ನವ ಬಳ್ಳಾರಿ ನಿರ್ಮಾಣಕ್ಕೆ ಬದ್ಧ: ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು
ಬಳ್ಳಾರಿ 16: ಬಳ್ಳಾರಿಯಲ್ಲಿ 76ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು.
ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾಕ್ರೀಡಾಂಗಣದಲ್ಲಿ ಸೋಮವಾರ ಏರಿ್ಡಸಿದ್ದ ಕಾರ್ಯಕ್ರಮದಲ್ಲಿ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ವಿವಿಧ ತಂಡಗಳ ಪಥಸಂಚಲನ ವೀಕ್ಷಿಸಿ ಮತ್ತು ಗೌರವ ವಂದನೆ ಸ್ವೀಕರಿಸಿ ಸ್ವಾತಂತ್ರೋತ್ಸವ ಸಂದೇಶ ನೀಡಿದರು.
ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಈ ದಿನ ತಾಯಿ ಭಾರತಾಂಬೆಯ ಅತೀ ದೊಡ್ಡ ಹಬ್ಬ ಎಂದರೆ ತಪ್ಪಾಗಲ್ಲ. ಇದು ದೇಶಕ್ಕಾಗಿ ನಡೆದ ತ್ಯಾಗ-ಬಲಿದಾನಗಳನ್ನ ಗೌರವಿಸುವ ಹಬ್ಬ. 75 ವರ್ಷಗಳಲ್ಲಿ ಭಾರತದ ಬೆಳವಣಿಗೆ - ಸಾಧನೆಯನ್ನು ಗೌರವಿಸುವ ಹಬ್ಬವಾಗಿದೆ ಮತ್ತು ನವ ಕರ್ನಾಟಕ ಮತ್ತು ನವ ಬಳ್ಳಾರಿ ನಿರ್ಮಾಣಕ್ಕೆ ನಾನು ಮತ್ತು ನಮ್ಮ ಸರಕಾರ ಬದ್ಧವಾಗಿದ್ದು, ಈ ಸುದಿನದಂದು ಸಂಕಲ್ಪ ಮಾಡಿರುವುದಾಗಿ ಅವರು ಹೇಳಿದರು.
ಬಜೆಟ್ ಘೋಷಣೆಯಂತೆ ಬಳ್ಳಾರಿಯಲ್ಲಿ ಟೆಕ್ಸ್‌ಟೈಲ್ಸ್ ಆರಂಭಿಸಲು 50 ಎಕರೆ ಭೂಮಿ ಮಂಜೂರು ಮಾಡಿಸಲಾಗಿದ್ದು,ಕಾಮಗಾರಿ ಶೀಘ್ರದಲ್ಲಿ ಆರಂಭವಾಗಲಿದೆ. ಹಗರಿಯಲ್ಲಿ ಹೊಸ ಕೃಷಿ ಕಾಲೇಜು ಸ್ಥಾಪನೆಗೆ 25 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಕುಂಠಿತಗೊಂಡಿದ್ದ ಬಳ್ಳಾರಿ ವಿಮಾನ ನಿಲ್ದಾಣ ಕಾಮಗಾರಿಯನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಕೆಕೆಆರ್‌ಡಿಬಿ ವತಿಯಿಂದ 40 ಕೋಟಿ ಮಂಜೂರು ಮಾಡಿಸಲಾಗಿದೆ ಎಂದು ಅವರು ಹೇಳಿದರು.
*13 ಸಾವಿರ ಕೋಟಿ ರೂ.ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ: ಕರ್ನಾಟಕ ಗಣಿ ಪುನಶ್ಚೇತನ ನಿಗಮ ನಿಯಮಿತದಿಂದ ಜಿಲ್ಲೆಯಲ್ಲಿ 13 ಸಾವಿರ ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.
100 ಕೋಟಿ ವೆಚ್ಚದಲ್ಲಿ ಜಿಲ್ಲೆಯ ಆಲದ ಹಳ್ಳಿಯ 23.25 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಒಣ ಮೆಣಸಿನ ಕಾಯಿ ಮಾರುಕಟ್ಟೆ ಸ್ಥಾಪನೆಗೆ ಈಗಾಗಲೇ ಚಾಲನೆ ನೀಡಲಾಗಿದೆ.ಬಳ್ಳಾರಿ ನಗರ ಅಭಿವೃದ್ಧಿ ಪ್ರಾಧಿಕಾರದಿಂದ 101.98 ಎಕರೆ ಪ್ರದೇಶದಲ್ಲಿ 73.56 ಕೋಟಿ ವೆಚ್ಚದ ವಸತಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಡಿಎಂಎಫ್ ಅನುದಾನದಲ್ಲಿ 1593.68 ಕೋಟಿ ಮೊತ್ತದ 6 ಕ್ರಿಯಾ ಯೋಜನೆಗಳನ್ನು ತಯಾರಿಸಲಾಗಿದ್ದು,1507 ಕಾಮಗಾರಿಗಳ ಪೈಕಿ, 686 ಕಾಮಗಾರಿಗಳು ಪೂರ್ಣಗೊಂಡಿವೆ.
ಕಂಪ್ಲಿ ಬ್ರಿಜ್ ನಿರ್ಮಾಣ ಕಾಮಗಾರಿಯನ್ನು 79.93 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು.
ಕಂಪ್ಲಿ ಹಾಗೂ ಕುರುಗೋಡು ತಾಲೂಕು ಕೇಂದ್ರಗಳಲ್ಲಿ 40 ಕೋಟಿ ವೆಚ್ಚದಲ್ಲಿ 100 ಹಾಸಿಗೆಗಳ ಆಸ್ಪತ್ರೆಗಳನ್ನು ನಿರ್ಮಿಸುವ ಕಾಮಗಾರಿ ಆರಂಭವಾಗಲಿದೆ.ಜಿಲ್ಲಾ ಖನಿಜ ಪ್ರತಿಷ್ಠಾನದ ಆಡಿ 105 ಗ್ರಾಮಗಳಿಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಅಡಿ ಕುಡಿಯುವ ನೀರನ್ನು ಕಲ್ಪಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.
*27,093 ಮನೆಗಳಿಗೆ ನಳ ಸಂಪರ್ಕ ಗುರಿ: ಜಲಜೀವ ಮಿಶನ್ ಯೋಜನೆ ಅಡಿ 2021-22ನೇ ಸಾಲಿನಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ 27,093 ಮನೆಗಳಿಗೆ ನಳ ಸಂಪರ್ಕ ಕಲ್ಪಿಸುವ ಗುರಿ ಇದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ತಿಳಿಸಿದರು.
ಬಳ್ಳಾರಿ ಪಾಲಿಕೆ ವ್ಯಾಪ್ತಿಯಲ್ಲಿ 15 ವಲಯಗಳಲ್ಲಿ 24ಥ7 ಕುಡಿಯುವ ನೀರು ಸರಬರಾಜು ಯೋಜನೆಯನ್ನು 270 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ 172 "ಗ್ರಾಮ ಒನ್" ಕೇಂದ್ರಗಳು ಕಾರ್ಯ ಆರಂಭ ಮಾಡಲಿವೆ. ಬಳ್ಳಾರಿಯ ರಾಯಲ್ ಸರ್ಕಲ್ ನಲ್ಲಿ ಸುಮಾರು 7 ಕೋಟಿ ವೆಚ್ಚದಲ್ಲಿ 140 ಅಡಿಯ ಕ್ಲಾಕ್ ಟವರ್ ನಿರ್ಮಾಣ ಮಾಡಲಾಗುತ್ತಿದೆ. ಬಳ್ಳಾರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣವನ್ನ 4 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಬಳ್ಳಾರಿಯಲ್ಲಿ ಬಾಬು ಜಗಜೀವನ್ ರಾಮ್ ಭವನ ನಿರ್ಮಾಣ ಕಾಮಗಾರಿ ಹಾಗೂ ಪುತ್ತಳಿ ನಿರ್ಮಾಣವನ್ನು ಹೆಚ್ಚುವರಿಯಾಗಿ 1 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.ಸುಮಾರು 10 ಕೋಟಿ ವೆಚ್ಚದಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿಯ ಸಮುದಾಯ ಭವನವನ್ನು ಬಳ್ಳಾರಿಯಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ.ಚಳ್ಳಗುರ್ಕಿ ಕ್ರಾಸ್‌ನಿಂದ ಆಂಧ್ರ್ರದೇಶದ ಗಡಿ ಭಾಗದವರೆಗೆ ಅಂಕೋಲಾ-ಜೋಳದ ರಾಶಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸುಮಾರು 13 ಕೋಟಿ ಮಂಜೂರು ಮಾಡಲಾಗಿದೆ ಎಂದರು.
2.70 ಕೋಟಿ ರೂ. ವೆಚ್ಚದಲ್ಲಿ ಬಳ್ಳಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಕಿ ಕೋರ್ಟ್ ನಿರ್ಮಾಣವಾಗಲಿದೆ. 6 ಕೋಟಿ ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣವನ್ನು ಆಧುನಿಕರಣಗೊಳಿಸಲಾಗಿದೆ.ಬಳ್ಳಾರಿ ನಲ್ಲಚೆರುವು ಪ್ರದೇಶದಲ್ಲಿ 4.36 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಮಾಡಲಾಗಿದೆ.ಬಳ್ಳಾರಿ ಜಿಲ್ಲಾ ಆಸ್ಪತ್ರೆಯನ್ನು 310 ಹಾಸಿಗೆಗಳಿಂದ 72.50 ಕೋಟಿ ವೆಚ್ಚದಲ್ಲಿ 510 ಹಾಸಿಗೆಗಳಿಗೆ ಉನ್ನತೀಕರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
*ಬಳ್ಳಾರಿ ನಗರ ಅಭಿವೃದ್ಧಿಗೆ 50 ಕೋಟಿ ವಿಶೇಷ ಪ್ಯಾಕೇಜ್: ಬಳ್ಳಾರಿ ನಗರ ಅಭಿವೃದ್ಧಿಗೆ 50 ಕೋಟಿ ವಿಶೇಷ ಪ್ಯಾಕೇಜ್ ನೀಡಲಾಗಿರುವುದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಸಚಿವ ಬಿ.ಶ್ರೀರಾಮುಲು ಅವರು ಮಹಾತ್ಮ ಗಾಂಧಿ ನಗರ ವಿಕಾಸ್ ಯೋಜನೆಯಡಿ ನಗರದ ಸಮಗ್ರ ಅಭಿವೃದ್ಧಿಗೆ 125 ಕೋಟಿ ಮಂಜೂರಾಗಿದ್ದು, ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.
ಬಳ್ಳಾರಿ ನಗರದ ಬಹುದಿನಗಳ ಬೇಡಿಕೆ ದುರ್ಗಮ್ಮ ಗುಡಿ ಅಂಡರ್ ಪಾಸ್ ರಸ್ತೆ ಅಭಿವೃದ್ಧಿ ಮತ್ತು ಮೋತಿ ಬ್ರಿಜ್ ಅಗಲೀಕರಣ ಕಾಮಗಾರಿಯನ್ನು ಕೊಳ್ಳಲಾಗುವುದು. ಬಳ್ಳಾರಿಯ ಹಮಾಲಿಗಳಿಗೆ ಬಾಕಿ ಇರುವ 435 ನಿವೇಶನಗಳನ್ನು ತ್ವರಿತಗತಿಯಲ್ಲಿ ಹಂಚಿಕೆ ಮಾಡಲಾಗುವುದು ಎಂದರು.
ಬಳ್ಳಾರಿಯ ವಿಮ್ಸ್ ನಲ್ಲಿ ಸುಸಜ್ಜಿತ 11 ಹೊಸ ಶಸ್ತ್ರ ಚಿಕಿತ್ಸಾ ಘಟಕಗಳ ಹಾಗೂ 200 ಹಾಸಿಗೆಯ ಅತ್ಯಧುನಿಕ ಟ್ರಾಮಾಕೇರ್ ಸೆಂಟರ್ ಗಳನ್ನು ಲೋಕಾರೆ್ಣ ಮಾಡಲಾಗಿದೆ.258 ಕೋಟಿ ವೆಚ್ಚದಲ್ಲಿ ಜಿಲ್ಲೆಯ ಗಣಿ ಬಾಧಿತ ಪ್ರದೇಶಗಳಲ್ಲಿ ನೂತನವಾಗಿ 12 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ ಹಾಗೂ ಇರುವ 6 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲು ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಬಳ್ಳಾರಿ ಜಿಲ್ಲೆಯನ್ನು ಪ್ರಮುಖ ಕೈಗಾರಿಕಾ ವಲಯವಾಗಿ ಅಭಿವೃದ್ಧಿಪಡಿಸಿ, ದೇಶದ ಸ್ಟೀಲ್ ಹಬ್ ಆಗಿ ಅಭಿವೃದ್ಧಿಪಡಿಸಲು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಸಚಿವ ಶ್ರೀರಾಮುಲು ಅವರು ಹೇಳಿದರು.
ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ನಂತರ ನಡೆದ ದೇಶಭಕ್ತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆದವು.
ಈ ಸಂದರ್ಭದಲ್ಲಿ ಶಾಸಕರಾದ ಜಿ.ಸೋಮಶೇಖರರೆಡ್ಡಿ, ಬಿ.ನಾಗೇಂದ್ರ,ವೈ.ಎಂ.ಸತೀಶ್, ಮಹಾನಗರ ಪಾಲಿಕೆಯ ಮೇಯರ್ ರಾಜೇಶ್ವರಿ,ಬುಡಾ ಅಧ್ಯಕ್ಷ ಪಾಲನ್ನ,ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ,ಎಸ್ಪಿ ಸೈದುಲು ಅಡಾವತ್,ಜಿಪಂ ಸಿಇಒ ಜಿ.ಲಿಂಗಮೂರ್ತಿ, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಸಹಾಯಕ ಆಯುಕ್ತ ಡಾ.ಆಕಾಶ ಶಂಕರ್, ಎಪಿಎಂಸಿ ಅಧ್ಯಕ್ಷ ಉಮೇಶ ಸೇರಿದಂತೆ ಅನೇಕರು ಇದ್ದರು.