ಮುಂದಗೋಡ

ಮೋಡ ಕವಿದ ವಾತಾವರಣ, ಸುರಿಯುತ್ತಿರುವ ಮಳೆ: ಗೋವಿನ ಜೋಳ ಒಣಗಿಸಲು ಆಗದೆ ರೈತರ ಪರದಾಟ

ಮೋಡ ಕವಿದ ವಾತಾವರಣ, ಸುರಿಯುತ್ತಿರುವ ಮಳೆ: ಗೋವಿನ ಜೋಳ ಒಣಗಿಸಲು ಆಗದೆ ರೈತರ ಪರದಾಟ


ಲೋಕದರ್ಶನ ವರದಿ 

ಮುಂಡಗೋಡ: ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಮೋಡ ಕವಿದಿರುವ ವಾತಾವರಣ ಮತ್ತು ಆಗಾಗ ಸುರಿಯುತ್ತಿರುವ ಮಳೆಯಿಂದಾಗಿ ಬೇಸಿಗೆ ಬೆಳೆಯಾಗಿ ಬೆಳೆದ ಗೋವಿನ ಜೋಳದ ಕಾಳುಗಳನ್ನು ಒಣಗಿಸಲು ಆಗದೆ ರೈತರು ಪರದಾಡುತ್ತಿದ್ದಾರೆ. 

ಕ್ಯಾಸನಕೇರಿ ಗ್ರಾಮದ ಶಿವಾನಂದ ಬಿಸವಣ್ಣವರ ತಮ್ಮ ಸುಮಾರು 5 ಎಕರೆಯಷ್ಟು ಹೊಲದಲ್ಲಿ ಬೆಳೆದ ಗೋವಿನ ಜೋಳದ ಬೆಳೆ ಕಟಾವು ಮಾಡಿ ಸುಮಾರು 15 ದಿನಗಳಾದವು. 130 ಕ್ವಿಂಟಾಲ್‌ನಷ್ಟು ಗೋವಿನ ಜೋಳದ ಕಾಳುಗಳನ್ನು ಹೊಲದಲ್ಲಿ ರಾಶಿ ಮಾಡಿಕೊಂಡು ಅಲ್ಲಿ ಒಣಗಿಸಲು ಆಗದೆ ತಂದು ಎಪಿಎಮ್‌ಸಿ ಆವರಣದಲ್ಲಿ ಹಾಕಿದರು. ಬಹಳಷ್ಟು ರೈತರು ಗೋವಿನ ಜೋಳದ ಕಾಳುಗಳನ್ನು ಅಲ್ಲಿ ಒಣಗಿಸಲು ಹಾಕಿದ್ದು ಸ್ಥಳದ ಅಭಾವದಿಂದ ಅಲ್ಲಿಂದ ಪಟ್ಟಣದ ಬಂಕಾಪುರ ರಸ್ತೆಯ ಬದಿಗೆ ಒಣಗಿಸಲು ಹಾಕಿದ್ದಾರೆ. ಅದೇ ರೀತಿ ನ್ಯಾಸರ್ಗಿ ಗೌಳಿ ದಡ್ಡಿಯ ವಿಠ್ಠಲ ಜೋರೆ 2 ಎಕರೆ ಜಮೀನಿನಲ್ಲಿ ಬೆಳೆದ 65 ಕ್ವಿಂಟಾಲ್‌ನಷ್ಟು ಗೋವಿನ ಜೋಳದ ಕಾಳುಗಳನ್ನು ಒಣಗಿಸಲು ಹಾಕಿ 8 ದಿನಗಳಾಗಿದ್ದವು.         

ಬಲಿತ ತೆನೆಗಳು ಕಳೆದ 2-3 ದಿನಗಳಿಂದ ಬಿದ್ದ ಬಿಸಿಲಿಗೆ ಚೆನ್ನಾಗಿ ಒಣಗಿದ್ದವು. ಇನ್ನೇನು ತುಂಬಬೇಕು ಎನ್ನುವಷ್ಟರಲ್ಲಿ ಸೋಮವಾರ ಜೋರಾದ ಮಳೆ ಬಂದು ಗೋವಿನ ಜೋಳದ ಕಾಳಿನ ರಾಶಿಯಲ್ಲಿ ನೀರು ಹೊಕ್ಕಿದೆ. ರಾಶಿಯ ಮೇಲೆ ತಾಡಪತ್ರಿ ಹೊದಿಕೆ ಹಾಕಿದ್ದರೂ ಪ್ರಯೋಜನವಾಗಲಿಲ್ಲ. ಮಳೆ ನೀರಿಗೆ ತೊಯ್ದ ಕಾಳುಗಳು ಮೊಳಕೆಯೊಡೆಯಲು ಆರಂಭಿಸುತ್ತವೆ. ಬಿಸಿಲಿಗೆ ಚೆನ್ನಾಗಿ ಒಣಗಿದರೆ ಮಾತ್ರ ವ್ಯಾಪಾರಸ್ಥರು ಖರೀದಿ ಮಾಡುತ್ತಾರೆ. ಕಾಳುಗಳು ಹಸಿಯಾಗಿದ್ದರೆ ಬೇಡವೆನ್ನುತ್ತಾರೆ. ಬಿಸಿಲು ಬಾರದೆ ಮಳೆ ಸತತ ಹೀಗೆಯೇ ಮುಂದುವರಿದರೆ ಕಷ್ಟಪಟ್ಟು ಬೆಳೆದು ಕಟಾವು ಮಾಡಿ ಒಣಗಿಸಲು ಹಾಕಿದ ಗೊವಿನ ಜೋಳದ ಕಾಳುಗಳು ತೊಯ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ ಎಂದು ಶಿವಾನಂದ ಮತ್ತು ವಿಠ್ಠಲ ತಮ್ಮ ಗೋಳು ತೋಡಿಕೊಂಡರು. 


ಸುದ್ದಿ ಓದಿ