ವಿಚಾರಣೆ ಮುಗಿಸಿಬಂದ ಅಹಿಂಸಾ ನಟ ಚೇತನ್
ಬೆಂಗಳೂರು,ಜೂ.16: ಬ್ರಾಹ್ಮಣರು ಮತ್ತು ಬ್ರಾಹ್ಮಣ್ಯದ ಬಗ್ಗೆ ವಿವಾದಕಾರಿ ಹೇಳಿಕೆ ನೀಡಿದ್ದ ಆರೋಪ ಎದುರಿಸುತ್ತಿರುವ ನಟ ಚೇತನ್ ಅಹಿಂಸಾ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮುಗಿಸಿ ಬುಧವಾರ ಹೊರಬಂದರು. ಬ್ರಾಹ್ಮಣ ಸಮುದಾಯವನ್ನು ಭಯೋತ್ಪಾದಕರು ಎಂದು ಹೇಳಿಕೆ ನೀಡಿದ್ದರ ವಿರುದ್ಧ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಕೆಲವು ದಿನಗಳ ಹಿಂದೆ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ಚೇತನ್ಕುಮಾರ್ ವಿರುದ್ಧ ಎಫ್ಐಆರ್ ದಾಖಲಾಗಿ ಬುಧವಾರ ಬಸವನಗುಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ಮಂಗಳವಾರ ನೋಟಿಸ್ ನೀಡಲಾಗಿತ್ತು ವಿಚಾರಣೆ ಮುಗಿಸಿ ಹೊರಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಚೇತನ್,ಕಾನೂನಿನ ಮೇಲೆ ಅಪಾರ ನಂಬಿಕೆ ಇದೆ.ನಾನು ಜಾತಿ, ಜನಾಂಗದ ವಿರುದ್ಧ ಹೋರಾಟ ಮಾಡುತ್ತಿಲ್ಲ.ಕೆಲವರು ಹುಟ್ಟಿದ ತಕ್ಷಣ ಶ್ರೇಷ್ಠ, ಕೆಲವರು ಕೀಳು ಅಂಥ ಮಾಡಬಾರದು.ಬೇಧಭಾವದ ವಿರುದ್ಧ ಹೋರಾಟ ಮಾಡುತ್ತೇವೆ.ಈ ಹೋರಾಟವನ್ನು ಮುಂದುವರೆಸುತ್ತೇವೆ. ನಮಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದರು.