ಕೊರೊನಾ ಸಂಕಷ್ಟದ ಸ್ಥಿತಿಯಲ್ಲೂ ಪ್ರಮಾಣಿಕ ಸೇವೆ ಸಲ್ಲಿಸುತ್ತಿರುವ : ಪೌರ ಕಾರ್ಮಿಕರ ಸೇವೆ ಅನನ್ಯವಾದುದು: ನವಲಿಹಿರೇಮಠ
ಹುನಗುಂದ26: ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಪಟ್ಟಣದ ಸ್ವಚ್ಚತೆಯನ್ನು ಕಾಪಾಡುವ ಜೊತೆಗೆ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ತಮ್ಮ ಜೀವದ ಹಂಗು ತೊರೆದು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಪೌರ ಕಾರ್ಮಿಕರ ಸೇವೆ ಅನನ್ಯವಾದುದು.ಇವರೇ ನಿಜವಾದ ಕೊರೊನಾ ವಾರಿಯರ್ಸ್ ಎಂದು ಎಸ್.ಆರ್.ಎನ್.ಇ ಪೌಂಡೇಶನ್ದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ನವಲಿಹಿರೇಮಠ ಹೇಳಿದರು.
ಪಟ್ಟಣದ ಪುರಸಭೆ ಕಾರ್ಯಾಲಯದ ಆವರಣದಲ್ಲಿ ಎಸ್.ಆರ್.ಎನ್.ಇ ಪೌಂಡೇಶನ್ದ ವತಿಯಿಂದ ಹಮ್ಮಿಕೊಂಡಿದ್ದ ಕೊರೊನಾ ವಾರಿಯರ್ಸ್ಗಳಾದ ಪೌರ ಕಾರ್ಮಿಕರ ಸನ್ಮಾನ ಮತ್ತು ಆಹಾರ ಕಿಟ್ ವಿತರಣೆ ಮಾಡಿ ಮಾತನಾಡಿದರು. ಕೋವಿಡ್ ಎರಡನೆಯ ಅಲೆಯ ಅಬ್ಬರ ಜೋರಾಗಿದ್ದ ಸಮಯದಲ್ಲಿ ವಿವಿಧ ಇಲಾಖೆಯ ನೌಕರರು ಸೇರಿದಂತೆ ಸಾರ್ವಜನಿಕರು ಹೊರಬರಲು ಸಾಧ್ಯವಿಲ್ಲದ ಪರಸ್ಥಿತಿಯಲ್ಲೂ ಪೌರ ಕಾರ್ಮಿಕರು ತಮ್ಮ ಆರೋಗ್ಯ ಮತ್ತು ತಮ್ಮ ಕುಟುಂಬದವರ ಆರೋಗ್ಯವನ್ನು ಲೆಕ್ಕಿಸದೇ ಹೊರ ಬಂದು ಪಟ್ಟಣದ ಸ್ವಚ್ಚತೆಯಲ್ಲಿ ತೊಡಗಿಕೊಂಡು ಅಮೋಘ ಸೇವೆಯನ್ನು ಸಲ್ಲಿಸಿದ್ದಾರೆ. ನಾವು ಹೊರಗಡೆ ಇದ್ದು ನಿಮ್ಮ ಆರೋಗ್ಯದ ಸಲುವಾಗಿ ಸ್ವಚ್ಚತೆಯನ್ನು ಮಾಡುತ್ತಿದ್ದು ತಾವು ಮನೆಯಿಂದ ಹೊರಗೆ ಬರದೇ ಮನೆಯಲ್ಲಿದ್ದುಕೊಂಡು ನಿಮ್ಮ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಿ ಎಂದು ಜಾಗೃತಿ ಮತ್ತು ಸಾರ್ವಜನಿಕರಿಗೆ ಧೈರ್ಯವನ್ನು ಮೂಡಿಸುವ ಮೂಲಕ ಪೌರ ಕಾರ್ಮಿಕರು ನಿಜವಾದ ಕೊರೊನಾ ಸೈನಿಕರಾಗಿದ್ದಾರೆ. ಪೌರ ಕಾರ್ಮಿಕರು ನಿತ್ಯ ಹತ್ತಾರು ಸಮಸ್ಯೆಗಳಿದ್ದರೂ ಮತ್ತು ಅವರಿಗೆ ಸರಿಯಾದಸಮಯಕ್ಕೆ ಸಂಬಳವಾಗದಿದ್ದರೂ ಮತ್ತು ಕೆಲವು ಕಾರ್ಮಿಕರು ಪುರಸಭೆ ಕಾಯಂ ಕಾರ್ಮಿಕರಾಗಿದ್ದರೇ ಇನ್ನು ಕೆಲವು ಕಾರ್ಮಿಕರು ಗುತ್ತಿಗೆ ಆಧಾರಿತವಾಗಿ ಕೆಲಸ ಮಾಡುತ್ತಿದ್ದರೂ ಅವೆಲ್ಲವನ್ನು ಲೆಕ್ಕಿಸದೆ ಬದಿಗೊತ್ತಿ ಕಾಯಕವೇ ಕೈಲಾಸ ಎಂದು ತಿಳಿದು, ನಿತ್ಯ ಪಟ್ಟಣವನ್ನು ಶುಚಿಗೊಳಿಸುವ ಕಾಯಕದಲ್ಲಿ ತೊಡಗಿದ್ದನ್ನು ನೋಡಿದರೇ ನೀವೆ ನಿಜವಾದ ಶ್ರಮ ಜೀವಿಗಳೆಂದರೆ ತಪ್ಪಾಗದು ಎಂದು ಎಸ್.ಆರ್. ನವಲಿಹಿರೇಮಠ ತಿಳಿಸಿದರು. ಇವರ ಪ್ರಾಮಾಣಿಕ ಸೇವೆಯನ್ನು ಸರ್ಕಾರ ಮುಂದಿನ ದಿನಗಳಲ್ಲಿ ಗಂಭೀರವಾಗಿ ಪರಿಗಣಿಸಿ ಅವರಿಗೆ ಜೀವನ ಭದ್ರತೆಯ ಜೊತೆಗೆ ಸೂಕ್ತ ಸೌಲಭ್ಯಗಳನ್ನು ಒದಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ, ಮುಖಂಡರಾದ ಶಾಂತಯ್ಯ ಮಠ, ಹರ್ಷದ್ ನಾಯಕ, ಚೇತನ ಮುಕ್ಕಣ್ಣವರ, ಮಲ್ಲು ಕಮರಿ, ವೆಂಕಟೇಶ ಕುಲಕರ್ಣಿ, ಪೌರ ಕಾರ್ಮಿಕರ ಸಂಘದ ಉಪಾಧ್ಯಕ್ಷ ವೆಂಕಟೇಶ ನಡುವಿನಮನಿ, ಕಾರ್ಯದರ್ಶಿ ಸಂಗಪ್ಪ ಹುಣಸಿಗಿಡದ, ದುರಗಪ್ಪ ಚಲವಾದಿ, ರೇಣಮ್ಮ ಮರ್ಜಿ, ರೇಣವ್ವ ಮಸ್ಕಿ ಸೇರಿದಂತೆ ಅನೇಕರು ಇದ್ದರು.
ಪೌರ ಕಾರ್ಮಿಕರು ನಿಜವಾದ ಕೊರೊನಾ ಸೈನಿಕರು.ಸಂಕಷ್ಟದ ಸಂದರ್ಭದಲ್ಲೂ ಮನೆಯಿಂದ ಹೊರ ಬಂದು ಸ್ವಚ್ಚತೆಯಲ್ಲಿ ತೊಡಗಿ ಪಟ್ಟಣವನ್ನು ಶುಚಿಗೊಳಿಸುವ ಮೂಲಕ ರೋಗವನ್ನು ಹೊಡೆದೋಡಿಸುವ ಕಾರ್ಯದಲ್ಲಿ ಪ್ರಮಾಣಿಕ ಸೇವೆಯನ್ನು ಸಲ್ಲಿಸುತ್ತಿರುವ ಇವರ ಕಾಯಕ ನಿಷ್ಠೆಯನ್ನು ನಿಜಕ್ಕೂ ಮೆಚ್ಚುವಂತದ್ದು.
ಎಸ್.ಆರ್.ನವಲಿಹಿರೇಮಠ.
ಸಂಸ್ಥಾಪಕ ಅಧ್ಯಕ್ಷರು ಎಸ್.ಆರ್.ಎನ್.ಇ ಪೌಂಡೇಶನ್.