ತಾಳಿಕೋಟಿ

ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು

ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು
ತಾಳಿಕೋಟೆ ತಾಲೂಕಿನ ಗುತ್ತಿಹಾಳ ಗ್ರಾಮದಲ್ಲಿ ಬಾಂದಾರ ನಿರ್ಮಾಣ ಕಾಮಗಾರಿಗೆ ಶಾಸಕ ಸೋಮನಗೌಡ ಪಾಟೀಲ ಭೂಮಿ ಪೂಜೆ ಸಲ್ಲಿಸಿದ

ತಾಳಿಕೋಟೆ 20: ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಜಾರಿಗೆ ತಂದ ಜಲಜೀವನ ಮಿಷನ್ ಅಡಿಯಲ್ಲಿ ದೇವರಹಿಪ್ಪರಗಿ ಮತಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಪ್ರತಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಹೇಳಿದರು. 

ತಾಲೂಕಿನ ಮೈಲೇಶ್ವರ ಗ್ರಾಮದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ವತಿಯಿಂದ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. 

ಅತಿ ಹಿಂದುಳಿದ ಕ್ಷೇತ್ರವಾದ ದೇವರ ಹಿಪ್ಪರಗಿ ಮತಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರತಿ ಹಳ್ಳಿಗಳಿಗೂ ಕನಿಷ್ಠ 1 ಕೋಟಿ ಅನುದಾನ ಒದಗಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಸತತವಾಗಿ ಬರಗಾಲದಿಂದ ಕೆಂಗೆಟ್ಟಿದ್ದ ಕ್ಷೇತ್ರದಲ್ಲಿ ಅಂತರ್ಜಲ ಹೆಚ್ಚಳಕ್ಕೆ ಕ್ರಮ ಕೈಗೊಂಡಿದ್ದೇನೆ. ಕ್ಷೇತ್ರದ ಎಲ್ಲ ಕೆರೆಗಳನ್ನು ತುಂಬಿಸಿದ್ದೇನೆ. ಅದರಂತೆ ಕೆಲವು ಕಡೆಗಳಲ್ಲಿ ಹಳ್ಳಗಳಿಗೆ ಬಾಂದಾರ ನಿರ್ಮಿಸಿ ನೀರು ಹಿಡಿದಿಡುವಂತಹ ಕೆಲಸ ಮಾಡಲಾಗುತ್ತಿದೆ. ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಬಹಳ ಮುಖ್ಯವಾಗಿದೆ. ಕಾಮಗಾರಿ ನಡೆಯುವ ಸಮಯದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೂ ನನ್ನ ಗಮನಕ್ಕೆ ತನ್ನಿ, ಈಗಾಗಲೇ ಗುತ್ತಿಗೆ ದಾರನಿಗೆ ಅಚ್ಚುಕಟ್ಟಾಗಿ ನಿರ್ವಹಿಸಲು ಸೂಚಿಸಲಾಗಿದೆ ಎಂದರು. 

ಬಿಜೆಪಿ ಮುಖಂಡ ಸಂಗನಗೌಡ ಹೆಗರಡ್ಡಿ, ಸಮಾಜ ಸೇವಕ ಪ್ರಶಾಂತ ಹಾವರಗಿ ಮಾತನಾಡಿದರು. 

ಕಾರ್ಯಕ್ರಮದ ನಂತರ ಗುತ್ತಿಹಾಳ ಗ್ರಾಮದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ 4702 -ನಾನ್‌-ನಬಾರ್ಡ್‌ ಲೆಕ್ಕ ಶೀರ್ಷಿಕ ಯೋಜನೆಯಡಿ 150 ಕೋಟಿ ರೂ. ವೆಚ್ಚದಲ್ಲಿ ಬಾಂದಾರ ನಿರ್ಮಾಣ ಕಾಮಗಾರಿಗೂ ಸಹ ಚಾಲನೆ ನೀಡಲಾಯಿತು. 

ಮಾಜಿ ತಾಪಂ ಸದಸ್ಯರಾದ ಸೋಮನಗೌಡ ಹಾದಿಮನಿ, ಬಸನಗೌಡ ಬಿರಾದಾರ, ಶಿವಲಿಂಗ ಕುಳಗೇರಿ, ಶರಣಪ್ಪ ಇಲಕಲ್ಲ, ಸಂಗು ಕಲ್ಬುರ್ಗಿ, ಶರಣಪ್ಪ ಕುಳಗೇರಿ, ದೇವೇಂದ್ರ, ಕುಳಗೇರಿ, ಮಲ್ಲಪ್ಪ ಕಲ್ಬುರ್ಗಿ, ಶಂಕರಲಿಂಗ ಚೌದ್ರಿ, ಬಾಳಾಸಾಬ ಕೋರಿ, ಕೆಬಿಜೆಎನ್‌ಎಲ್ ಅಧಿಕಾರಿ ಎನ್‌.ಡಿ.ಮಸೂತಿ, ಶಂಕರಗೌಡ ದೇಸಾಯಿ, ಬಸನಗೌಡ ಪಾಟೀಲ, ಶಿವನಗೌಡ ಗೊಟಗುಣಕಿ, ಸಾಹೇಬಗೌಡ ಪಾಟೀಲ, ತಿಪನಗೌಡ ಪಾಟೀಲ, ಶೇಕರಗೌಡ ತಂಗಡಗಿ, ಸಾಹೇಬಗೌಡ ಗೊಟಗುಣಕಿ, ಮುತ್ತುಗೌಡ ಮಾಳಿ, ಕುಮಾರಗೌಡ ದೊಡಮನಿ, ಸಿದ್ದನಗೌಡ ಬಿರಾದಾರ, ಶಂಕರಗೌಡ ನಾಯ್ಕಲ್, ಪಂಚಾಕ್ಷರಯ್ಯ ಹಿರೇಮಠ, ಬಸನಗೌಡ ನಾಡಗೌಡ, ವಿಶ್ವನಾಥರೆಡ್ಡಿ ನಾಡಗೌಡ, ಸಣ್ಣ ನೀರಾವರಿ ಇಲಾಖೆಯ ಎಸ್‌.ಎನ್‌. ಚೌದ್ರಿ ಸೇರಿದಂತೆ ಇತರರು ಇದ್ದರು. 

ಸುದ್ದಿ ಓದಿ