ಬಾ... ಬಾಪೂ ಬಂದು ನನ್ನ ಪ್ರಶ್ನೆಗಳಿಗೆ ಉತ್ತರ ಕೊಡು...!
ನಿಜ ಇಂದು ನನ್ನಲ್ಲಿ ಹುಟ್ಟಿದ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಡಬೇಕಾದವನು ನೀನೆ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಲಕ್ಷ ಲಕ್ಷ ಜನಗಳು ಹೋರಾಟ ಮಾಡಿದರು. ಬ್ರಿಟೀಷರ ಗುಂಡುಗಳಿಗೆ ಗುಂಡಿಗೆಯೊಡ್ಡಿದರು. ನೆತ್ತರದ ಮಡುವಿನಲ್ಲಿಯೇ ಹೆಜ್ಜೆ ಹಾಕುತ್ತ ಸ್ವಾತಂತ್ರ್ಯದ ದಾರಿಯನ್ನು ಸುಗಮಗೊಳಿಸುವುದಕ್ಕಾಗಿ ಸನ್ನದ್ಧರಾದರು. ಹಲವು ಜನ ಗಲ್ಲಿಗೇರಿದರು, ಕೆಲವು ಜನ ಜೈಲಿಗೋದರು, ಮತ್ತೆ ಕೆಲವರು ಕರಿನೀರಿನ ಶಿಕ್ಷೆಗೆ ಗುರಿಯಾಗಿ ಸಾವು ಬದುಕಿನ ನಡುವೆ ಸೆಣಸಿ ಗೆದ್ದು ಬಂದರು. ಆದರೂ ಅವರೆಲ್ಲ ಇತಿಹಾಸದ ಪುಟದಲ್ಲಿ ಮೂಲೆಗುಂಪಾದರು. ಭಾರತ ಸ್ವಾತಂತ್ರ್ಯಗೊಂಡ ಬಳಿಕ ಎಲ್ಲರೂ ನಿನ್ನ ಮಾತುಗಳನ್ನೇ ನಂಬಿದರು. ನೊಂದವರ ನಾಯಕನೆಂದು ಬಿಂಬಿಸಿದರು. ಶಾಂತಿಯ ಪ್ರತೀಕ ಎಂದು ಸಾರಿದರು.
ನವ ಭಾರತದ ನಿಮರ್ಾಪಕ ಎಂದು ಹೇಳಿದರು. ಎಲ್ಲವನ್ನು ನಾನು ಓದಿದ್ದೇನೆ. ಸಂತಸ ಪಟ್ಟಿದ್ದೇನೆ. ಆದರೆ ಇಂದು ನಡೆಯುತ್ತಿರುವ ಎಲ್ಲ ಘಟನೆಗಳನ್ನು ಕಣ್ಣಾರೆ ಕಂಡ ಮೇಲೆ ನೀನು ಹೇಳಿದ ಮಾತನ್ನು ನೆನೆಸಿಕೊಂಡು ಕಂಗಾಲಾಗಿ ನಿನಗೇ ಆ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ. ಬಾಪೂ... ನೀನೆ ಬಂದು ನನ್ನ ಪ್ರಶ್ನೆಗಳಿಗೆ ಉತ್ತರ ಕೊಡು. ಅಂದು ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ನೀನು ಹೇಳಿದೆ "ಯಾವಾಗ ಮಧ್ಯರಾತ್ರಿ ಒಂಟಿ ಮಹಿಳೆ ನಡುರಸ್ತೆಯಲ್ಲಿ ನಿರ್ಭಯಳಾಗಿ ನಡೆದುಕೊಂಡು ಹೋಗುತ್ತಾಳೋ ಅಂದೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದಂತೆ" ಎಂದು. ನಿನ್ನ ಮಾತನ್ನು ಕೇಳಿದ ನಮ್ಮ ಜನಗಳು ಚಪ್ಪಾಳೆ ತಟ್ಟಿ ಶಿಳ್ಳೆ ಹೊಡೆದು ಸಂತಸ ಪಟ್ಟರು. ಮುಂದಾಗುವ ಯಾವುದರ ಕಲ್ಪನೆಯೂ ಇಲ್ಲದ ನಮ್ಮವರು ಹುಚ್ಚುಚ್ಚಾಗಿ ಸ್ವಾತಂತ್ರ್ಯ ಸಿಕ್ಕಿದೆ ಎಂದು ಸಂಭ್ರಮದಲ್ಲಿ ಮೈ ಮರೆತು ಕುಣಿದರು. ಹಾಗೂ ಹೀಗೂ ಎನ್ನುತ್ತ 74 ವರ್ಷಗಳನ್ನು ದಾಟಿ 75ನೇ ವಸಂತಕ್ಕೆ ಕಾಲಿಟ್ಟರು. ಈವಾಗ ಕೇಳುತ್ತೇನೆ ಹೇಳು, ಅಂದು ನೀನು ಹೇಳಿದ ಮಾತು ನಿಜವಾಯಿತೆ? ಒಬ್ಬಂಟಿ ಮಹಿಳೆ ನಡುರಾತ್ರಿಯಲ್ಲಿ ಒಬ್ಬಳೆ ನಡೆದುಕೊಂಡು ಹೋಗುವಷ್ಟರ ಮಟ್ಟಿಗೆ ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತೆ? ಸಿಕ್ಕಿದೆ ಎಂದರೆ ಮಹಿಳೆಯರ ಮೇಲೇಕೆ ಈ ದೌರ್ಜನ್ಯಗಳು ಡೆಯುತ್ತಿವೆ? ಸಿಕ್ಕಿಲ್ಲ ಎನ್ನುವುದಾದರೆ ಮತ್ತೇಕೆ ಸ್ವಾತಂತ್ರ್ಯ ಭಾರತ ಎಂದು ಇದನ್ನು ಕರೆದೆ? ಮಧ್ಯರಾತ್ರಿಯಲ್ಲಿ ಒಬ್ಬಂಟಿ ಮಹಿಳೆ ನಿರ್ಭಯಳಾಗಿ ನಡೆದು ಹೋಗಬೇಕು ಎಂದೆ. ಆದರೆ ಇಂದು ಹಾಡು ಹಗಲಿನಲ್ಲಿಯೇ ನಡೆದು ಹೋಗುವುದು ಕಷ್ಟವಾಗುತ್ತಿದೆ ಎಂದ ಮೇಲೆ ನೀ ಹೇಳಿದ ಮಾತಿಗೆ ಈ ದೇಶದಲ್ಲಿ ಕಿಂಚಿತ್ತಾದರೂ ಬೆಲೆ ಉಳಿಸಿದ್ದಾರೆಯೇ? ಇಲ್ಲ ತಾನೇ? ಅಂದ ಮೇಲೆ ಈ ರೀತಿಯ ಘಟನೆಗಳನ್ನು ಕಾಣುವುದಕ್ಕಾಗಿಯೇ ಇಷ್ಟು ಹೋರಾಟ ಮಾಡಿದೆಯಾ? ಅಥವಾ ಇಂಥ ಬಂಡಜನಗಳು ಉಂಡಾಡಿತನ ಮಾಡುವುದಕ್ಕಾಗಿಯೇ ನೀನಂದು ಉಪವಾಸ ಕುಳಿತೆಯಾ? ನಮ್ಮ ದೇಶದಲ್ಲಿ ಬಡತನದಲ್ಲಿ ಬದುಕುವ ಮಹಿಳೆಯರಿಗೆ ಮೈ ಮುಚ್ಚಿಕೊಳ್ಳುವಷ್ಟು ಬಟ್ಟೆ ಇಲ್ಲ ಎನ್ನುವುದನ್ನು ಕಂಡು ಜೀವನ ಪರ್ಯಂತ ಬರೀಮೈ ಫಕೀರನಾಗಿ ಬದುಕಿದೆ. ಆದರೆ ಇಂದು ಅದೇ ದೇಶದಲ್ಲಿನ ಜನಗಳು ಅದೇ ಮಹಿಳೆಯ ಬಟ್ಟೆಯನ್ನೆ ಕಳಚಿ ಬೆತ್ತಲು ಮಾಡುತ್ತಿದ್ದಾರಲ್ಲ ಇದನ್ನು ಕಂಡು ನೀನು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಹೇಳಬಲ್ಲೆಯಾ ಹೇಳು? ಉತ್ತರ ಕೊಡು ಬಾಪೂ ನನ್ನ ಪ್ರಶ್ನೆಗಳಿಗೆ ಉತ್ತರ ಕೊಡು.
ಇಲ್ಲ...! ನಿನ್ನ ಬಳಿ ಉತ್ತರವಿಲ್ಲ. ಅಸಲಿಗೆ ನಿನ್ನ ಬಳಿ ಮಾತ್ರವಲ್ಲ ಈ ದೇಶದ ಯಾವೊಬ್ಬ ಪ್ರಜೆಯ ಬಳಿಯು ಉತ್ತರವಿಲ್ಲ. ಏಕೆಂದರೆ ಈ ದೇಶಕ್ಕೆ ಅಂದು ಮಧ್ಯರಾತ್ರಿ ನೀಡಿದ್ದು ಸ್ವಾತಂತ್ರ್ಯವಲ್ಲ. ಬದಲಿಗೆ ಸ್ವೇಚ್ಛಾಚಾರದ ಸವರ್ಾಧಿಕಾರ. ಅದಕ್ಕೆ ಎಲ್ಲರೂ ಈ ದೇಶದ ಕಾನೂನುಗಳನ್ನು ಕಾಲಿನಡಿಯಲ್ಲಿ ಹಾಕಿಕೊಂಡು ಮೆಟ್ಟಿ ನಡೆಯುತ್ತಿದ್ದಾರೆ. ಹೀಗಾಗಿಯೇ ಈ ಸ್ವಾತಂತ್ರ್ಯ ಎನ್ನುವುದು ಅರ್ಥ ಕಳೆದುಕೊಂಡ ಪದವಾಗಿ ಉಳಿದು ಹೋಗುತ್ತಿದೆ. ಅದರಲ್ಲೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಕಂಡಾಗ ರಕ್ತ ಕುದಿಯುತ್ತದೆ. ನಮ್ಮವರೇ ನಮ್ಮ ಮೇಲೆ ಮಾಡುತ್ತಿರುವ ಅಮಾನುಷ ಕೃತ್ಯಗಳನ್ನು ನೋಡಿದಾಗ ನಮ್ಮವರಿಗಿಂದ ಬ್ರಿಟೀಷರೆ ವಾಸಿಯಲ್ಲವೇ? ಎನ್ನುವ ಪ್ರಶ್ನೆ ಮೂಡುತ್ತದೆ. ಕೊನೆ ಪಕ್ಷ ಮಹಿಳಾ ಸ್ವಾತಂತ್ರ್ಯಕ್ಕಾದರೂ ಅವರು ಅವಕಾಶ ನೀಡಿದರು. ವಿದವಾ ವಿವಾಹಕ್ಕೆ ಸಹಾಯ ಮಾಡಿದರು. ಸತಿ ಪದ್ಧತಿಯ ನಾಶಕ್ಕೆ ಸಹಕಾರ ನೀಡಿದರು. ಮಹಿಳಾ ಶಿಕ್ಷಣಕ್ಕೆ ಬೆಂಬಲ ಸೂಚಿಸಿದರು. ಆದರೆ ಸ್ವಾತಂತ್ರ್ಯದ ಅಮಲಿನಲ್ಲಿ ತೇಲಾಡುತ್ತಿರುವ ನಮ್ಮವರು ನಮ್ಮ ಹೆಣ್ಣುಮಕ್ಕಳಿಗಾಗಿ ಏನು ಮಾಡುತ್ತಿದ್ದಾರೆ ಹೇಳಿ? ಹೆಜ್ಜೆ ಹೆಜ್ಜೆಗೂ ದೌರ್ಜನ್ಯ. ಇದನ್ನು ಕಂಡ ಮೇಲೆ ಬ್ರಿಟೀಷರಿದ್ದಾಗಲೇ ದೇಶ ಚೆನ್ನಾಗಿತ್ತೆ ಎನ್ನುವ ಭಾವನೆ ಮೂಡದೇ ಇನ್ನೇನಾಗಲು ಸಾಧ್ಯ? ಇದು ಹೀಗೆ ಮುಂದುವರಿದರೆ ಅಂದು ಅರಿವಿಲ್ಲದೇ ದಾಸ್ಯ ತೊಟ್ಟ ನಾವು ಇಂದು ತಿಳಿದು ತಿಳಿದು ದಾಸ್ಯದ ಸಂಕೋಲೆಗೆ ಕೊರಳೊಡ್ಡಬೇಕಾಗುತ್ತದೆ ಅಲ್ಲವೆ?. ಕಳೆದಬಾರಿಯ ಲೇಖನದಲ್ಲಿ ಅಫ್ಘಾನ್ ಮಹಿಳೆಯರ ಮೇಲೆ ಆ ದೇಶದಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ಕಂಡು ಭಾರತ ನಾರಿ ನಿಜಕ್ಕೂ ನೀನು ಪುಣ್ಯವಂತಳು ಎಂದು ಹೇಳಿದ್ದೆ. ಅದಕ್ಕೆ ಎಷ್ಟೋ ಜನ ಕೆಲವು ಘಟನೆಗಳನ್ನು ಉದಾಹರಿಸಿ ಹೇಳಿ ಪ್ರಶ್ನೆಯನ್ನು ಮಾಡಿದ್ದರು. ಅವರಿಗೆ ಉತ್ತರ ನೀಡುವುದರೊಳಗಾಗಿ ನಮ್ಮವರ ಅಸಲಿ ಮುಖ ಮತ್ತೊಮ್ಮೆ ಬಟಾಬಯಲಾಗಿ ಬಿಟ್ಟಿದೆ. ಅಲ್ಲಿಗೆ ಅವರೆಲ್ಲ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವ ಬದಲು ಉತ್ತರಕ್ಕೆ ಮುಖಮಾಡಿ ನಿಲ್ಲುವಂತ ಸ್ಥಿತಿ ಎದುರಾಗಿದೆ. ಈ ಮೂಲಕ ನಮ್ಮ ದೇಶದಲ್ಲಿಯೂ ಮಹಿಳಾ ಸ್ವಾತಂತ್ರ್ಯಕ್ಕೆ ಬೆಲೆ ಇಲ್ಲವೇ? ಎನ್ನುವ ಪ್ರಶ್ನೆ ನನ್ನನ್ನು ಕಾಡುತ್ತಿದೆ.
ನಮ್ಮ ದೇಶಕ್ಕೆ ರಾಮ ರಾಜ್ಯ ಎಂದು ಕರೆಯುತ್ತೇವೆ. ಭಾರತ ಎನ್ನುವುದು ಮಯರ್ಾದಾ ಪುರುಷೋತ್ತಮ ಎಂದು ಕರೆಸಿಕೊಂಡ ರಾಮ ಜನಿಸಿದ ನಾಡು. ಶ್ರೀಲಂಕಾವನ್ನು ರಾವಣ ಭೂಮಿ ಎನ್ನುತ್ತೇವೆ. ಕಾರಣ ಸೀತೆಯನ್ನು ಹೊತ್ತೊಯ್ದ ರಾವಣ ಆಳ್ವಿಕೆ ಮಾಡಿದ್ದು ಅದೇ ಲಂಕೆಯಲ್ಲಿ ಎನ್ನುವ ಕಾರಣಕ್ಕೆ. ಆದರೆ ಇಂದು ರಾವಣನ ನಾಡಿಗಿಂತಲೂ ಹೆಚ್ಚಿನ ಅತ್ಯಾಚಾರಗಳು ನಡೆಯುತ್ತಿರುವುದು ರಾಮರಾಜ್ಯದಲ್ಲಿ ಎಂದರೆ ಅದಕ್ಕಿಂತ ನಾಚಿಕೆಗೇಡಿನ ವಿಷಯ ಬೇರೊಂದಿರಲು ಸಾಧ್ಯವೇ ನೀವೇ ಹೇಳಿ? ಹೆಣ್ಣನ್ನು ಗೌರವದಿಂದ ಕಾಣುತ್ತಿದ್ದ ಮಣ್ಣಿನಲ್ಲಿಯೇ ಈ ರೀತಿಯ ಘಟನೆಗಳು ಘಟಿಸುವುದನ್ನು ಕಂಡ ರಾಮನ ಆತ್ಮವಾದರೂ ನೆಮ್ಮದಿಯಾಗಿರುತ್ತದೆಯೇ ಹೇಳಿ? ಮಂದಿರ ಕಟ್ಟಿದ ಮಾತ್ರಕ್ಕೆ ನಮ್ಮದು ರಾಮರಾಜ್ಯವಾಗದು ಬದಲಿಗೆ ರಾಮನ ವಿಚಾರಗಳು ಪ್ರತಿಯೊಬ್ಬನ ಮನದಲ್ಲಿ ಮನೆ ಮಾಡುವಂತೆ ಮಾಡುವುದು ಬೇಡವೇ? ಬಾಪೂ ನೀವು ಬದುಕಿರುವವರೆಗೂ ರಾಮ್ ರಾಮ್ ಎನ್ನುತ್ತಲೇ ಇದ್ದೀರಿ. ಸಾಯುವ ಕೊನೆ ಗಳಿಗೆಯಲ್ಲಿಯೂ ಹೇ ರಾಮ್ ಎನ್ನುತ್ತಲೇ ಪ್ರಾಣ ಬಿಟ್ಟಿರಿ. ತಮಗೆ ರಾಮನ ಮೇಲೆ ಭಕ್ತಿ ಇತ್ತು ಗೌರವ ಇತ್ತು. ಆದರೆ ಇಂದು ರಾಮನ ಭೂಮಿಯಲ್ಲಿ ಗ್ಯಾಂಗ್ ರೇಪ್ನಂತ ಪ್ರಕರಣಗಳು ನಡೆಯುತ್ತಿವೆ ಎಂದರೆ ನೀನು ನಂಬಿದ ರಾಮನ ರಾಜ್ಯದ ನಿಮರ್ಾಣ ಇನ್ನು ಕನಸು ಮಾತ್ರವೇ? ಹೇಳಿ ಬಾಪೂ ಉತ್ತರ ಹೇಳಿ. ಅಂದು ದೆಹಲಿಯಾಯಿತು ಮೊನ್ನೆ ಹೈದರಾಬಾದಾಯಿತು ಇಂದು ಮೈಸೂರಾಗಿದೆ. ಮುಂದೆ ಇನ್ಯಾವ ಊರಿನಲ್ಲಿ ಇನ್ನೊಂದು ಅನಾಹುತ ಜರುಗುತ್ತದೆಯೋ ಗೊತ್ತಿಲ್ಲ. ಅಂದ ಮೇಲೆ ಈ ದೇಶಕ್ಕೆ ಸ್ವಾತಂತ್ರ್ಯ ಭಾರತ ಎಂದು ಕರೆಯಬೇಕಾ ಹೇಳಿ? ಮಹಿಳೆಯರಿಗೆ ಪ್ರಾಚೀನ ಕಾಲದಿಂದಲೂ ಗೌರವ ನೀಡುತ್ತ ಬರಲಾಗುತ್ತಿದೆ ಎಂದು ಹೇಳುತ್ತ ಸಾಗುವುದು ವಾಡಿಕೆ ಎನ್ನುವಂತಾಗಿದೆ. ವಾಸ್ತವದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳಿಗೆ ಕಡಿವಾಣವೇ ಬೀಳುತ್ತಿಲ್ಲ. ಏಕೆ ಎನ್ನುವುದೇ ನನಗೆ ಇನ್ನೂ ಅರ್ಥವಾಗುತ್ತಿಲ್ಲ. ನೀರ್ಭಯಾ ಪ್ರಕರಣದಲ್ಲಿನ ಆರೋಪಿಗಳಿಗೆ ಗಲ್ಲು ವಿಧಿಸಲಾಯಿತು. ಪಶುವೈದ್ಯೆಯ ಪ್ರಕರಣದ ಆರೋಪಿಗಳನ್ನು ಎನ್ಕೌಂಟರ್ ಮಾಡಲಾಯಿತು. ಆದರೂ ಕ್ರೌರ್ಯ ಮೆರೆಯುವುದು ಕಡಿಯಾಗುತ್ತಿಲ್ಲ. ಇಂಥ ಪ್ರಕರಣಗಳು ಪ್ರಚಾರ ಪಡೆದುಕೊಂಡಾಗ ಪ್ರತಿಭಟನೆ ನಡೆದು ದೇಶದ ಗಮನ ಸೆಳೆಯುತ್ತವೆ. ಅದರೆ ಅದೆಷ್ಟೋ ಪ್ರಕರಣಗಳು ಗೋತ್ತೇ ಆಗದಂತೆ ಅಲ್ಲಿಯೇ ಉರಿಸುಗಟ್ಟಿ ಸತ್ತು ಹೋಗುತ್ತವೆ. ಇವುಗಳಿಗೆ ನಿಜವಾಗಲೂ ನ್ಯಾಯ ನೀಡಲು ಸಾಧ್ಯವಾಗದ ಮೇಲೆ ಈ ದೇಶ ಮಹಿಳೆಯರಿಗೆ ಗೌರವ ನೀಡುತ್ತಿದ್ದ ಮಹಾನ್ ದೇಶ ಎಂದು ಬೊಬ್ಬೆ ಹೊಡೆಯುವುದರಲ್ಲಿ ಯಾವ ಅರ್ಥವಿದೆ ನೀವೆ ಹೇಳಿ?
ಅಪ್ಘಾನ್ನಲ್ಲಿ ಮಹಿಳೆಯರು ಮನೆಯಿಂದ ಹೊರ ಬರುವುದಕ್ಕೆ ಸ್ವಾತಂತ್ರ್ಯವಿಲ್ಲ ಎನ್ನುವ ವಿಚಾರವನ್ನಿಟ್ಟುಕೊಂಡು ಮೊನ್ನೆ ಬರೆದ ಲೇಖನದಲ್ಲಿ ಭಾರತದ ಮಹಿಳೆಯರಿಗೆ ಸರ್ವ ಸ್ವಾತಂತ್ರ್ಯವಿದೆ ಎಂದು ಹೇಳಿದ್ದೆ. ಆದರೆ ಅದನ್ನು ಹೇಳಿದ ಒಂದೇ ವಾರದಲ್ಲಿ ಅದಕ್ಕೆ ವಿರುದ್ಧವಾದ ವಿಚಾರಗಳು ಹೊರ ಬರುತ್ತಿರುವುದನ್ನು ಕಂಡು ಅಳಬೇಕೋ ನಗಬೇಕೊ ಒಂದೂ ಗೊತ್ತಾಗುತ್ತಿಲ್ಲ. ಇದೀಗ ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣದಿಂದಾಗಿ ಇಡೀ ರಾಜ್ಯವೇ ದಂಗಾಗಿದೆ. ತಮ್ಮ ಮಕ್ಕಳನ್ನು ಹೊರ ಕಳುಹಿಸುವುದಕ್ಕೂ ಹೆದರುವಂತ ಸ್ಥಿತಿ ಉಂಟಾಗಿದೆ. ಇದರ ಮಧ್ಯದಲ್ಲಿ ಕೆಲವು ಜನ ಭಾರಿ ಬುದ್ಧಿವಂತರು ಕೆಲವು ಆದೇಶಗಳನ್ನು ಹೊರಡಿಸುವ ಮೂಲಕ ರಾಜ್ಯವೇ ತಲೆ ತಗ್ಗಿಸುವ ರೀತಿ ನಡೆದುಕೊಳ್ಳುತ್ತಿರುವುದು ನಿಜಕ್ಕೂ ಖೇಧವನ್ನುಂಟು ಮಾಡುತ್ತಿದೆ. ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಅದೆಷ್ಟು ಸಂಚಲನ ಸೃಷ್ಠಿಸಿತು ಎಂದರೆ ಮರುದಿನವೇ ಪ್ರತಿಭಟನೆಗಳು ಸಾಲುಸಾಲಾಗಿ ಜರುಗಲು ಪ್ರಾರಂಭಿಸಿದವು. ಇದರ ಬಿಸಿ ತಾಳದ ಗೃಹಸಚಿವರು ಅಷ್ಟು ಹೊತ್ತಿನಲ್ಲಿ ಅಂಥ ನಿರ್ಜನ ಪ್ರದೇಶಕ್ಕೆ ಆ ಸಂತ್ರಸ್ತೆ ಹೋಗಿದ್ದಾದರೂ ಏಕೆ? ಎನ್ನುವ ಪ್ರಶ್ನೆಯನ್ನು ಕೇಳುವ ಮೂಲಕ ನಾಲಿಗೆ ಹರಿಬಿಟ್ಟು ವಿವಾದಕ್ಕೆ ಕಾರಣರಾದರು. ಅವರ ಮಾತಿನ ಉದ್ದೇಶ ಬೇರೆ ಇರಬಹುದು. ಆದರೆ ಬೆಂಕಿ ಹೊತ್ತಿಕೊಂಡು ಉರಿಯುವಾಗ ಕೊಂಚ ಗಾಳಿ ಬೀಸಿದರು ಅದರ ಕೆನ್ನಾಲಿಗೆ ಬೇರೆಡೆಗೂ ಚಾಚುತ್ತದೆ. ಹಾಗೆ ಗೃಹಸಚಿವರ ಮಾತು ಬೇರೆ ಸ್ವರೂಪ ಪಡೆದುಕೊಂಡಿತು.
ಅದಿರಲಿ, ಈ ಪ್ರಕರಣದ ನಂತರ ಮೈಸೂರಿನ ಕುಕ್ರಳ್ಳಿ ಕೆರೆ ಭಾಗದಲ್ಲಿ ಸಂಜೆ 6ರ ನಂತರದಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ ಎಂದು ಆದೇಶ ಹೊರಡಿಸಿದರೆ ಇತ್ತ ಮೈಸೂರು ವಿಶ್ವವಿದ್ಯಾಲಯ ಇನ್ನೂ ಒಂದು ಹೆಜ್ಜೆ ಮುಂದುವರಿದೂ ಮಹಿಳೆಯರ ಸುರಕ್ಷತೆಯ ದೃಷ್ಠಿಯಿಂದ ಸಂಜೆ 6.30ರ ನಂತರ ಮಹಿಳೆ ಒಬ್ಬಂಟಿಯಾಗಿ ವಿಶ್ವವಿದ್ಯಾಲಯದ ಆವರಣದಲ್ಲಿ ಓಡಾಡಬಾರದು ಎಂದು ಆದೇಶ ಹೊರಡಿಸುತ್ತಾರೆಂದರೆ ನಮ್ಮ ದೇಶದ ಸ್ಥಿತಿ ಎಲ್ಲಿಗೆ ಬಂದು ಮುಟ್ಟಿದೆ ಎನ್ನುವುದನ್ನು ಮನದಟ್ಟು ಮಾಡಿಕೊಳ್ಳಿ. ಆ ಕಾಮುಕ ಪಿಶಾಚಿಗಳು ಮೈಸೂರಿನ ಮಹಿಳೆಯ ದೇಹದ ಮೇಲೆ ಅತ್ಯಾಚಾರ ಮಾಡಿದರೆ ಈ ರೀತಿಯ ಆದೇಶಗಳನ್ನು ಹೊರಡಿಸುವ ಮೂಲಕವಾಗಿ ಮಹಿಳಾ ಸ್ವಾತಂತ್ರ್ಯದ ಮೇಲೆ ಇಡೀ ವ್ಯವಸ್ಥೆಯೇ ಅತ್ಯಾಚಾರ ಮಾಡುತ್ತದೆ ಎಂದ ಮೇಲೆ ನಮ್ಮ ದೇಶದಲ್ಲಿನ ಕಾನೂನು ಸೂವ್ಯವಸ್ಥೆಯನ್ನು ದೂಷಿಸಬೇಕೋ, ಇಲ್ಲ ನಮ್ಮ ದೌಭರ್ಾಗ್ಯವನ್ನು ನೆನದು ಕಣ್ಣೀರಿಡಬೇಕೋ ತಿಳಿಯುತ್ತಿಲ್ಲ. ಇಂದು ಕಾಲೇಜು ಆವರಣದಲ್ಲಿ ಸಂಚಾರ ಮಾಡಬೇಡಿ ಎನ್ನುತ್ತಾರೆ. ನಾಳೆ ಮನೆಯಿಂದಲೇ ಹೊರ ಬರಬೇಡಿ ಎನ್ನುತ್ತಾರೆ.
ಇದನ್ನು ನೋಡಿ ನಾಚಿಕೆಯಾಗುತ್ತಿದೆ. ಮಹಿಳೆಯರನ್ನು ರಕ್ಷಿಸಿ, ಕಾನೂನು ಸೂವ್ಯವಸ್ಥೆ ಕಾಪಾಡುವ ಬದಲು ಮಹಿಳೆಯನ್ನೇ ಬಂಧಿಸಿಡುವ ವ್ಯವಸ್ಥೆಗೆ ನನ್ನ ಧಿಕ್ಕಾರವಿರಲಿ. ಒಂದು ಕಾಲದಲ್ಲಿ ಸ್ತ್ರೀಯು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂದು ಮನೆಯಲ್ಲಿಯೇ ಕೂಡಿ ಹಾಕುವ ವ್ಯವಸ್ಥೆ ಜಾರಿಯಾಗಿತ್ತು. ಇಂದು ಅದರ ಇನ್ನೊಂದು ರೂಪವಾಗಿ ಇಂಥಹ ಆದೇಶಗಳು ಜಾರಿಯಾಗುತ್ತಿವೆ ಎಂದ ಮೇಲೆ ಮಹಾತ್ಮಾ ನೀನೆ ಹೇಳು ಈ ದೇಶಕ್ಕೆ ಎಂಥಹ ಸ್ವಾತಂತ್ರ್ಯ ಸಿಕ್ಕಿದೆ ಎಂದು?
ದೆಹಲಿಯಲ್ಲಿ ನಿರ್ಭಯಾಳ ಮೇಲೆ ದೌರ್ಜನ್ಯ ನಡೆದಾಗ ಕೆಲವು ಜನ ಬೇಕಾಬಿಟ್ಟಿ ಹೇಳಿಕೆ ಕೊಟ್ಟು ಪ್ರಚಾರ ಗಿಟ್ಟಿಸಿಕೊಂಡರು. ಮಹಿಳೆಯರು ತೊಟ್ಟುಕೊಳ್ಳುವ ಉಡುಪುಗಳನ್ನು ಟಾಗರ್ೇಟ್ ಮಾಡಿ ಮಾತನಾಡಿದರು. ಸ್ವಾತಂತ್ರ್ಯ ಎನ್ನುವುದನ್ನು ಸ್ವೇಚ್ಚಾಚಾರಕ್ಕೆ ತಿರುಗಿದ್ದರ ಪರಿಣಾಮವೇ ಈ ಅತ್ಯಾಚಾರಗಳು ಹೆಚ್ಚುತ್ತಿವೆ ಎಂದು ಹೇಳಿದರು. ಅತ್ಯಾಚಾರ ಪ್ರಕರಣಗಳು ಸವರ್ೇ ಸಾಮಾನ್ಯ ಎಂದು ಉಡಾಫೆಯಾಗಿ ಮಾತನಾಡಿದರು. ಅದೇ ರೀತಿಯಾಗಿ ಇಂದು ನಡೆದ ಘಟನೆಯನ್ನು ಸಹ ರಾಜಕೀಯ ದಾಳವಾಗಿ ಬಳಸಿಕೊಳ್ಳಲು ಹಾಗೂ ಪರಸ್ಪರ ಕೆಸರು ಎರೆಚಲು ಬಳಕೆ ಮಾಡಿಕೊಳ್ಳುತ್ತಿರುದು ವಿಷಾಧದ ಸಂಗತಿ. ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಇಂಥಹ ಘಟನೆಗಳು ನಡೆದಿಲ್ಲ ಎಂದು ವಿರೋಧ ಪಕ್ಷ ಹೇಳುತ್ತ ಆಡಳಿತ ಪಕ್ಷದ ವೈಫಲ್ಯವನ್ನು ಎತ್ತಿ ತೋರಿಸುವ ಕಾರ್ಯ ಮಾಡುತ್ತಿದೆ. ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಆಡಳಿತ ಪಕ್ಷ ಹಿಂದಿನ ಸಕರ್ಾದಲ್ಲಿ ನಡೆದ ಘಟನೆಗಳನ್ನು ಎತ್ತುತ್ತ ತೋಚಿದ್ದನ್ನು ಹರಟುತ್ತಿದೆ. ಆದರೆ ನಿಜಕ್ಕೂ ಇದಕ್ಕೆಲ್ಲ ಕೇವಲ ಪಕ್ಷಗಳ ವೈಫಲ್ಯ ಕಾಣವೇ? ಅಂದರೆ ಆಗುವ ಎಲ್ಲವನ್ನು ನಾವು ಆಡಳಿತ ಮಾಡುವ ಸಕರ್ಾರದ ಮೇಲೆ ಹಾಕಿ ಕೈ ಕಟ್ಟಿ ಕೂತರೆ ಮುಗಿದ ಹೋಯಿತೆ? ನಾವುಗಳು ಮಾಡುವ ಈ ತಪ್ಪಿನಿಂದಲೇ ಇಂಥ ಸಮಸ್ಯೆಗಳು ದಿನ ದಿನವೂ ಹೆಚ್ಚುತ್ತಿವೆ. ಯಾವುದಾದರೂ ಘಟನೆ ನಡೆದಾಗ ಅದರ ಕುರಿತು ಉಗ್ರವಾಗಿ ಹೋರಾಟ ಮಾಡುವ ನಾವುಗಳು ಕೆಲವು ದಿನಗಳಲ್ಲಿ ಮರೆತು ತಣ್ಣಗೆ ಕುಳಿತುಕೊಳ್ಳುತ್ತೇವೆ. ಮತ್ತೊಂದು ಘಟನೆ ನಡೆದಾಗಲೇ ನಮಗೆ ಈ ದೇಶದಲ್ಲಿ ಬದಲಾವಣೆಗಳಾಗಬೇಕಿದೆ ಎನ್ನುವುದರ ಅರಿವಾಗುತ್ತದೆ. ಅಷ್ಟರಲ್ಲಿ ಬೇರಾವುದಾದರೂ ಘಟನೆ ನಡೆದರೆ ಅದನ್ನು ಬಿಟ್ಟು ಬೇರಾವುದಕ್ಕೋ ಕೂಗಾಡುವುದು ಸವರ್ೇ ಸಾಮಾನ್ಯವಾಗಿ ಬಿಟ್ಟಿದೆ. ಅದನ್ನು ಬಿಟ್ಟು ಅತ್ಯಾಚಾರ ಪ್ರಕರಣ ಸಾಬೀತಾಗುತ್ತಲೇ ಎನ್ಕೌಂಟರ್ ಮಾಡುವಂತ ಖಡಕ್ ಕಾನೂನು ರಚನೆಯಾದರೆ ಅಲ್ಪ ಸ್ವಲ್ಪವಾದರೂ ಭಯದಿಂದ ಇಂಥ ಭಯಾನಕ ಪ್ರಕರಣಗಳು ಕಡಿಯಾಗಬಹುದು. ಆದರೆ ಎಲ್ಲದಕ್ಕೂ ಸಕರ್ಾರ ಕಾರಣ ಎನ್ನುವುದಕ್ಕಿಂತ ನಮ್ಮ ಮಕ್ಕಳನ್ನು ಬೆಳೆಸುವಾಗ ಸಂಸ್ಕಾರ ಕಲಿಸಿಕೊಡಬೇಕಿದೆ. ಸಕರ್ಾರವನ್ನು ಆಯ್ಕೆ ಮಾಡುವಾಗ ಉತ್ತಮ ಜ್ಞಾನ ಇರುವವರನ್ನು ಆಯ್ಕೆ ಮಾಡಬೇಕಿದೆ. ಅದನ್ನು ಬಿಟ್ಟು ಜಾತಿ ಧರ್ಮ ಪ್ರತಿಷ್ಠೆಗಾಗಿ ಮತ ಮಾರಿಕೊಂಡರೆ ಈ ದೇಶದಲ್ಲಿ ಯಾವುದೇ ಬದಲಾವಣೆಯಾಗುವುದಕ್ಕೆ ಸಾಧ್ಯವಾಗುವುದಿಲ್ಲ.
ಮಹಾತ್ಮ ಗಾಂಧೀಜಿ ಈ ದೇಶದ ಕುರಿತು ರಾಮರಾಜ್ಯದ ಕನಸು ಕಾಣುತ್ತಿದ್ದರು. ಆದರೆ ಇಂದು ಅದ್ಯಾವುದು ನಡೆಯುತ್ತಿಲ್ಲ. ಎಲ್ಲವೂ ಸ್ವಾರ್ಥ, ದೌರ್ಜನ್ಯದಿಂದಲೇ ಕೂಡಿದೆ. ಆ ನಿಟ್ಟಿನಲ್ಲಿ ಬದಲಾವಣೆಯ ಗಾಳಿ ಭಾರತದಲ್ಲಿ ಬೀಸಬೇಕೆಂದರೆ ನಮ್ಮಲ್ಲಿ ಮೌಲ್ಯ ಶಿಕ್ಷಣ ನೀಡಬೇಕಿದೆ. ಮಶಿನ್ಗಳಿಂದ ಬೋಧನೆ ಮಾಡುತ್ತ ಭಾವನೆಗಳೇ ಇಲ್ಲದ ರೋಬೊಟ್ಗಳನ್ನು ತಯಾರಿಸುವ ಕಾರ್ಯದಿಂದ ವಿಮುಖವಾಗಿ ಮೌಲ್ಯ ಬೆಳೆಸುವ ಕಾರ್ಯ ನಡೆದಾಗ ಮಾತ್ರ ಕೊಂಚ ಬದಲಾವಣೆ ಸಾಧ್ಯ.
ಇಲ್ಲದೇ ಹೋದಲ್ಲಿ ಬಾಪೂ ಕಂಡ ಕನಸು ಕೈಗೂಡದೇ ಹೋದರೆ, ಅವರು ಹೇಳಿದ ಮಾತುಗಳು ನಿಜವಾಗದೇ ಹೋದರೆ ಉತ್ತರ ಕೊಡು ಎಂದು ನಾನು ಮತ್ತೆ ಅವರನ್ನೇ ಪ್ರಶ್ನಿಸಬೇಕು. ಏಕೆಂದರೆ ಈ ದೇಶದಲ್ಲಿ ನಾನು ಕೇಳುವ ಪ್ರಶ್ನೆಗೆ ನಮ್ಮವರ್ಯಾರು ಉತ್ತರ ಕೊಡುವುದಿಲ್ಲ. ಕಾರಣ ನಾವೆಲ್ಲ ವ್ಯವಸ್ಥೆಯ ಭಾಗವಾಗಿಯೇ ಹೋಗಿರುವಾಗ ಉತ್ತರ ಕೊಡಬೇಕಾದವರು ಯಾರು? ನಮ್ಮಂತವರ ಕೈಯಲ್ಲಿ ದೇಶ ಕೊಟ್ಟು, ಅದರಲ್ಲಿ ಬದುಕುವುದಕ್ಕೆ ಸ್ವಾತಂತ್ರ್ಯದ ಹೆಸರಿಟ್ಟು ಹೋದ ಬಾಪೂನಂತವರೇ ಅಲ್ಲವೇ? ಅದಕ್ಕೆ ಹೇಳಿದ್ದು ಬಾಪೂ ಈ ಎಲ್ಲ ಪ್ರಶ್ನೆಗಳಿಗೂ ಬಂದು ನೀನೆ ಉತ್ತರ ಕೊಡು ಎಂದು.