ಬಳ್ಳಾರಿ

ಲಿಂ. ಜೆ.ಎಂ.ವೀರಭದ್ರಪ್ಪ ಸರ್ವಮಂಗಳಮ್ಮ ದತ್ತಿ ಕಾರ್ಯಕ್ರಮ

ಲಿಂ. ಜೆ.ಎಂ.ವೀರಭದ್ರಪ್ಪ ಸರ್ವಮಂಗಳಮ್ಮ ದತ್ತಿ ಕಾರ್ಯಕ್ರಮ

ಬಳ್ಳಾರಿ: ಮನುಷ್ಯ ತನ್ನ ಬೇಡಿಕೆಗಳ ಈಡೇರಿಕೆಗಾಗಿ ದೇವರಲ್ಲಿ ಮೊರೆ ಹೋಗುತ್ತಾನೆ. ಸ್ತುತಿ, ಸ್ತೋತ್ರ, ಪ್ರಾರ್ಥನೆ, ಪೂಜೆ ಕೈಗೊಳ್ಳುತ್ತಾನೆ. ತನಗೆ ದೊರೆತಿರುವುದರಲ್ಲಿ ದೇವರಿಗೆ ಒಂದು ಪಾಲು ನೀಡುವ ಆಸೆ ತೋರಿಸುತ್ತಾನೆ. ಇದೇ ಪೂಜೆ, ಇದೇ ಅವನ ಪರಮ ಭಕ್ತಿಯೆಂದು ತಿಳಿಯಲಾಗಿದೆ. ಆದರೆ, ಇದು ಭಕ್ತಿಯಲ್ಲ, ಪೂಜೆಯೂ ಅಲ್ಲ. ಇದೊಂದು ವ್ಯಾಪಾರವೆಂದು ನಿವೃತ್ತ ಕಲಾ ಶಿಕ್ಷಕ ಕೆ.ಬಿ.ಸಿದ್ಧಲಿಂಗಪ್ಪ ನುಡಿದರು.

ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಗುಗ್ಗರಹಟ್ಟಿಯ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಿದ್ದ 274ನೇ ಮಹಾಮನೆ ಲಿಂ. ಕಮಲಮ್ಮ, ಡಾ. ಬಸವನಗೌಡ ದತ್ತಿ ಮತ್ತು ಲಿಂ. ಜೆ.ಎಂ.ವೀರಭದ್ರಪ್ಪ ಸರ್ವಮಂಗಳಮ್ಮ ದತ್ತಿ ಕಾರ್ಯಕ್ರಮದಲ್ಲಿ ಶರಣರು ಕಂಡ ಶಿವ ವಿಷಯ ಕುರಿತು ಮಾತನಾಡುತ್ತಾ, ಶರಣರು, ಶಿವನನ್ನು ತಮ್ಮ ಅಂತರಂಗದಲ್ಲಿ ಕಂಡರು, ಕೈಲಾಸವಾಸಿ, ಗಂಗಾಧರ, ಗೌರಿ ವಲ್ಲಭ, ಶಿವನನ್ನಲ್ಲವೆಂದರು. ದೇಹವನ್ನೇ ದೇಗುಲವನ್ನಾಗಿಸಿಕೊಂಡು ಬಾಳಿದವರು ಶರಣರೆಂದು ಅಭಿಪ್ರಾಯಪಟ್ಟರು. ಅರೆಕಾಲಿಕ ಉಪನ್ಯಾಸಕರಾದ ಹನುಮಂತರೆಡ್ಡಿಯವರು ಅತಿಥಿಗಳಾಗಿ ಪಾಲ್ಗೊಂಡು, ಶರಣರು ಕಾಯಕದಲ್ಲಿ ದೇವರನ್ನು ಕಂಡರು. ಅವರಿಗೆ ಕಾಯಕವೇ ಕೈಲಾಸವಾಗಿದ್ದಿತೆಂದರು.

ಗುಗ್ಗರಹಟ್ಟಿಯ ಎಸ್.ಯು.ಜೆ.ಎಸ್.ಪ.ಪೂ ಕಾಲೇಜಿನ ಪ್ರಾಂಶುಪಾಲ ಶ್ರೀಶೈಲರವರು ಅಧ್ಯಕ್ಷತೆ ವಹಿಸಿದ್ದರು. ವೀರಾಂಜನೇಯ ಸ್ವಾಮಿ ದೇವಸ್ಥಾನದ ಸತ್ಸಂಗದ ಭಕ್ತರು ವಚನ ಪ್ರಾರ್ಥನೆ ಮಾಡಿದರು. ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಸ್ವಾಗತ ಕೋರಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಎಸ್.ಪಿ.ಹೊಂಬಳರವರು ಶರಣು ಸಮರ್ಪಣೆ ಮಾಡಿದರು. ಸಾಮೂಹಿಕ ಪ್ರಾರ್ಥನೆ, ಧ್ಯಾನದ ನಂತರ ಕಾರ್ಯಕ್ರಮ ಮಂಗಲವಾಯಿತು 

ಸುದ್ದಿ ಓದಿ