ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ: ಜಿಲ್ಲಾಧಿಕಾರಿ ಡಾ. ಆನಂದ ಕೆ. ದಿಢೀರ್ ಭೇಟಿ, ಪರೀಶೀಲನೆ
ಲೋಕದರ್ಶನ ವರದಿ
ವಿಜಯಪುರ 08 : ಜಿಲ್ಲೆಯಲ್ಲಿ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯವು ಅತ್ಯಂತ ಚುರುಕಿನಿಂದ ಸಾಗಿದ್ದು, ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಬುಧವಾರ ವಿಜಯಪುರ ನಗರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ದಿಢೀರ್ ಭೇಟಿ ನೀಡಿ ಪರೀಶೀಲನೆ ನಡೆಸಿದರು. ಕಳೆದ ಜೂನ್ 29 ರಿಂದಲೇ ಜಿಲ್ಲೆಯಾದ್ಯಂತ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣಾ ಕಾರ್ಯವು ಆರಂಭಗೊಂಡಿದೆ.
ಈ ಹಿನ್ನೆಲೆಯಲ್ಲಿ ನಗರದ ಚುನಾವಣೆ ಭಾಗ ಸಂಖ್ಯೆ 2ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪರಿಷ್ಕರಣಾ ಕಾರ್ಯದ ಪ್ರಗತಿಯನ್ನು ಖುದ್ದಾಗಿ ವೀಕ್ಷಿಸಿದ ಜಿಲ್ಲಾಧಿಕಾರಿಗಳು, ಇಡೀ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಿದರು. ಇದೇ ವೇಳೆ ಸ್ಥಳದಲ್ಲಿದ್ದ ನಿಯೋಜಿತ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಚರ್ಚಿಸಿದ ಅವರು, ಯಾವುದೇ ಲೋಪದೋಷಗಳಿಗೆ ಆಸ್ಪದ ನೀಡದಂತೆ ಅತ್ಯಂತ ನಿಖರವಾಗಿ ಕಾರ್ಯನಿರ್ವಹಿಸಲು ಅಗತ್ಯ ಸಲಹೆ- ಸೂಚನೆಗಳನ್ನು ನೀಡಿದರು. ಈ ಪರೀಶೀಲನಾ ಕಾರ್ಯದ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ನೋಡಲ್ ಅಧಿಕಾರಿಯಾದ ವಿಜಯ ಮೆಕ್ಕಳಕಿ ಸೇರಿದಂತೆ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ವಿವಿಧ ಇಲಾಖೆಯ ಅಧಿಕಾರಿ,ಸಿಬ್ಬಂದಿಗಳು ಉಪಸ್ಥಿತರಿದ್ದರು.