ಬಳ್ಳಾರಿ

ವಿಮ್ಸ್‌ನಲ್ಲಿ ಕಿಮೋಥೆರಪಿ ಇನ್ಫೂಶನ್ ಸೆಂಟರ್ ಪ್ರಾರಂಭ

ವಿಮ್ಸ್‌ನಲ್ಲಿ ಕಿಮೋಥೆರಪಿ ಇನ್ಫೂಶನ್ ಸೆಂಟರ್ ಪ್ರಾರಂಭ

ಬಳ್ಳಾರಿ 28: ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ ಕಿಮೋಥೆರಪಿ ಇನ್ಫೂಶನ್ ಸೆಂಟರ್ ಗುರುವಾರದಿಂದ ಪ್ರಾರಂಭವಾಗಿದೆ. 

ವಿಮ್ಸ್‌ ನಿರ್ದೇಶಕರಾದ ಡಾ.ಟಿ.ಗಂಗಾಧರಗೌಡ ಅವರು ಗುರುವಾರದಂದು ಉದ್ಘಾಟಿಸಿದರು. ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಯಿ ಅವರು ಸಿಎಂ ಆಗಿ ಒಂದು ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಈ ಸೆಂಟರ್ ಪ್ರಾರಂಭಿಸಲು ನೆರವಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್, ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು, ಜಿಲ್ಲೆಯ ಎಲ್ಲಾ ಶಾಸಕರು ಹಾಗು ಸಂಸದರು ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳಾದ ನವೀನ್ ರಾಜ್ ಸಿಂಗ್‌ರವರಿಗೆ ನಿರ್ದೇಶಕ ಗಂಗಾಧರಗೌಡ ಅವರು ಕೃತಜ್ಞತೆ ತಿಳಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ಯಾನ್ಸರ್ ರೋಗಿಗಳು ಸೆಂಟರ್‌ನಲ್ಲಿ ಲಭ್ಯವಿರುವ ಸೇವೆಗಳನ್ನು ಸದುಪಯೋಗ ಮಾಡಿಕೊಳ್ಳಲು ಮನವಿ ಮಾಡಿದರು. ಕ್ಯಾನ್ಸರ್ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಹಾಗು ಕಿಮೋಥೆರಪಿ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಸಲಹೆ ಬೇಕಾದಲ್ಲಿ ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯ ನಿರ್ದೇಶಕರಾದ ಡಾ.ರಾಮಚಂದ್ರ ಅವರನ್ನು ಸಂಪರ್ಕಿಸಲಾಗುವುದು ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ಅಧೀಕ್ಷಕರು, ದಂತ ವೈದ್ಯ ಕಾಲೇಜಿನ ಪ್ರಾಂಶುಪಾಲರು, ಟ್ರಾಮಾ ಕೇರ್ ಸೆಂಟರ್‌ನ ವೈದ್ಯಕೀಯ ಅಧೀಕ್ಷಕರು, ಕ್ಷಯ ಮತ್ತು ಎದೆರೋಗಗಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು, ಶುಶೂಷಕ ಕಾಲೇಜಿನ ಪ್ರಾಂಶುಪಾಲರು, ಶುಶೂಷಕ ಅಧೀಕ್ಷಕರು, ಸರ್ಜಿಕಲ್ ಅಂಕಾಲಜಿಸ್ಟ್‌ಗಳಾದ ಡಾ.ಗುರುಬಸವನ ಗೌಡ, ಡಾ.ಮಾಣಿಕ್ಯ ರಾವು, ಡಾ.ಶಿವಕುಮಾರ್, ರೇಡಿಯೋಥೆರಪಿ ವಿಭಾಗದ ಡಾ.ಮೆಹರ್‌ಕುಮಾರ್ ಸೇರಿದಂತೆ ಆಸ್ಪತ್ರೆಯ ವೈದ್ಯರು, ಶುಶ್ರೂಷಕರು, ತಂತ್ರಜ್ಞರು ಹಾಗು ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ