ಲೇಖನಗಳು

ಛಬ್ಬಿ ಗಣಪ

ಛಬ್ಬಿ ಗಣಪ

ಗಣಪತಿ ಹಬ್ಬವನ್ನು ಸ್ವಾತಂತ್ರ್ಯ ಚಳುವಳಿಯ ಹೋರಾಟದ ಸಮಯದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಲು ಜನರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಬಾಲಗಂಗಾಧರ ತಿಲಕರು ಹುಟ್ಟು ಹಾಕಿದರು. ಆದರೆ ಇದಕ್ಕೂ ಮುಂಚೆಯೇ 76ವರ್ಷಗಳ ಹಿಂದೆಯೇ ಹುಬ್ಬಳ್ಳಿ ತಾಲೂಕಿನ ಛಬ್ಬಿಯಲ್ಲಿ ಗಣಪತಿ ಹಬ್ಬದ ಆಚರಣೆ ಆರಂಭವಾಗಿದ್ದು ಕಂಡು ಬರುತ್ತದೆ. ಛಬ್ಬಿಯ ಗಣೇಶೋತ್ಸವ ಉತ್ತರ ಕರ್ನಾಟಕದ ಪ್ರಮುಖ ಆಕರ್ಷಣೆ. ಕುಲಕರ್ಣಿ  ಮನೆತನದವರು 196 ವರ್ಷಗಳಿಂದ ಪ್ರತಿಷ್ಠಾಪಿಸಿಕೊಂಡು ಬಂದಿರುವ ಕೆಂಪು ಅಥವಾ ಸಿಂಧೂರ ಗಣೇಶ ಮೂರ್ತಿಗಳ ದರ್ಶನ ಪಡೆಯಲು ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಬರುತ್ತಾರೆ.

    1827ರಲ್ಲಿ ದತ್ತವತಾರಿ ಕೃಷ್ಣೇಂದ್ರ ಸ್ವಾಮಿಜಿಯವರು ಹಾಗೂ ಶ್ರೀ ಚಿದಂಬರ ಮಹಾಸ್ವಾಮಿಗಳು ಲೋಕಕಲ್ಯಾಣಾರ್ಥವಾಗಿ ಸಂಚರಿಸುತ್ತಿರುವಾಗ ಛಬ್ಬಿಗೆ ಬಂದರು. ಛಬ್ಬಿಯ ತಮ್ಮಪ್ಪ ಕುಲಕರ್ಣಿ ಅವರಿಗೆ ಸಂತಾನ ಭಾಗ್ಯವಿರಲಿಲ್ಲ. ಈ ಸಂದರ್ಭದಲ್ಲಿ ತಮ್ಮಪ್ಪ ಅವರು ಸ್ವಾಮೀಜಿಗಳಲ್ಲಿ ಭಿನ್ನವಿಸಿಕೊಂಡರು. ಆಗ ಸ್ವಾಮಿಜಿಗಳು ರಕ್ತವರ್ಣದ ಗಣಪವನ್ನು ಪ್ರತಿಷ್ಠಾಪಿಸಿ, ಮೂರು ದಿನಗಳ ಕಾಲ ಗಣೇಶ ಉತ್ಸವವನ್ನು ಮಾಡಿರಿ, ನಿಮಗೆ ಕಲ್ಯಾಣವಾಗುತ್ತದೆ ಎಂದು ಆಶೀರ್ವದಿಸಿದರು. ಅವರು ಪೂಜ್ಯರ ಮಾತಿನಂತೆ ಕೆಂಪು ಗಣಪನ ಪ್ರತಿಷ್ಠಾಪನೆ ಮಾಡಿದಾಗ ಕುಲಕಣರ್ಿ ಮನೆತನಕ್ಕೆ ಸಂತಾನ ಪ್ರಾಪ್ತಿವಾಯಿತು. ಅಲ್ಲಿಂದ ಪ್ರತಿವರ್ಷ ಕೆಂಪು ಗಣಪವನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಹೀಗೆ ಒಂದು ಮನೆತನದಿಂದ ಆರಂಭಗೊಂಡ ಗಣಪತಿ ಹಬ್ಬ ಇಂದು ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿದೆ.

    ಇಪ್ಪತ್ತೊಂದು ಇಂಚಿನ ಸಿಂಧೂರ ಗಣಪವು ಬಲಗೈಯಲ್ಲಿ ಮುರಿದ ದಂತ, ಎಡಗೈಯಲ್ಲಿ ಈಶ್ವರ ಲಿಂಗ ಹಾಗೂ ಉಳಿದೆರಡು ಕೈಗಳಲ್ಲಿ ಆಯುಧಗಳನ್ನು ಹೊಂದಿರುವದು ವಿಶೇಷವಾಗಿದೆ. ಮೈಸೂರ ಹಾಗೂ ಇಂದೋರನ ಅರಮನೆಗಳಲ್ಲಿ ಮಾತ್ರ ಇಂತಹ ಗಣಪತಿಯನ್ನು ಕಾಣಬಹುದಾಗಿದೆ. ಸಧ್ಯ ಆರನೆಯ ತಲೆಮಾರಿನಿಂದ ಗಣೇಶೋತ್ಸವ ಮುಂದುವರೆದಿದೆ. ಕಾಲಾಂತರದಲ್ಲಿ ಕುಲಕರ್ಣಿ ಮನೆತನದಲ್ಲಿ ಅಣ್ಣ ತಮ್ಮಂದಿರು ಪ್ರತ್ಯೇಕಗೊಳ್ಳುತ್ತಿದ್ದಂತೆ ಗಣೇಶ ಮೂರ್ತಿಗಳ ಸಂಖ್ಯೆಯು ಹೆಚ್ಚಾಗಿದೆ. ಉತ್ಸವದ ಮೊದಲ ದಿನ ಏಳು ಮನೆಗಳ ಗಣಪತಿಗಳನ್ನು ಮರೆವಣಿಗೆಯಲ್ಲಿ ತಂದು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಮೂರು ದಿನಗಳ ಕಾಲ ಕುಲಕರ್ಣಿ ಮನೆತನದ ಏಳು ಮನೆಗಳಲ್ಲಿ ಪ್ರತಿಷ್ಠಾಪನೆಗೊಂಡ ಗಣೇಶನನ್ನು ದರ್ಶನ ಮಾಡಿ ಭಕ್ತರು ಆಶೀರ್ವಾದ ಪಡೆಯುತ್ತಾರೆ. ಕಳೆದ ಎರಡು ದಶಕಗಳಿಂದ ಈ ಮನೆತನದ ಗಣಪತಿ ಹಬ್ಬ ಸಾರ್ವತ್ರಿಕವಾಗಿದೆ. ಭಕ್ತರ ಭಾಷೆಯಲ್ಲಿ ಹೇಳುವದಾದರೆ 'ಛಬ್ಬಿ ಗಣೇಶ ಬೇಡಿದ ವರವನ್ನು ಕರುಣಿಸುವ ದೇವರು'.

   ವರ್ಷದಿಂದ ವರ್ಷಕ್ಕೆ ಛಬ್ಬಿ ಗಣಪತಿ ಮಹತ್ವ ಹೆಚ್ಚುತ್ತಿದ್ದು, ಗಣೇಶ ಹಬ್ಬದಲ್ಲಿ ಪುಣ್ಯ ಕ್ಷೇತ್ರವೇ ಆಗಿದೆ. ಈ ಏಕದಂತನನ್ನು ಅಡಕೆ ಗಣಪ ಅಂತಲೂ ಕರೆಯುತ್ತಾರೆ. ಈ ಗಣೇಶನ ಸಂಪೂರ್ಣ ಶಕ್ತಿ ಆಡಗಿರುವದೇ ಆಡಕೆ ಬೆಟ್ಟದಲ್ಲಿ ಇಲ್ಲಿಗೆ ಬರುವ ಭಕ್ತರು ದೇವರ ಪಾದಕ್ಕೆ ಅಡಕೆ ಬೆಟ್ಟ ಮುಟ್ಟಿಸಿಕೊಂಡು ಬಂದು, ತಮ್ಮ ಮನೆಯ ಜಗಲಿಯ ಮೇಲೆ ಇಟ್ಟು ಪೂಜೆ ಮಾಡಬೇಕು. ಹೀಗೆ ನಿರಂತರವಾಗಿ ಮೂರು ವರ್ಷ ಬಂದು, ಅಡಕೆ ಬೆಟ್ಟವನ್ನು ಬದಲಾಯಿಸಿ ಪೂಜೆ ಮಾಡಿದರೆ, ಅವರಿಗೆ ಬಂದಿರುವ ಕಷ್ಟಗಳು ದೂರವಾಗುತ್ತವೆ ಅನ್ನೋದು ಭಕ್ತರ ನಂಬಿಕೆಯಾಗಿದೆ.

  1992ರ ನಂತರ ಗಣಪತಿ ಹಬ್ಬದ ಮೂರು ದಿನಗಳಲ್ಲಿ ಛಬ್ಬಿಯಲ್ಲಿ ಬಹುದೊಡ್ಡ ಗಣಪನ ಉತ್ಸವವೇ ನಡೆಯುತ್ತಿದ್ದು, ಗಣಪತಿಯನ್ನು ರಾತ್ರಿ ಹಗಲು ಎನ್ನದೇ ಐದಾರು ಕಿ.ಮೀ. ಉದ್ದದ ಸರದಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆಯುತ್ತಾರೆ. ಮೂರು ದಿನ ಪರ್ಯಂತ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಭಕ್ತರ ಬೇಡಿಕೆ ಈಡೇರಿಸುವ ಜಾಗೃತ ದೇವರು ಎಂದೇ ಪ್ರಸಿದ್ಧಿ ಪಡೆದ ಹುಬ್ಬಳ್ಳಿ ತಾಲೂಕಿನ ಛಬ್ಬಿ ಗಣೇಶವು ಹುಬ್ಬಳ್ಳಿ ನಗರದಿಂದ ಕೇವಲ 20 ಕಿ.ಮೀ. ದೂರದಲ್ಲಿದೆ .

-ಸುರೇಶ ಗುದಗನವರ 

ಸುದ್ದಿ ಓದಿ