ಶಾಸ್ತ್ರೀಯ ಸಂಗೀತ ದಿಗ್ಗಜ ಪಂ. ಕುಮಾರ ಗಂಧರ್ವ
ಜೀವನವೇ ಸಂಗೀತ, ಸಂಗೀತವೇ ಜೀವನ ಎಂಬ ಮಾತು ಹೇಳಿಸಿಕೊಳ್ಳುವಂಥ ಸಂಗೀತಗಾರರು ಬಹಳ ವಿರಳ. ಆದರೆ ಅತೀ ವಿರಳವೆನ್ನುವ ಕೆಲವೇ ಸಂಗೀತಗಾರರಲ್ಲಿ ಕುಮಾರ ಗಂಧರ್ವರು ಒಬ್ಬರು. ಸೋಜಿಗವೆಂದರೆ ಅವರ ಹೆಸರಿನಲ್ಲಿಯೇ ಸಂಗಿತ ತುಂಬಿಕೊಂಡಿದೆ. ಸಂಗೀತಕ್ಕೆ ಅನ್ವರ್ಥಕವೆನಿಸುವ ಹೆಸರು ಅವರದು. ಅಸಾಧಾರಣ ಗಾಯಕರಲ್ಲದೇ, ಅವರು ಸಂಗೀತ ಶಾಸ್ತ್ರಜ್ಞರೂ ಆಗಿದ್ದರು. ಪಂ.ಕುಮಾರ ಗಂಧರ್ವ ಅವರು ಭಾರತದ ಅತ್ಯಂತ ಪ್ರಸಿದ್ಧ ಹಿಂದೂಸ್ತಾನಿ ಶಾಸ್ತ್ರಿಯ ಗಾಯಕರಲ್ಲಿ ಒಬ್ಬರು.
ಕುಮಾರ ಗಂಧರ್ವ ಅವರು ಬೆಳಗಾವಿ ಜಿಲ್ಲೆಯ ಸುಳೇಭಾವಿ ಗ್ರಾಮದಲ್ಲಿ ಎಪ್ರೀಲ್ 8, 1924ರಂದು ಜನಿಸಿದರು. ತಂದೆ ಸಿದ್ಧರಾಮಯ್ಯ ಸಂಗೀತಗಾರರಾಗಿದ್ದರು. ಅವರ ಸೋದರಮಾವ ಕಲ್ಲಯ್ಯಸ್ವಾಮಿ ಸಂಬರಗಿಮಠರವರು ವೆಂಕೋಬರಾಯರ ನಾಟಕ ಕಂಪನಿ, ವಾಮನರಾವ ಮಾಸ್ತರರ ನಾಟಕ ಕಂಪನಿ ಮತ್ತು ಸೀಮಿಕೇರಿ ನಾಟಕ ಕಂಪನಿಗಳಲ್ಲಿ ಗಾಯಕನಟರಾಗಿದ್ದರು. ಹೀಗಾಗಿ ಹುಟ್ಟಿನಿಂದಲೇ ಅವರ ಮನೆಯಲ್ಲಿ ಸಂಗೀತದ ವಾತಾವರಣವಿತ್ತು. ಬಾಲ್ಯದಲ್ಲಿ ಅವರ ಹೆಸರು ಶಿವಪುತ್ರ ಸಿದ್ಧರಾಮಯ್ಯ ಕೊಂಕಲಿಮಠ ಎಂಬುದಾಗಿತ್ತು. ಬಾಲಕ ಶಿವಪುತ್ರ ಐದನೆಯ ವಯಸ್ಸಿನಲ್ಲಿಯೇ ಸವಾಯಿ ಗಂಧರ್ವರ ಗಾಯನ ಕಾರ್ಯಕ್ರಮಕ್ಕೆ ಹೋಗಿ, ಮನೆಗೆ ವಾಪಸ್ಸಾಗುವವಾಗ ಬಸಂತ್ರಾಗದ ಬಂದಿಶ್ನ್ನು ತಾನ ಮತ್ತು ಅಲಾಪದೊಂದಿಗೆ ಅನುಕರಿಸುವದನ್ನು ತಂದೆಯವರು ನೋಡಿ ದಿಗ್ಭ್ರಮೆಗೊಳಗಾದರು. ಆರು ವರ್ಷದ ಬಾಲಕನ ಗಾಯನವನ್ನು ಕೇಳಿ, ಗುರು ಕಲ್ಮಠದ ಶಾಂತವೀರ ಸ್ವಾಮಿಗಳು 'ಕುಮಾರ ಗಂಧರ್ವಎಂದು ನಾಮಕರಣ ಮಾಡಿದರು.
ಮಗನಲ್ಲಿಯ ಸಂಗೀತದ ಪ್ರತಿಭೆಯನ್ನು ಮನಗಂಡ ಸಿದ್ಧರಾಮಯ್ಯನವರು, 10ನೆಯ ವಯಸ್ಸಿನಲ್ಲಿ ಮುಂಬೈನ ಒಪೇರಾ ಹೌಸ್ನಲ್ಲಿಯ ಪ್ರೊ. ಬಿ.ಆರ್. ದೇವಧರ್ ಅವರ ಸಂಗೀತ ಶಾಲೆಗೆ ಸೇರಿಸಿದರು. ಕುಮಾರ ಗಂಧರ್ವ 1933 ರಿಂದ 1943ರವರೆಗೆ ದೇವಧರ ಅವರಲ್ಲಿ ಸಂಗೀತಾಭ್ಯಾಸ ಮಾಡಿದರು. ಅವರು ದೇವಧರ್ ಸ್ಕೂಲ್ ಆಫ್ ಮ್ಯೂಸಿಕ್ನಲ್ಲಿ ಗುರುಗಳಿಂದ ಆಗಾಗ್ಗೆ ಮೆಚ್ಚುಗೆ ಪಡೆಯುತ್ತಿದ್ದರು. ಕುಮಾರ ಗಂಧರ್ವರು ಗುರುಗಳ ಅನುಪಸ್ಥಿತಿಯಲ್ಲಿ ಇತರ ವಿದ್ಯಾರ್ಥಿಗಳಿಗೆ ಸಂಗೀತ ಕಲಿಸುತ್ತಿದ್ದರು. ನಂತರ ಅವರು ಅಂಜನಿಬಾಯಿ ಮಾಲ್ಪೆಕರ ಅವರಲ್ಲಿ ಸಂಗೀತ ಕಲಿತರು.
ಆ ಕಾಲದಲ್ಲಿ ಕುಮಾರ ಗಂಧರ್ವರು 'ತುಮ್ ಬಿನ್ ಮೋರಿ ಕೌನ್ ಬಬರ್ಲೆ' ಎಂಬ ಚೀಜನ್ನು ಶೃದ್ಧೆಯಿಂದ ಹಾಡುತ್ತಿದ್ದನ್ನು ಜೆ.ವಿ.ಎಚ್.ವಾಡಿಯಾ ಅವರು ಚಿತ್ರೀಕರಣ ಮಾಡಿಕೊಂಡಿದ್ದರು. ಕುಮಾರ ಗಂಧರ್ವರು ಯಾವದೇ ಧ್ವನಿಯನ್ನು ಕೇಳಲಿ, ಅದಕ್ಕೆ ರಾಗವನ್ನು ಒದಗಿಸಿಕೊಡುವದು ಅವರ ವಿಶೇಷತೆಯಾಗಿತ್ತು. ಅವರು ಬರೀ ಹಾಡುಗಾರರಲ್ಲ, ಸೃಜನಶೀಲ ಸಂಗೀತಗಾರರು.
ಕುಮಾರ ಗಂಧರ್ವ ಅವರು ಎಪ್ರೀಲ್ 1947ರಲ್ಲಿ ಭಾನುಮತಿ ಅವರನ್ನು ವಿವಾಹವಾದರು. ಭಾನುಮತಿಯವರು ಸಹ ಉತ್ತಮ ಗಾಯಕಿಯಾಗಿದ್ದರು. ಕುಮಾರ ಗಂಧರ್ವರ ಸಂಗೀತಕ್ಕೆ ಮಾರುಹೋಗಿದ್ದ ಮಧ್ಯಪ್ರದೇಶದ ದೇವಾಸದ ದೊರೆಯು, ಗಂಧರ್ವರನ್ನು ತಮ್ಮ ರಾಜ್ಯಕ್ಕೆ ಕರೆದುಕೊಂಡು ಹೋದರು. ವಿಚಿತ್ರವೆಂದರೆ, ದೇವಾಸಕ್ಕೆ ಹೋದ ಮೇಲೆ ಕುಮಾರ ಗಂಧರ್ವರು ಕ್ಷಯರೋಗದಿಂದ ಬಳಲಿದರು. ಭಾನುಮತಿಯವರು ದೇವಾಸ್ನ ಸಂಗೀತ ಶಾಲೆಯಲ್ಲಿ ಪಾಠ ಮಾಡಿ ಮನೆಯನ್ನು ನಡೆಸುತ್ತಿದ್ದರು. ಕ್ಷಯರೋಗದಿಂದ ಅವರ ಒಂದು ಶ್ವಾಸಕೋಶವು ತೀವ್ರವಾಗಿ ಹಾನಿಗೊಳ್ಳಲ್ಪಟ್ಟಿತ್ತು. ಭಾನುಮತಿಯರ ಆರೈಕೆ ಮತ್ತು ವೈದ್ಯರ ಅವಿರತ ಪ್ರಯತ್ನದಿಂದ, ಗಂಧರ್ವರು 6 ವರ್ಷಗಳಲ್ಲಿ ಚೇತರಿಸಿಕೊಂಡರು.
ಕ್ಷಯದಿಂದ ಚೇತರಿಸಿಕೊಂಡ ನಂತರ ವೈದ್ಯರು ಗಂಧರ್ವರಿಗೆ ಹಾಡಲು ಅನುಮತಿ ನೀಡಿದರು. 1953ರಲ್ಲಿ ನಡೆದ ಮೊದಲ ಸಂಗೀತ ಕಚೇರಿಯಲ್ಲಿ ಹಲವು ವರ್ಷಗಳಿಂದ ಹಿಡಿದಿಟ್ಟಿದ್ದ ಸಂಗೀತ ಕೋಡಿಯಾಗಿ ಹರಿಯಿತು. ಅಂದು ಅವರು ಹಾಡಿದ ಮಾಲವತಿರಾಗವು ಅನುಪಮವಾಗಿತ್ತು. 1955ರಲ್ಲಿ ಕುಮಾರ ಗಂಧರ್ವ ದಂಪತಿಗಳಿಗೆ ಮೊದಲ ಮಗು ಮುಕುಲ್ ಜನಿಸಿತು. ಎಲ್ಲವೂ ಚೆನ್ನಾಗಿಯೇ ನಡೆದಿತ್ತು. ದುರದೃಷ್ಟವಶಾತ 1961ರಲ್ಲಿ ಭಾನುಮತಿಯವರು ಎರಡನೆಯ ಮಗುವಿನ ಹೆರಿಗೆಯ ಸಮಯದಲ್ಲಿ ನಿಧನರಾದರು.
ನಂತರ ಕುಮಾರ ಗಂಧರ್ವ ಅವರು ದೇವಧರ್ ಸಂಗೀತ ಶಾಲೆಯ ಶಿಷ್ಯೆಯಾದ ಗೋಕರ್ಣದ ವಸುಂಧರಾ ಶ್ರೀಖಂಡೆಯವರನ್ನು ಮದುವೆಯಾದರು. ವಸುಂಧರಾ ಅವರು ಗಂಧರ್ವರ ಎಲ್ಲಾ ಸಂಗೀತ ಕಛೇರಿಗಳಿಗೆ ಸಾಥ್ ಕೊಡುತ್ತಿದ್ದರು. ಅವರು ಉತ್ತಮ ಗಾಯಕಿಯಾಗಿ, ಕಲಾಪಿನಿ ಮಗಳಿಗೆ ಜನ್ಮಕೊಟ್ಟರು. ಕುಮಾರ ಗಂಧರ್ವ ಪರಂಪರೆಯನ್ನು ಅವರ ಮಗ ಮತ್ತು ಮಗಳು ಮುನ್ನಡೆಸುತ್ತಿದ್ದಾರೆ. ಅಲ್ಲದೇ ಅವರ ಮೊಮ್ಮಗ ಭುವನೇಶ್ ಕೂಡ ಶಾಸ್ತ್ರೀಯ ಗಾಯಕರಾಗಿ, ತಂದೆ ಮತ್ತು ಅಜ್ಜನ ಪರಂಪರೆಯನ್ನು ಮುಂದುವರೆಸುತ್ತಿದ್ದಾರೆ. ಕುಮಾರ ಗಂಧರ್ವರ ಅನೇಕ ಶಿಷ್ಯಂದಿರಾದ ಸತ್ಯಶೀಲ್ ದೇಶಪಾಂಡೆ, ಶುಭಾ ಮುದಗಲ್, ವಿಜಯ ಸರದೇಶಮುಖ ಮತ್ತು ಮಧುಪ್ ಮುದುಗಲ್ ಅವರೆಲ್ಲ ಗಂಧರ್ವರ ಗಾಯನ ಶೈಲಿಯನ್ನು ಅನುಸರಿಸಿ ಹೆಸರು ಗಳಿಸಿದ್ದಾರೆ. ಅವರ ಶಿಷ್ಯ ಪರಮಾನಂದ ಯಾದವರವರು ಮುಂಬೈಯಲ್ಲಿ ಕುಮಾರ ಗಂಧರ್ವ ಫೌಂಡೇಶನ್ನ್ನು ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತದಲ್ಲಿ ಮುನ್ನಡೆಸಿದ್ದಾರೆ. ಕುಮಾರ ಗಂಧರ್ವರ ಚಟುವಟಿಕೆಗಳನ್ನು ಅವರ ಸ್ನೇಹಿತ ಮತ್ತು ತಬಲಾವಾದಕ ವಸಂತ ಅಚರೇಕರ್ವರು ಸುದೀರ್ಘ ಕಾಲದವರೆಗೆ ನಿರ್ವಹಿಸಿದರು. 1950ರ ದಶಕದಲ್ಲಿ ವಸಂತ ದೇಸಾಯಿಯವರು ಸಹಾಯಕರಾಗಿದ್ದರು. ಕುಮಾರ ಗಂಧರ್ವರು ಹೆಸರಾಂತ ಮರಾಠಿ ಸಾಹಿತ್ಯ ದಂಪತಿಗಳಾದ ಪು.ಲ.ದೇಶಪಾಂಡೆ ಮತ್ತು ಸುನೀತ ದೇಶಪಾಂಡೆ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು.
ಕುಮಾರ ಗಂಧರ್ವರು ಸಾಂಪ್ರದಾಯಿಕ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಪ್ರಯೋಗಿಸುತ್ತಲೇ ಹಲವು ಹೊಸ ರಾಗಗಳಿಗೆ ಜೀವ ತುಂಬಿದರು. ಅವುಗಳನ್ನು 'ಧುನ್ ಉಗಮ ರಾಗಗಳು' ಎಂದು ಕರೆದರು. ಮಧ್ಸೂರ್ಜಾ, ಅಹಿಮೋಹಿನಿ, ಸಹೇಲಿ ತೋಡಿ, ಬೀಹದ್ ಭೈರವ್, ಲಗನ್ ಗಂಧರ್, ಸಂಜಾರಿ ಮತ್ತು ಮಾಳವತಿಯಂತಹ ಅನೇಕ ರಾಗಗಳನ್ನು ಮಹತ್ವಾಕಾಂಕ್ಷಿ ಸಂಗೀತಗಾರರು ಅಭ್ಯಸಿಸುತ್ತಿದ್ದಾರೆ. ಅವರು ಭಜನೆಗಳು, ಜಾನಪದ ಹಾಡು, ಭಕ್ತಿ ಗೀತೆಗಳಂತಹ ಸಂಗೀತದ ಇತರ ಪ್ರಕಾರಗಳನ್ನು ಪ್ರಯೋಗಿಸಿದರು. ಅವರು ಗೀತ ವರ್ಷ, ಗೀತ ಹೇಮಂತ್, ಗೀತ ವಸಂತ, ತ್ರಿವೇಣಿಯ ಸೂರದಾಸ, ಕಬೀರ ಮತ್ತು ಮೀರಾಭಜನಗಳ ಗುಚ್ಚಗಳನ್ನು ಋತುಮಾನಕ್ಕನುಗುಣವಾಗಿ ಹಾಡುತ್ತಿದ್ದರು.
ಅವರು ಸಂತರ ಆತ್ಮವನ್ನೇ ಪ್ರವೇಶಿಸಿರುವರೋ ಎನ್ನುವಂತೆ ಭಜನಗಳನ್ನು ಅಷ್ಟೊಂದು ಭಾವನಾತ್ಮಕವಾಗಿ ಹಾಡುತ್ತಿದ್ದರು. ಈಶ ಪ್ರಾರ್ಥನೆ, ಭಗವಾನ ಶಂಕರನ ಸ್ತುತಿ, ಸರಸ್ವತಿ ವಂದನೆ, ಗುರು ಮಹಿಮೆ, ಋತುಗಳ ವಿವರಣೆ ಮತ್ತು ಶ್ಯಾಮಸುಂದರ ಅವರ ಕೊಳಲು ಇತ್ಯಾದಿ ಗಂಧರ್ವರ ಬಂದೀಶಗಳ ಮುಖ್ಯ ವಿಷಯಗಳಾಗಿದ್ದವು. ಅವರು ಮೂನ್ನೂರಕ್ಕೂ ಹೆಚ್ಚು ಜಾನಪದ ಗೀತೆಗಳನ್ನು ಸಂಗ್ರಹಿಸಿ, ತಮ್ಮ ಟಿಪ್ಪಣಿಗಳನ್ನು ಮಾಡಿದರು.
ಅದರ ಪರಿಣಾಮವಾಗಿ ವಿವಿಧ ರಾಗಗಳು ಮತ್ತು ಉಗಮ ರಾಗಗಳು ಈಗ ಪ್ರಸಿದ್ಧವಾಗಿವೆ. ಈ ರಾಗಗಳನ್ನು ಕುಮಾರ ಗಂಧರ್ವ ಅವರ ಶ್ರೇಷ್ಠ ಕೃತಿ ಅನೂಪ್ರಾಗ ವಿಲಾಸದಲ್ಲಿ ಸಂಕಲಿಸಲಾಗಿದೆ.
ಸಂಗೀತ ಚಕ್ರವರ್ತಿ ಅಲಾದಿಯಾ ಖಾನರು ಬಾಲಕ ಕುಮಾರ ಗಂಧರ್ವರ ಹಾಡನ್ನು ಆಲಿಸಿ, ಭಲೇ ಹುಡುಗ ಎಂದು ಹಾರೈಸಿದ್ದರು. ಕುಮಾರ ಗಂಧರ್ವರಿಗೆ ಪದವಿ, ಪ್ರಶಸ್ತಿ, ಗೌರವ, ಜನಪ್ರಿಯತೆ ಎಲ್ಲವು ಹೇರಳವಾಗಿ ಲಭಿಸಿವೆ. ಭಾರತದ ಕೇಂದ್ರ ಸಕರ್ಾರವು 1977ರಲ್ಲಿ ಪದ್ಮಭೂಷಣ, 1990ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ಗಂಧರ್ವರಿಗೆ ನೀಡಿ ಗೌರವಿಸಿದೆ. ಅವರು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಶಿಖರ ಸನ್ಮಾನ, ಉಜ್ಜಯಿನಿ ವಿಶ್ವವಿದ್ಯಾಲಯದ ಡಿ.ಲಿಟ್, ಗಂಧರ್ವ ಮಹಾವಿದ್ಯಾಲಯದ ಡಾಕ್ಟರ್ ಆಫ್ ಮೂಸಿಕ್ ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾದರು. ಶಬನಂ ವೀರಮಾನಿಯವರ ಒಂದು ಚಲನಚಿತ್ರವು ಕುಮಾರ ಗಂಧರ್ವರ ಜೀವನ ಕಥೆಯನ್ನು ಹೊಂದಿದೆ.
ಭಾರತದ ಸರ್ಕಾರದ ಫಿಲ್ಮ್ ಸೊಸೈಟಿಯು 'ಹನ್ಸ್ ಅಕೇಲಾ' ಎಂಬ ಸಾಕ್ಷ್ಯ ಚಿತ್ರವನ್ನು ತಯಾರಿಸಿದ್ದು, ಕುಮಾರ ಗಂಧರ್ವರ ಅಸಾಧಾರಣ ಕಥೆಯನ್ನು ವಿವರಿಸುತ್ತದೆ. ಅವರ ನೆನಪಿನಲ್ಲಿ ಬೆಳಗಾವಿ ಜಿಲ್ಲಾಡಳಿತ ಕುಮಾರ ಗಂಧರ್ವ ರಂಗ ಮಂದಿರವನ್ನು ನಿರ್ಮಿಸಿದೆ. ಕುಮಾರ ಮಜಾ ಸಖಾ, ಗಾನಯೋಗಿ ಶಿವಪುತ್ರ, ಕುಮಾರ ಗಂಧರ್ವ-ಮುಕ್ಕಾಂ ವಾಶಿ, ಕುಮಾರ ಗಂಧರ್ವ ಏಕ ಸೃಜನಯಾತ್ರೆ, ಬಹುರಿ ಆಕೇಲಾ, ತರಹಿ ಏಕಾಕಿ ಹೀಗೆ ಹಲವು ಕೃತಿಗಳು ಅದರ ಕುರಿತು ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಪ್ರಕಟಗೊಂಡಿವೆ.
ಕುಮಾರ ಗಂಧರ್ವರ ಸಂಗೀತಕ್ಕೆ ಪಂಡಿತ ಪಾಮರರೆಲ್ಲರೂ ತಲೆದೂಗುತ್ತಾರೆ. ತಮ್ಮ ಸಂಗೀತದಂತೆಯೇ ಕುಮಾರ ಗಂಧರ್ವರು ಬಹು ಆಕರ್ಷಕವಾದ ವ್ಯಕ್ತಿತ್ವವನ್ನು ಹೊಂದಿದ್ದರು. ವಿಶಾಲವಾದ ಹಣೆ, ನೀಳವಾದ ಮೂಗು, ಎದ್ದು ಕಾಣುವ ಕಣ್ಣು, ನಿಂತು ಕೇಳಬೇಕೆನ್ನುವ ಧ್ವನಿ. ಅವರ ಸಂಗೀತ ಸಮ್ಮೋಹಿನಿಯಿಂದ ಹೊರಗುಳಿದವರೇ ಇಲ್ಲ. ಅವರು ಹಾಡಿದ ಕಬೀರರ ಭಜನೆಗಳು ನಮ್ಮನ್ನು ಆಧ್ಯಾತ್ಮಕ ಎತ್ತರಕ್ಕೆ ಕೊಂಡೊಯ್ಯುತ್ತವೆ.
ಅವರ ಭೀಮಪಲಾಸಿ ಮತ್ತು ಮಲ್ಕೋಶ್ ರಾಗಗಳನ್ನು ಯಾರೂ ಮರೆಯುವಂತಿಲ್ಲ. ಪಂಡಿತ ಕುಮಾರ ಗಂಧರ್ವರು ಜನೇವರಿ 12, 1992ರಂದು ಮಧ್ಯಪ್ರದೇಶದ ಅವರ ದೇವಾಸ್ ನಿವಾಸದಲ್ಲಿ ಕೊನೆಯುಸಿರೆಳೆದರು. ಜಾನಪದ ಸಂಗೀತವನ್ನು ಶಾಸ್ತ್ರೀಯವಾಗಿ ಕುಮಾರ ಗಂಧರ್ವರು ಹಾಡಿದ ರೀತಿಯಲ್ಲಿ ಹಾಡಲು ಯಾರಿಂದಲೂ ಸಾಧ್ಯವಿಲ್ಲ.