ಚಿತ್ರಮಿತ್ರ ಯೋಜನೆ ಎಸ್ಎಸ್ಎಲ್ಸಿ ಮಕ್ಕಳಿಗೆ ಹೆಚ್ಚಿನ ಸಹಕಾರಿ: ಮನ್ನಿಕೇರಿ
ಚಿಕ್ಕೋಡಿ 03: ಇನ್ನಷ್ಟು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಶಿಕ್ಷಣ ಇಲಾಖೆ ಜಾರಿಗೆ ತಂದಿರುವ ಚಿತ್ರಮಿತ್ರ ಎಂಬ ವಿನೂತನ ಯೋಜನೆ ಎಸ್ಎಸ್ಎಲ್ಸಿ ಮಕ್ಕಳಿಗೆ ಹೆಚ್ಚಿನ ಸಹಕಾರಿಯಾಗಲಿದೆ ಎಂದು ಡಿಡಿಪಿಐ ಗಜಾನನ ಮನ್ನಿಕೇರಿ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಶಿಕ್ಷಣ ಇಲಾಖೆ ಜಾರಿಗೆ ತಂದಿರುವ ಚಿತ್ರಮಿತ್ರ ಎಂಬ ವಿನೂತನ ಯೋಜನೆಯಡಿ ಜಿಲ್ಲಾ ಮಟ್ಟದ ವಿಜ್ಞಾನ ಚಿತ್ರ ಬಿಡಿಸುವ ಸ್ಪರ್ಧೆಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಎಸ್ಎಸ್ಎಲ್ಸಿ ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ಪಠ್ಯಪೂರಕ ವಿಜ್ಞಾನ ಚಿತ್ರಬಿಡಿಸುವ ಸ್ಪರ್ಧೆ ಇದಾಗಿದೆ. ಈಗಾಗಲೇ ಈ ಸ್ಪರ್ಧೆಗೆ ರಾಜ್ಯ ಮಟ್ಟದಲ್ಲಿ ಚಾಲನೆ ನೀಡಲಾಗಿದೆ. ಇದೀಗ ಜಿಲ್ಲಾ ಮಟ್ಟದಲ್ಲಿ ಚಾಲನೆ ನೀಡಲಾಗುತ್ತಿದೆ. ಇದು ಕೇವಲ ಚಿತ್ರಮಿತ್ರ ಯೋಜನೆ ಎಂದರೆ ವಿಜ್ಞಾನ ವಿಷಯದಲ್ಲಿರುವ ಚಿತ್ರಗಳನ್ನು ಒಂದು ಅಂಚೆ ಕಾರ್ಡಿನಲ್ಲಿಯೇ ಬಿಡಿಸಬೇಕು ಎಂಬ ನಿಯಮ ಶಿಕ್ಷಣ ಇಲಾಖೆ ಮಾಡಿದೆ. ಇದರಿಂದ ನಶಿಸಿ ಹೋಗುತ್ತಿರುವ ಅಂಚೆ ಚೀಟಿಗಳನ್ನು ಉಳಿಸಿಕೊಂಡು ಹೋಗುವ ಉದ್ದೇಶವೂ ಇದರಲ್ಲಿದೆ. ಇದರೊಂದಿಗೆ ವಿಜ್ಞಾನ ವಿಷಯದ ಕುರಿತು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಮೇಲಿಂದ ಮೇಲೆ ಆ ಚಿತ್ರಗಳನ್ನು ಬಿಡಿಸುವುದರಿಂದ ಪರೀಕ್ಷೆಯಲ್ಲಿ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಎಸ್ಎಸ್ಎಲ್ಸಿ ಪರೀಕ್ಷೆಯ ಬಗ್ಗೆ ಮಕ್ಕಳಲ್ಲಿರುವ ಭಯವೂ ಸಹ ಹೋಗಲಾಡಿಸಲು ಸಾಧ್ಯವಾಗಲಿದೆ. ಇದರಿಂದ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದಲ್ಲಿಯೂ ಗಣನೀಯ ಹೆಚ್ಚಳವಾಗಲಿದೆ ಎಂದು ಹೇಳಿದರು.
ಸರಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ರಾಜು ದೇವರುಷಿ, ಚಿತ್ರಕಲಾ ಶಿಕ್ಷಕರಾದ ಎ.ಎಂ.ನಾಗನೂರೆ, ಡಿ.ಎಂ.ಕಂಕಣವಾಡಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.