ಬೆಳಗಾವಿ

ಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಲು ಪ್ರೋತ್ಸಾಹಿಸಬೇಕು: ಎಸ್‌.ಸಿ. ಕೋಟಾರಗಸ್ತಿ

ಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಲು ಪ್ರೋತ್ಸಾಹಿಸಬೇಕು: ಎಸ್‌.ಸಿ. ಕೋಟಾರಗಸ್ತಿ

ಲೋಕದರ್ಶನ ವರದಿ 

           ಬೆಳಗಾವಿ  15: ಕೇವಲ ಒಂದು ದಿನದಂದು ಕರ್ನಾಟಕ ರಾಜ್ಯೋತ್ಸವ ಆಚರಿಸಿದರೆ ಸಾಲದು. ನಮ್ಮ ನಾಡು, ನುಡಿ, ಸಂಸ್ಕೃತಿ ಹಾಗೂ ಇತಿಹಾಸದ ಶ್ರೀಮಂತಿಕೆಯನ್ನು ಪ್ರತಿಯೊಬ್ಬರೂ ಸದಾ ಉಳಿಸಿ ಬೆಳೆಸಬೇಕು ಎಂದು ನಿವೃತ್ತ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿ ಹಾಗೂ ಸಾಹಿತಿ ಎಸ್‌.ಸಿ. ಕೋಟಾರಗಸ್ತಿ ಹೇಳಿದರು. 

           ನಗರದ ತಿಲಕವಾಡಿಯ ಮಂಡೊಳ್ಳಿ ರಸ್ತೆ ಶಾಂತಿನಗರದಲ್ಲಿರುವ ಆರ್ಷ ವಿದ್ಯಾ ಆಶ್ರಮದಲ್ಲಿ ಶನಿವಾರ ಕ್ರಾಂತಿ ಮಹಿಳಾ ಮಂಡಳ ಹಾಗೂ ಹಿಂದ್ವಾಡಿಯ ಉಮಾ ಸಂಗೀತ ಪ್ರತಿಷ್ಠಾನ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ "ಕರ್ನಾಟಕ ರಾಜ್ಯೋತ್ಸವ" ಕಾರ್ಯಕ್ರಮವನ್ನು  ಉದ್ಘಾಟಿಸಿ ಅವರು ಮಾತನಾಡಿದರು. 

            ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಪ್ರಥಮವಾಗಿ ಮಾತೃಭಾಷೆಯಲ್ಲಿ ಶಿಕ್ಷಣ ನೀಡಲು ಪ್ರೋತ್ಸಾಹಿಸಬೇಕು. ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮತ್ತು ಆಸಕ್ತಿ ಮೂಡಿಸಬೇಕು. ಇದರೊಂದಿಗೆ ಇತರ ಭಾಷೆಗಳನ್ನು ಕಲಿಯುವುದರ ಜೊತೆಗೆ ಅವುಗಳನ್ನು ಪ್ರೀತಿಸುವ ಮನೋಭಾವವನ್ನೂ ಬೆಳೆಸಿಕೊಳ್ಳಬೇಕು.

             ಈ ನಿಟ್ಟಿನಲ್ಲಿ ಕ್ರಾಂತಿ ಮಹಿಳಾ ಮಂಡಳವು ಆರ್ಷ ವಿದ್ಯಾ ಆಶ್ರಮದ ಮಕ್ಕಳೊಂದಿಗೆ ವಿಭಿನ್ನವಾಗಿ ರಾಜ್ಯೋತ್ಸವ ಆಚರಿಸುತ್ತಿರುವುದು ಹಾಗೂ ನಾಡಿನ ಇತಿಹಾಸ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಮತ್ತು ಎಲ್ಲರಿಗೂ ಮಾದರಿಯಾಗಿದೆ ಎಂದರು. 

             ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಆರ್ಷ ವಿದ್ಯಾ ಆಶ್ರಮದ ಸ್ವಾಮೀಜಿ ಶ್ರೀ ಚಿತ್ ಪ್ರಕಾಶ ಆನಂದ ಸ್ವಾಮೀಜಿ ಮಾತನಾಡಿ, ಕನ್ನಡ ಭಾಷೆ ಸಿಹಿ ಜೇನಿನಂತಿದ್ದು, ಅತ್ಯಂತ ಸರಳ ಹಾಗೂ ಸುಂದರ ಭಾಷೆಯಾಗಿದೆ.

            ನಮ್ಮ ದೇಹದ ಪ್ರತಿಯೊಂದು ಅಂಗವೂ ಹೇಗೆ ಮಹತ್ವ ಹೊಂದಿದೆಯೋ, ಅದೇ ರೀತಿ ಭಾರತಾಂಬೆಯ ಒಕ್ಕೂಟದಲ್ಲಿ ಪ್ರತಿಯೊಂದು ರಾಜ್ಯದ ಭಾಷೆಯೂ ತನ್ನದೇ ಆದ ಮಹತ್ವ ಹೊಂದಿದೆ. ಆದ್ದರಿಂದ ಪ್ರತಿಯೊಬ್ಬರೂ ಕನಿಷ್ಠ ನಾಲ್ಕು ಭಾಷೆಗಳನ್ನಾದರೂ ಮಾತನಾಡಲು ಕಲಿಯಬೇಕು ಎಂದು ಹೇಳಿದರು. 

            ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ರಂಗೋಲಿ ಸ್ಪರ್ಧೆ ಏರಿ​‍್ಡಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಯಿತು. ಉಳಿದ ಮಕ್ಕಳಿಗೂ ಮಕ್ಕಳ ದಿನಾಚರಣೆಯ ನಿಮಿತ್ತ ಉಡುಗೊರೆಗಳನ್ನು ನೀಡಲಾಯಿತು. 


ಸುದ್ದಿ ಓದಿ