ಆರೋಗ್ಯದ ಮೂಲ ನಾರಿನಂಶದ ಸಿರಿಧಾನ್ಯ
ಜಗತ್ತಿನಲ್ಲಿ ಭಾರತ ದೇಶ ಕೃಷಿಯನ್ನು ಉದ್ಯೋಗವನ್ನಾಗಿಸಿಕೊಂಡು ಬಂದಿರುವ ಕೃಷಿ ಅವಲಂಬಿತ ದೇಶ. ಕೃಷಿಯು ಭಾರತದಲ್ಲಿ ವೇದಕಾಲದಿಂದ ಬಂದಿರುವುದನ್ನು ಕೃಷಿ ತಜ್ಞ ಡಾ. ನೇನೆಯವರು ತಮ್ಮ ಸಂಶೋಧನಾ ಗ್ರಂಥದಲ್ಲಿ ಉಲ್ಲೇಖಿಸಿರುವುದನ್ನು ಆಧರಿಸಿ ಕೃಷಿಯು ಸುಮಾರು 6000 ವರ್ಷ ಪೂರ್ವದಿಂದ ಭಾರತದಲ್ಲಿ ಮೂಲ ಉದ್ಯೋಗವಾಗಿತ್ತು ಅನ್ನುವುದಕ್ಕೆ ಆಧಾರವಾಗಿದೆ.
ಕೃಷಿಯಿಂದಲೇ ಮಾನವನ ಆವಿಷ್ಕಾರ ಆಗುತ್ತ ಬಂದು ಪಶು ಪಕ್ಷಿ ಪ್ರಾಣಿಗಳು ಹಸಿವನ್ನು ನೀಗಿಸಲು ಮೊದಲು ಮಾಂಸಾಹಾರಿ ಪ್ರಾಣಿಗಳಂತೆ ಮನುಷ್ಯ ಕೂಡ ಬೇಟೆ ಆಡುತ್ತ ಮಾಂಸಾಹಾರ ಸೇವನೆ ಮಾಡುತ್ತಿದ್ದ. ಮಾನವ ನಂತರದಲ್ಲಿ ಭೂಮಿಯಲ್ಲಿ ಗಡ್ಡೆ ಗೆಣಸು ತೆಗೆದು ಸಸ್ಯಾಹಾರಿ ಪ್ರಾಣಿಗಳಂತೆ ಸಸ್ಯಜನ್ಯ ಪದಾರ್ಥ ಆಹಾರ ಧಾನ್ಯ ಬೆಳೆಯುತ್ತ ಸಸ್ಯಾಹಾರ ಸೇವಿಸುತ್ತಾ ಬಂದಿದ್ದು, ಪ್ರಾರಂಭದಲ್ಲಿ ಸಿರಿಧಾನ್ಯ ಬೆಳೆದು ಸಿರಿಧಾನ್ಯಗಳೇ ಸಸ್ಯಾಹಾರದ ಮೂಲ ಬೆಳೆಗಳಾಗಿದ್ದವು. ಸಿರಿಧಾನ್ಯಗಳಲ್ಲಿ ಮುಖ್ಯವಾಗಿ ನವಣೆ, ಬರಗ, ಸಾವಿ, ಹಾರಕ, ಊದಲ, ಕೋರಲ ಬೆಳೆಗಳು ಸಾಕಷ್ಟು ನಾರಿನಂಶ ಹೊಂದಿದ್ದ ಪೋಷಕಾಂಶ ಒಳಗೊಂಡಿದ್ದ ಸಸ್ಯಾಹಾರ ಬೆಳೆಗಳಾಗಿದ್ದವು. ಅವುಗಳನ್ನು ಸಂಸ್ಕರಿಸಿ ಅಕ್ಕಿ ಮಾಡಿ ಬಳಸುವುದು ಕಡಿಮೆ ಪ್ರಮಾಣದಲ್ಲಿತ್ತು. ಮತ್ತು ನೀರು ಹೆಚ್ಚು ಬಳಕೆಯಿಂದ ಭತ್ತ ಬೆಳೆಯುವುದು ಕಡಿಮೆ ಪ್ರಮಾಣದಲ್ಲಿತ್ತು. ಮತ್ತು ನೀರು ಹೆಚ್ಚು ಬಳಕೆಯಿಂದ ಭತ್ತ ಬೆಳೆಯನ್ನು ಬೆಳೆಯುವ ಕ್ಷೇತ್ರ ಕಡಿಮೆಯಾಗಿ ಇಳುವರಿ ಕೂಡ ಕಡಿಮೆಯಿತ್ತು. ಅದರ ಹಿನ್ನಲೆಯಲ್ಲಿ ರೈತರು ಇತರೆ ಜೋಳ, ಗೋಧಿ, ಕಡಲೆ ಬೆಳೆಗಳ ಸಮಗ್ರ ಕೃಷಿಯಿಂದ ಸಿರಿಧಾನ್ಯ ಬೆಳೆಯುತ್ತಿದ್ದರು. ಸಿರಿಧಾನ್ಯ ಬೆಳೆ ಬಡವರ ಆಹಾರದ ಮೂಲ ಬೆಳೆಗಳಾಗಿದ್ದವು. ಸಿರಿಧಾನ್ಯಗಳು ನಾರಿನಂಶ ಹೊಂದಿದ್ದ ಪೋಷಕಾಂಶ ಒಳಗೊಂಡ ಆಹಾರ ಧಾನ್ಯಗಳಾಗಿದ್ದವು. ಆ ಬೆಳೆಗಳ ಆಹಾರ ಸೇವಿಸುತ್ತಿದ್ದವರು ಆರೋಗ್ಯವಂತರಾಗಿ ಧೀರ್ಘಾಯುಷಿಗಳಾಗಿ ಬದುಕುತ್ತಿದ್ದರು.
1970ರ ಪೂರ್ವದಲ್ಲಿ ಕೃಷಿ ರಸಾಯನ ಮುಕ್ತವಾಗಿತ್ತು. ಆರೋಗ್ಯ ಪೂರ್ಣವಿತ್ತು. ನಂತರದಲ್ಲಿ ಕೃಷಿ ತಜ್ಞರು ಆಹಾರ ಧಾನ್ಯ ಬೆಳೆಯಲು ಸ್ವಾವಲಂಬಿಗಳಾಗಬೇಕೆಂದು ಹೈಬ್ರಿಡ್ ಜೋಳ, ಭತ್ತ ಬೆಳೆಯುವಲ್ಲಿ ಅಧಿಕ ಇಳುವರಿಯ ತಳಿಗಳ ಅನ್ವೇಷಣೆ ಮಾಡಿ ರಸಾಯನ ಬಳಕೆ ಮಾಡುತ್ತ ಅಧಿಕ ಇಳುವರಿ ಪಡೆಯುವಲ್ಲಿ ಯಶ ಕಂಡು, ರೈತ ವಾಣಿಜ್ಯ ಬೆಳೆ ಬೆಳೆಯುವಲ್ಲಿ ಆಸಕ್ತನಾಗಿ ಹೈಬ್ರಿಡ್ ಬೆಳೆಗಳ ಜೊತೆ ವಾಣಿಜ್ಯ ಬೆಳೆ ಬೆಳೆಯುತ್ತ ಆರ್ಥಿಕವಾಗಿ ಸಬಲತೆ ಹೊಂದುವಲ್ಲಿ ಆದ ಬದಲಾವಣೆಯಿಂದ ರೈತರು ಕಡಿಮೆ ಬೆಲೆಯ ಸಿರಿಧಾನ್ಯ ಬೆಳೆಯುವುದನ್ನು ನಿಲ್ಲಿಸಿ ಹೆಚ್ಚು ಹೆಚ್ಚು ರಸಾಯನ ಬಳಸುತ್ತ ಅಧಿಕ ಇಳುವರಿ ಹೈಬ್ರಿಡ್ ತಳಿ ಆಹಾರ ಬೆಳೆಯುವಲ್ಲಿ ರೈತರು ಮುಂದಾಗಿ ಹೈಬ್ರಿಡ್ ತಳಿಗಳನ್ನು ಹೆಚ್ಚು ಇಳುವರಿ ಪಡೆಯಬೇಕೆಂಬ ದುರಾಸೆಯಿಂದ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ರಸಾಯನ ಉಪಯೋಗಿಸುತ್ತ ಅಹಾರ ಧಾನ್ಯ ಹೆಚ್ಚು ಇಳುವರಿ ಪಡೆಯುವಲ್ಲಿ ಪ್ರಗತಿ ಸಾಧಿಸಿ ಹಸಿರು ಕ್ರಾಂತಿಗೆ ನಾಂದಿಹಾಡಿ ಆಹಾರಧಾನ್ಯ ಪರಾವಲಂಬಿ ಆಗಿದ್ದ ದೇಶ ಇಂದು ಆಹಾರ ಧಾನ್ಯ ಬೆಳೆ ಬೆಳೆಯುವಲ್ಲಿ ಕೃಷಿ ತಜ್ಞರು ತಮ್ಮ ಸಂಶೋಧನೆ ಆಧುನೀಕರಣಗೊಳಿಸಿ ಪರಾವಲಂಬಿ ಆಗಿದ್ದ ದೇಶವನ್ನು ಆಹಾರ ವಾಣಿಜ್ಯ ಬೆಳೆ ಬೆಳೆಯುವಲ್ಲಿ ಸ್ವಾವಲಂಬಿಯನ್ನಾಗಿಸಿರುವಲ್ಲಿ ಕೃಷಿ ತಜ್ಞರ ಪಾತ್ರ ಹಿರಿದಾಗಿದೆ.
ಹೆಚ್ಚಿನ ಇಳುವರಿ ಮತ್ತು ವಾಣಿಜ್ಯ ಬೆಳೆ ಬೆಳೆಯುತ್ತ ರೈತರು ಆರ್ಥಿಕವಾಗಿ ಸಬಲರಾಗುತ್ತ ಪ್ರಾಣಿ ಮತ್ತು ಕೃಷಿ ಕಾರ್ಮಿಕ ಅವಲಂಬಿತ ಸ್ವಾವಲಂಬಿ ಕೃಷಿಯಿಂದ ಹೊರಬಂದು ಯಾಂತ್ರೀಕೃತ ಪರಾವಲಂಬಿ ಕೃಷಿಗೆ ಒತ್ತು ಕೊಟ್ಟು ನೈಸರ್ಗಿಕ ಸಾವಯವ ಕೃಷಿಯಿಂದ ವಿಮುಖರಾದ ರೈತರು ತಮ್ಮ ಮೂಲ ತಳಿ ಬೆಳೆಗಳ ಬೀಜ ಕಾಯ್ದುಕೊಳ್ಳದೇ ಬೀಜಕ್ಕಾಗಿ ಬೀಜ ಖರೀದಿಗಾಗಿ ಅಂತರಾಷ್ಟ್ರೀಯ ಬೀಜ ಕಂಪನಿಗಳ ಹೈಬ್ರಿಡ್ ಬೀಜಗಳ ಮೇಲೆ ಅವಲಂಬಿತ ಆದ ರೈತರು ಭೂಮಿಗೆ ಬಿತ್ತಲು ಬೀಜ ಪಡೆಯಲು ಸ್ವಾವಲಂಬಿಯಾಗಿದ್ದ ರೈತರು ಪರಾವಲಂಬಿ ಆಗಿ ಬೀಜ ಮತ್ತು ಗೊಬ್ಬರಗಳ ಖರೀದಿಗೆ ಆರ್ಥಿಕ ಹೊರೆ ಅನುಭವಿಸುತ್ತಿದ್ದುದನ್ನು ಅರಿತ "ಸ್ವದೇಶಿ ಹರಿಕಾರ ಚಿಂತನಕಾರ ರಾಜೀವ ದೀಕ್ಷಿತ ಅವರು ಹೈಬ್ರಿಡ್ ಬೆಳೆ ಆಹಾರದಿಂದ ಆರೋಗ್ಯದ ಮೇಲೆ ಆಗುವ ಕೆಟ್ಟ ಪರಿಣಾಮಗಳ ಮತ್ತು ಹಾನಿ ಕುರಿತು ಅಂಕಿ ಅಂಶಗಳ ಆಧಾರದ ಮೇಲೆ ಸಮಗ್ರ ಜಾಗೃತಿ ಅಭಿಯಾನ ಹಮ್ಮಿಕೊಂಡು ಪರಾವಲಂಬಿ ಕೃಷಿಯಿಂದ ಆಗುವ ಹಾನಿಗಳ ಬಗ್ಗೆ ಕಾರ್ಯಾಗಾರಗಳ ಮೂಲಕ ದೇಶದ ರೈತರಿಗೆ ನಾಗರಿಕರಿಗೆ ಸಾವಯವ ಕೃಷಿ ಮತ್ತು ಸ್ವದೇಶಿ ವಸ್ತು ತಯಾರಿಕೆ ಬಳಕೆ ಕುರಿತು ಅರಿವು ಮೂಡಿಸುತ್ತಿದ್ದ ಕಾಲಘಟ್ಟದಲ್ಲಿ ಯೋಗಗುರು ಬಾಬಾ ರಾಮದೇವ ಅವರು ರಾಜೀವ ದೀಕ್ಷಿತ ಅವರ ಸ್ವದೇಶಿ ಅಭಿಯಾನಕ್ಕೆ ಕೈಜೋಡಿಸಿ ತಮ್ಮದೇ ಆದ ಸ್ವದೇಶಿ ಆಯುರ್ವೇದ ಓಷಧಗಳನ್ನು ಸ್ವದೇಶಿ ಆಹಾರ ಧಾನ್ಯ ಬೆಳೆಗಳನ್ನು ಬೆಳೆಯುತ್ತ ದೇಶದ ನಾಗರಿಕರಿಗೆ ಕೈಗೆಟಕುವ ದರದಲ್ಲಿ ಪತಂಜಲಿ ಉತ್ಪಾದನೆಗಳನ್ನು ಪೂರೈಕೆ ಮಾಡುತ್ತ ಬಂದು ಆ ಉತ್ಪಾದನೆಗಳಲ್ಲಿ ಸಿರಿಧಾನ್ಯಗಳ ಬಳಕೆ ಮಾಡಿ ಆರೋಗ್ಯದ ದೃಷ್ಟಿಯಿಂದ ಪಾರಂಪರಿಕ ಸಿರಿಧಾನ್ಯ ಬಳಕೆ ಮತ್ತು ಆರೋಗ್ಯ ವೃದ್ಧಿಸಿಕೊಳ್ಳುವ ಸಂದೇಶಗಳ ಹಿನ್ನಲೆಯಲ್ಲಿ ಇಂದು ಸಿರಿಧಾನ್ಯಗಳ ಮಹತ್ವ ಅರಿತ ಆಹಾರ ತಜ್ಞರು ಸಿರಿಧಾನ್ಯ ಬಳಕೆ ಮಾಡಿ ಆರೋಗ್ಯವಂತರಾಗಿರಲು ಸಂದೇಶ ನೀಡುತ್ತ "ಆಹಾರವೇ ಓಷಧ ಆಗಬೇಕು ಓಷಧ ಆಹಾರ ಆಗಬಾರದು" ಎಂಬ ಸಂದೇಶ ನೀಡುತ್ತಿದ್ದಾರೆ. ಅಂಥ ಆಹಾರ ತಜ್ಞರಲ್ಲಿ ಡಾ. ಖಾದರ್ ಒಬ್ಬರು. ಡಾ. ಖಾದರ ಅವರು ಅಮೇರಿಕಾದಲ್ಲಿ ಆಹಾರ ತಜ್ಞರಾಗಿ ಕೆಲಸ ಮಾಡುತ್ತಿದ್ದ ಸಮಯ ಅಲ್ಲಿಯ ಆಹಾರ ಪದ್ಧತಿಯ ದುಷ್ಪರಿಣಾಮದಿಂದ ವಿಶೇಷವಾಗಿ ಹೆಣ್ಣು ಮಕ್ಕಳ ಆರೋಗ್ಯದಲ್ಲಿ ಬೆಳವಣಿಗೆ ಆಗಿ ಕಿರುವಯಸ್ಸಿನಲ್ಲಿ ಪ್ರವರ್ಧಮಾನಕ್ಕೆ ಬಂದು ಅನೈತಿಕ ಚಟುವಟಿಕೆಗೆ ಇಳಿದು ಗರ್ಭ ಧರಿಸುತ್ತಿರುವುದನ್ನು ಅಧ್ಯಯನ ಮಾಡಿ ಕಿರುವಯಸ್ಸಿನಲ್ಲಿ ಪ್ರವರ್ಧಮಾನಕ್ಕೆ ಬರುವುದು ಆಹಾರ ಪದ್ಧತಿಯ ದುಷ್ಪರಿಣಾಮ. ಮಾಂಸಾಹಾರ ಬಿಟ್ಟು ಸಸ್ಯಾಹಾರ ಸೇವಿಸಲು ಅಲ್ಲಿಯ ಸರಕಾರಕ್ಕೆ ವರದಿ ಸಲ್ಲಿಸಿ, ಮಾಂಸಾಹಾರ ತ್ಯಜಿಸುವುದು ಸಾಧ್ಯವಿಲ್ಲ ಅನ್ನುವುದನ್ನು ಅರಿತ ಡಾ. ಖಾದರ್ ಅವರು ತಮ್ಮ ಸೇವೆಯಿಂದ ವಿಮುಕ್ತ ಆಗಿ ಭಾರತಕ್ಕೆ ಬಂದು ಮೈಸೂರು ಪ್ರಾಂತ್ಯದಲ್ಲಿ ಜಮೀನು ಖರೀದಿಸಿ ಸಾವಯವ ಕೃಷಿಯಿಂದ ಸಿರಿಧಾನ್ಯ ಬೆಳೆದು ಸ್ವತ: ಸಿರಿಧಾನ್ಯ ಆಹಾರ ಉತ್ಪಾದನೆ ಮಾಡಿ ಬೇರೆ ಬೇರೆ ರೋಗ ಪೀಡಿತ ರೋಗಿಗಳಿಗೆ ಬೇಕಾಗುವ ಪೋಷಕಾಂಶಗಳ ಮೇಲೆ ಸಿರಿಧಾನ್ಯ ಆಹಾರ ನೀಡುತ್ತ ಪ್ರಾಯೋಗಿಕವಾಗಿ ಅಧ್ಯಯನ ಮಾಡಿ ಸಿರಿಧಾನ್ಯ ಆಹಾರ ಸೇವನೆಯಿಂದ ರೋಗಗಳಿಂದ ಮುಕ್ತ ಆಗಬಹುದೆಂದು ಊರುರು ಸುತ್ತಿ ಸಂದೇಶ ನೀಡುತ್ತ ಬಂದ ಹಿನ್ನಲೆಯಲ್ಲಿ ಮತ್ತು ಕೃಷಿ ತಜ್ಞರು ಕೂಡ ಸಿರಿಧಾನ್ಯ ಬೆಳೆಯಲು ಉತ್ತೇಜನ ನೀಡುತ್ತಿದ್ದು ಅದಕ್ಕೆ ಪೂರಕವಾಗಿ ಕೇಂದ್ರ ಸರಕಾರ ಆಹಾರ ಮತ್ತು ಆರೋಗ್ಯ ಇಲಾಖೆ ತಜ್ಞರು ಸಿರಿಧಾನ್ಯದಲ್ಲಿಯ ನಾರಿನಂಶ ಪೋಷಕಾಂಶಗಳು ಹೇರಳ ಆಗಿರುವುದನ್ನು ಸಂಶೋಧನಾತ್ಮಕವಾಗಿ ಅರಿತು ವಿಶ್ವ ಸಿರಿಧಾನ್ಯ ದಿನ ಆಚರಿಸುವುದರೊಂದಿಗೆ ರೈತರಿಗೆ ಸಿರಿಧಾನ್ಯ ಬೆಳೆಯಲು ಆರ್ಥಿಕವಾಗಿ ಸಹಾಯ ನೀಡಲು ಕೇಂದ್ರ ಸರಕಾರ ಮುಂದೆ ಬಂದು ಕರ್ನಾಟಕದ ರಾಯಚೂರ ಕೃಷಿ ವಿಶ್ವ ವಿದ್ಯಾಲಯದಲ್ಲಿ ಸಿರಿಧಾನ್ಯ ಬೆಳೆಯಲು ಪ್ರಾಯೋಗಿಕವಾಗಿ ಅಭಿವೃದ್ಧಿ ಪಡಿಸಲು ಅನುದಾನ ನೀಡಿ ಉತ್ತೇಜಿಸಿದ್ದು ರೈತರು ಸಿರಿಧಾನ್ಯ ಬೆಳೆಯಲು ದಾರಿ ಸುಗಮವಾಗಿದೆ. ಜೊತೆಗೆ ಆಹಾರ ತಜ್ಞರ ಸಲಹೆಯನ್ನು ಪರಿಗಣಿಸಿರುವ ನಾಗರಿಕರು ಸಿರಿಧಾನ್ಯ ಪೂರೈಕೆ ಮೇಳಗಳಲ್ಲಿ ಸರದಿ ಮೇಲೆ ನಿಂತು ಸಿರಿಧಾನ್ಯ ಖರೀದಿಸಿ ಆಹಾರ ಸೇವಿಸಿ ಆರೋಗ್ಯವಂತರಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಜೊತೆಗೆ ಹೊಟೇಲುಗಳಲ್ಲಿ ಸಿರಿಧಾನ್ಯದಿಂದ ಮಾಡಿದ ಆಹಾರ ಬೇಡಿಕೆ ಹೆಚ್ಚಾಗುತ್ತಿದೆ.
ಒಂದು ಕಾಲದಲ್ಲಿ ಬಡವರ ಆಹಾರವಾಗಿದ್ದ ಸಿರಿಧಾನ್ಯ ಇಂದು ಸಿರಿವಂತರ ಆಹಾರವಾಗಿ ಬೇಡಿಕೆ ಹೆಚ್ಚಾಗಿ ರೈತರು ಕೂಡ ಖುಷ್ಕಿ ಭೂಮಿಯಲ್ಲಿ ಸಿರಿಧಾನ್ಯ ಬೆಳೆಯುವುದು ಲಾಭದಾಯಕ ಅಂತಾ ಅರಿತು ಸಿರಿಧಾನ್ಯ ಬೆಳೆಯುತ್ತಿದ್ದಾರೆ. ರೈತರ ಬಾಳು ಹಸನಾಗಲು ಆಯಾ ಜಿಲ್ಲೆಗಳಲ್ಲಿ ಬೀಜ ಘಟಕ ಮತ್ತು ಉಗ್ರಾಣಗಳನ್ನು ಸರಕಾರ ನಿರ್ಮಿಸಿ ಬೀಜ ಘಟಕಗಳಿಂದ ಸ್ವಚ್ಛ ಮಾಡುವುದು, ಅಕ್ಕಿ ಮಾಡುವಲ್ಲಿ ಯಂತ್ರೋಪಕರಣಗಳನ್ನು ಅಳವಡಿಸಿ ಉತ್ತೇಜಿಸಿದಲ್ಲಿ ಬೇಕಾದ ಪ್ರಮಾಣದಲ್ಲಿ ಸಿರಿಧಾನ್ಯಗಳನ್ನು ಬೆಳೆದು ಸಿರಿಧಾನ್ಯ ಆಹಾರ ಸೇವಿಸಿ ರೋಗಮುಕ್ತ ಸಮಾಜ ನಿರ್ಮಾಣ ಆಗುವದರಲ್ಲಿ ಸಂದೇಹವಿಲ್ಲ. ರೈತ ಆದಿಯಿಂದ ದುಡಿದು ಆಹಾರ ಧಾನ್ಯ ಬೆಳೆದು ಪೂರೈಕೆ ಮಾಡುತ್ತ ಬಂದಿದ್ದು, ಸದ್ಯದ ಆಧುನಿಕ ಕೃಷಿ ತಂತ್ರಜ್ಞಾನದಿಂದ ರೈತ ಸಿರಿಧಾನ್ಯ ಬೆಳೆದು ಆರ್ಥಿಕ ಸಬಲತೆ ಹೊಂದಿ ದೇಶದ ನಾಗರಿಕರ ಆರೋಗ್ಯ ವೃದ್ಧಿಗೆ ರೈತನೇ ಬೆಳೆಯುವ ಸಿರಿಧಾನ್ಯಗಳೇ ಮೂಲ ಅನ್ನುವುದು ಇಂದು ಮುನ್ನಲೆಗೆ ಬಂದಿದ್ದು, "ಸಿರಿಧಾನ್ಯ ಸೇವನೆ ಆರೋಗ್ಯ ವೃದ್ಧಿಗೆ ಮೂಲ" ಅನ್ನುವ ಸತ್ಯದ ಅರಿವಾಗಿದ್ದು, ಕೃಷಿಯಿಂದಲೇ ನಾಡು ಸುಭೀಕ್ಷವಾಗುತ್ತದೆ ಅನ್ನುವುದು ಇಂದು ಎಲ್ಲರ ಅರಿವಿಗೆ ಬಂದಿದ್ದು, "ರೈತನೊಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ" ಎನ್ನುವ ನಾನ್ನುಡಿ ಸರಿಯಾಗಿದೆ.
- ಎಸ್.ಎಚ್. ಪಾಟೀಲ
ಧಾರವಾಡ
9448564250
- * * * -