ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿಯಲಿದೆ : ನಾಡಗೌಡ
ತಾಳಿಕೋಟಿ: ಅಭಿವೃದ್ಧಿಯ ಹೆಸರಿನಲ್ಲಿ ರಾಜ್ಯದ ಬೊಕ್ಕಸವನ್ನು ಲೂಟಿ ಮಾಡಿ 40 ಪರ್ಸಂಟೇಜ್ ಸರಕಾರವೆಂದು ಕುಖ್ಯಾತವಾಗಿರುವ ರಾಜ್ಯ ಕಂಡ ಅತೀ ಭ್ರಷ್ಟ ಬಿಜೆಪಿ ಪಕ್ಷದ ದುರಾಡಳಿತ ಕೊನೆಗೊಳ್ಳುವ ಸಮಯ ಹತ್ತಿರವಿದೆ ಎಂದು ಮಾಜಿ ಸಚಿವ ಸಿ.ಎಸ್. ನಾಡಗೌಡ (ಅಪ್ಪಾಜಿ) ಹೇಳಿದರು.
ತಾಲೂಕಿನ ಮಿಣಜಗಿ, ಬಳಗಾನೂರ, ತಮದಡ್ಡಿ ಹಾಗೂ ಹಿರೂರಿನಲ್ಲಿ ಹಮ್ಮಿಕೊಂಡಿದ್ದ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ಮನೆ ಯಜಮಾನಿಗೆ ಪ್ರತಿ ತಿಂಗಳು ರೂ. 2 ಸಾವಿರ ಸಹಾಯ ಧನದ ಗ್ಯಾರಂಟಿ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯ ಸರಕಾರದ ಭ್ರಷ್ಟಾಚಾರದಿಂದ ಬೇಸತ್ತು ಗುತ್ತಿಗೆದಾರರು ಪ್ರಧಾನಿಯವರಿಗೆ ಪತ್ರ ಬರೆದು ದೂರು ನೀಡಿದ್ದಾರೆ. ಹಿಂದೆ ಎಂದೂ ಈ ರೀತಿ ಆಗಿರಲಿಲ್ಲ. ಪ್ರಧಾನಿ ಮೋದಿ ಈ ಕುರಿತು ಇಲ್ಲಿಯವರೆಗೆ ಪ್ರತಿಕ್ರಿಯೆ ನೀಡಿಲ್ಲಾ. ಬಿಜೆಪಿ ಚುನಾವಣೆ ಮುನ್ನ ಪ್ರಣಾಳಿಕೆಯಲ್ಲಿ ನೀಡಿದ್ದ 600 ಆಶ್ವಾಸನೆಗಳ ಪೈಕಿ ಜಾರಿಗೆ ತಂದಿದ್ದು ಕೇವಲ 60 ಮಾತ್ರ. 2013ರಲ್ಲಿ ನಮ್ಮ ಸರಕಾರ ಘೋಷಿಸಿದ 160 ಆಶ್ವಾಸನೆಗಳನ್ನೂ ಈಡೇರಿಸಿದೆ. ಈ ಮತಕ್ಷೇತ್ರದಲ್ಲಿ ದಬ್ಬಾಳಿಕೆಯ ಕೆಟ್ಟ ರಾಜಕಾರಣ ನಡೆಯುತ್ತಿದೆ. ಇವರಿಗೆ ಇವರಿಗೆ ಜನರೇ ಬುದ್ಧಿ ಕಲಿಸಲಿದ್ದಾರೆ. ಈ ಬಾರಿ ರಾಜ್ಯದಲ್ಲಿ ಮತ್ತೇ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ, ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದರು.
ಈ ಸಮಯದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಮಲ್ಲನಗೌಡ ಬಿರಾದಾರ (ತಮದಡ್ಡಿ), ಕಿಸಾನ್ ಮಜ್ದೂರ ಸಂಘದ ತಾಲೂಕಾ ಅಧ್ಯಕ್ಷ ಸಂನಗೌಡ ಅಸ್ಕಿ, ಚಿನ್ನು ಧನಿ (ಬಸರಕೋಡ), ಶಾಂತಗೌಡ ಬಿರಾದಾರ, ಸಿದ್ದಣ್ಣ ಚೌದ್ರಿ, ಶರಣಪ್ಪ ತಳವಾರ, ರಾಜು ಜಾಧವ, ಸಿದ್ದನಗೌಡ ಬಿರಾದಾರ, ರಾಜು ಯರಗಲ್, ಬೀರಣ್ಣ ಪೂಜಾರಿ, ಶರಣು ಪೂಜಾರಿ, ಬಸ್ಸು ಬಡಿಗೇರ, ಮಾಯಪ್ಪ ಛಲವಾದಿ, ಮಾನಪ್ಪ ಬಡಿಗೇರ, ಯಮನೂರಿ ಮಾದರ, ಸಿದ್ದಪ್ಪಾ ಕೊಣ್ಣೂರ, ಭೂತಪ್ಪ ಅಗ್ನಿ ಮತ್ತಿತರರು ಇದ್ದರು.