಲಿ 500 ಮನೆಗಳಿಗೆ ಸಾಲ ಸೌಲಭ್ಯ ನೀಡಿವೆ ಎಂದು ತಿಳಿಸಿದ ಅವರು ಉಳಿದ ಫಲಾನುಭವಿಗಳಿಗೆ ತ್ವರಿತಗತಿಯಲ್ಲಿ ಸಾಲ ಸೌಲಭ್ಯ ಒದಗಿಸಿ ಎಂದರು.
ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಕ್ಷೇತ್ರೀಯ ವ್ಯವಸ್ಥಾಪಕ ಡಿ.ಸಿ.ಮೋಹನ್ಕುಮಾರ, ಆರ್ಬಿಐ ಎ.ಜಿ.ಎಂ ಎಸ್.ಪಿ.ಭಿಸ್ವಾಸ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶರಣಬಸವರಾಜ,ಎಸ್ಬಿಐ ಡಿಜಿಎಂ ಪ್ರದೀಪ್ ನಾಯರ್,ಕರ್ನಾಟಕ ಗ್ರಾಮೀಣ ಬ್ಯಾಂಕ್ನ ಮಹಾಪ್ರಬಂಧಕ ನಿಂಗೇಗೌಡ ಅವರು ಮಾತನಾಡಿದರು.
5096 ಗ್ರಾಹಕರಿಗೆ 171.74 ಕೋಟಿ ಸಾಲ ಮಂಜೂರಾತಿ ಪತ್ರ ವಿತರಣೆ: ಈ ಗ್ರಾಹಕ ಸಂಪರ್ಕ ಕಾರ್ಯಕ್ರಮದಲ್ಲಿ ವಿವಿಧ ಬ್ಯಾಂಕಗಳಿಂದ 5096 ಗ್ರಾಹಕರಿಗೆ 171.74 ಕೋಟಿ ರೂ ಸಾಲ ಮಂಜೂರಾತಿ ಪತ್ರ ವಿತರಣೆ ಮಾಡಲಾಯಿತು. ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಯ ಅಡಿಯಲ್ಲಿ 2512, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಅಡಿಯಲ್ಲಿ 3282 ಮತ್ತು ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ 2231 ಫಲಾನುಭವಿಗಳನ್ನು ನೊಂದಣಿ ಮಾಡಲಾಗಿದೆ ಎಂದು ಕೆನರಾ ಬ್ಯಾಂಕ್ ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕರಾದ ಸೋಮನಗೌಡ ಐನಾಪುರ ಅವರು ತಿಳಿಸಿದರು.
ಕೆನರಾ ಬ್ಯಾಂಕ್ ಕ್ಷೇತ್ರೀಯ ಕಾರ್ಯಲಯ ವಿಭಾಗೀಯ ಪ್ರಬಂಧಕ ಎನ್.ನವೀನಕುಮಾರ್ ಅವರು ನಿರೂಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ಸೋಮನಗೌಡ ಐನಾಪುರ, ನಬಾರ್ಡ್ನ ಡಿಡಿಎಂ ಯುವರಾಜ, ಕೆನರಾ ಬ್ಯಾಂಕ್ ಕ್ಷೇತ್ರೀಯ ಕಾರ್ಯಾಲಯದ ಹಿರಿಯ ಅಧಿಕಾರಿಗಳು, ಬಳ್ಳಾರಿ ನಗರದ ವಿವಿಧ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವರ್ಗದವರು ಮತ್ತು ಕೆನರಾ ಬ್ಯಾಂಕ್ ಆರ್ಸೇಟಿ ನಿರ್ದೇಶಕರು ಸಿಬ್ಬಂದಿ ವರ್ಗದವರು, 500ಕ್ಕೂ ಹೆಚ್ಚು ನಾಗರಿಕರು ಭಾಗವಹಿಸಿದ್ದರು.