ಮುಂದಗೋಡ

ಮಹಿಳೆಯರ ಮೇಲೆ ದೌರ್ಜನ್ಯ ಖಂಡಿಸಿ: ಗಾಂವಕರ

ಮಹಿಳೆಯರ ಮೇಲೆ ದೌರ್ಜನ್ಯ ಖಂಡಿಸಿ: ಗಾಂವಕರ

ಮುಂಡಗೋಡ 06: ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿವೆ. ಪ್ರತಿಯೊಬ್ಬ ಮಹಿಳೆಯರು ಕೂಡ ಇದನ್ನು ಖಂಡಿಸುವ ಮನೋಭಾವವನ್ನು ಹೊಂದಬೇಕು ಎಂದು ಸಿ.ಐ.ಟಿ.ಯು ರಾಜ್ಯ ಕಾರ್ಯದರ್ಶಿ ಯಮುನಾ ಗಾಂವಕರ ಹೇಳಿದರು.

ಸೋಮವಾರ ಸಂಜೆ ತಾಲೂಕಿನ ಪಾಳಾ ಗ್ರಾಮದ ಸಂತೆ ಮಾರುಕಟ್ಟೆ ಪ್ರಾಂಗಣದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಯಾವುದೋ ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ ನಮಗೇಕೆ ಬೇಕು ಎಂದು ಸುಮ್ಮನೆ ಕುಳಿತರೆ ನಾಳೆ ನಮ್ಮವರ ಮೇಲೂ ಅಂತಹ ಕೃತ್ಯಗಳು ನಡೆಯಬಹುದು. ಹಾಗಾಗಿ ಯಾವುದೇ ಭಾಗದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆದರೂ ಅದನ್ನು ಖಂಡಿಸಿ ಅವರ ಬೆಂಬಲಕ್ಕೆ ನಿಲ್ಲಬೇಕು. ಹಾಗಾದರೆ ಮಾತ್ರ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಸಾಧÀ್ಯ. ಮಹಿಳೆಯರು ಮಾಡುವ ಮನೆ ಕೆಲಸ ದುಡಿಮೆ ಎನಿಸುವುದಿಲ್ಲ. ಅದೇ ಕೆಲಸಕ್ಕೆ ಕೆಲಸದವರನ್ನು ನೇಮಿಸಿದರೆ ಸಂಬಳ ನೀಡಬೇಕಲ್ಲವಾ? ಹಾಗಾಗಿ ಮಹಿಳೆ ಮಾಡುವ ಮನೆ ಕೆಲಸ ಕೂಡ ದುಡಿಮೆಯೇ ಎಂದು ಪರಿಗಣಿಸಬೇಕು. ಸಮಾಜದ ವ್ಯವಸ್ಥೆ ಬದಲಾಗುವವರೆಗೂ ಮನೆಗೆಲಸ ಮಾಡುವ ಮಹಿಳೆಯರಿಗೆ ಬೆಲೆ ಸಿಗುವುದಿಲ್ಲ. 

ಒಡೆದಾಳುವ ನೀತಿ: ಹೋರಾಟ ಮಾಡುವ ಸಂಘಟನೆಗಳನ್ನು ಧರ್ಮ, ಜಾತಿ ಆಧಾರದ ಮೇಲೆ ಒಡೆದಾಳುವ ನೀತಿ ಬೆಳೆದಿದ್ದು, ಸಾಂಸ್ಕೃತಿಕ ದಬ್ಬಾಳಿಕೆ ನಡೆಯುತ್ತಿದೆ. ರಾತ್ರಿ ಪಾಳಯ ಕೆಲಸಕ್ಕೆ ಹೋಗುವ ವಾತಾವರಣ ಭಾರತದಲ್ಲಿ ಇಂದಿಗೂ ನಿರ್ಮಾಣವಾಗಿಲ್ಲ. ಇಂದಿಗೂ ಕೂಡ ಗಂಡು ಹೆಣ್ಣು ಎಂಬ ಬೇಧ ಭಾವ ಮುಂದುವರೆದಿದೆ. ತಮ್ಮ ತಪ್ಪುಗಳನ್ನು ಸಮರ್ಥನೆ ಮಾಡಿಕೊಳ್ಳುವುದಕ್ಕಾಗಿ ಇಂದಿಗೂ ಹೆಣ್ಣು ಮಕ್ಕಳನ್ನ ಬಲಿಪಶು ಮಾಡಲಾಗುತ್ತ ಸಾಗಲಾಗಿದೆ. ಕಾರ್ಮಿಕ, ಕೆಲಸಗಾರರು ಎಂದಾಕ್ಷಣ ಪುರುಷರು ಎನ್ನಲಾಗುತ್ತದೆ. ಆರ್ಥಿಕ ಅಸಮಾನತೆ ವಿರುದ್ದ ಹೋರಾಟ ನಡೆಸಿ ಹೆಣ್ಣು ಮಕ್ಕಳ ಮೇಲಿನ ದಬ್ಬಾಳಿಕೆಯನ್ನು ತಡೆಯಬೇಕು.

ಬೆಲೆ ಏರಿಕೆ: ಪೆಟ್ರೋಲ್, ಡಿಸೆಲ್, ಅನಿಲ, ಅಡುಗೆ ಎಣ್ಣೆ ಸೇರಿದಂತೆ ದಿನ ಬಳಕೆ ವಸ್ತುಗಳು ನಿರಂತರ ಬೆಲೆ ಏರಿಕೆಯಾಗುತ್ತಿವೆ. ಆದರೆ ಕೂಲಿ ಮಾತ್ರ ಜಾಸ್ತಿಯಾಗುತ್ತಿಲ್ಲ. ಹಾಗಾಗಿ ಸರ್ಕಾರ ದಬ್ಬಾಳಿಕೆ ಒತ್ತಡ ಹೇರುವ ಕೆಲಸ ಮಾಡುವ ಮೂಲಕ ನಮ್ಮನ್ನು ಬಡತನದ ಕೂಪಕ್ಕೆ ತಳ್ಳುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ದೇಶದ್ರೋಹಿ ಎಂಬ ಬಿರುದು ನೀಡಲಾಗುತ್ತಿದೆ. ಇದರ ವಿರುದ್ದ ಆಂದೋಲನ ಚಳುವಳಿ ಆರಂಬಿಸಬೇಕಿದೆ ಎಂದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘದ ತಾಲೂಕಾಧ್ಯಕ್ಷ ಬೀಮಣ್ಣ ಭೋವಿ, ವಾಣಿ ತೆವರ, ಪುಂಡಲೀಕ ಭೋವಿ, ದಸ್ತಗಿರಿಸಾಹೇಬ್ ಶೇಖ್, ಬಸವರಾಜ ಧಾರವಾಡ, ಸುರೇಖಾ ಭೋವಿ, ಸುಧಾ ಶೆಟ್ಟರ, ತಾರಾಮತಿ ಮೇಲಿನಮನಿ, ಶೋಭಾ ದೊಡ್ಮನಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.  ತಾರಾಮತಿ ಮೇಲಿನಮನಿ ಸ್ವಾಗತಿಸಿ ನಿರೂಪಿಸಿದರು.

ಸುದ್ದಿ ಓದಿ