ಸೊಪ್ಪಿಮಠ ಅವರಿಗೆ ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ
ಹಗರಿಬೊಮ್ಮನಹಳ್ಳಿ ಮಾ.30 : ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಧಾರವಾಡದಿಂದ ಅತ್ಯುತ್ತಮ ಮಕ್ಕಳ ಕೃತಿಗಳಿಗೆ ನೀಡಲಾಗುವ ಮಕ್ಕಳ ಚಂದಿರ ಪ್ರಶಸ್ತಿಯನ್ನು ತಾಲೂಕಿನ ಮಾಲವಿ ಶಾಲೆಯ ಪ್ರಾಥಮಿಕ ಶಾಲಾ ಶಿಕ್ಷಕ ಡಾ.ಪರಮೇಶ್ವರಯ್ಯ ಸೊಪ್ಪಿಮಠ ಅವರ ಮೊಟ್ಟಮೊದಲ ಮಕ್ಕಳ ಕಾದಂಬರಿ ‘ಹಸಿರುಡುಗೆ’ಗೆ 2020ನೇ ಸಾಲಿಗಾಗಿ ನೀಡಲಾಗಿದೆ. ಧಾರವಾಡದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸೊಪ್ಪಿಮಠ ಅವರಿಗೆ ಪ್ರಶಸ್ತಿಯನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಆಚಾರ ಹಾಲಪ್ಪ ಬಸಪ್ಪರವರು ಪ್ರಶಸ್ತಿ ಫಲಕದೊಂದಿಗೆ ಹದಿನೈದು ಸಾವಿರ ರೂ. ನಗದನ್ನು ವಿತರಿಸಿ ಗೌರವಿಸಿದರು. ಈ ಸಮಯದಲ್ಲಿ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ನವೀನ ಚ.ಸವಣೂರ, ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ, ಸಂಸ್ಥಾಪಕ ಅಧ್ಯಕ್ಷ ಶಂಕರ ಹಲಗತ್ತಿ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಇತ್ತಿಚೆಗೆ ಮಕ್ಕಳ ಸಾಹಿತ್ಯದಲ್ಲಿ ಸಂಶೋಧನೆ ಮಾಡಿ ಪಿಎಚ್.ಡಿ. ಪದವಿ ಪಡೆದಿದ್ದ ಸೊಪ್ಪಿಮಠ ಅವರಿಗೆ ಮಕ್ಕಳ ಸಾಹಿತ್ಯದಲ್ಲಿ ಪ್ರಶಸ್ತಿ ಬಂದಿರುವುದು ವಿಶೇಷ ಎನಿಸಿದೆ. ಸೊಪ್ಪಿಮಠ ಮಕ್ಕಳ ಚಂದಿರ ಪ್ರಶಸ್ತಿ ಪುರಸ್ಕೃತರಾಗಿದ್ದಕ್ಕೆ ಶಿಕ್ಷಣ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು, ಕಸಾಪ ಜಿಲ್ಲಾಧ್ಯಕ್ಷ ಡಾ.ನಿಷ್ಠಿ ರುದ್ರ್ಪ, ಸಂಗಂ ಸಂಸ್ಥೆಯ ಡಾ. ಅರವಿಂದ ಪಟೇಲ್, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾ ಸಭಾದ ವಿಜಯನಗರದ ಜಿಲ್ಲಾಧ್ಯಕ್ಷ ಬಿ.ಜಿ.ಬಡಿಗೇರ, ಟ್ರೆಡಿಷನಲ್ ಶೊಟೋಕಾನ್ ಕರಾಟೆ ಅಕಾಡೆಮಿಯ ಕಟ್ಟೆಸ್ವಾಮಿ, ಜನನಿ ಸಂಸ್ಥೆಯ ಎ.ಕೇಶವಮೂರ್ತಿ, ಮೈತ್ರಿ ಪಬ್ಲಿಕ ಚಾರಿಟೇಬಲ್ ಟ್ರಸ್ಟ್ ಸೇರಿದಂತೆ ವಿವಿಧ ಸಂಘಟನೆಗಳ ಗೆಳೆಯರು, ಮಾಲವಿ ಶಾಲೆಯ ಶಿಕ್ಷಕರು ಪ್ರಶಸ್ತಿ ಪುರಸ್ಕೃತರಾದ ಡಾ. ಪರಮೇಶ್ವರಯ್ಯ ಸೊಪ್ಪಿಮಠ ಅವರನ್ನು ಅಭಿನಂದಿಸಿದ್ದಾರೆ.