ಕೇಂದ್ರದ ಯೋಜನೆಗಳಿಂದ ಹೊರೆಯಾದರೂ ಮುಂದೆ ಎಲ್ಲ ಸರಿ ಹೋಗಲಿದೆ: ಮಹಮ್ಮದ್ ಫಾರೂಕ್
ಬಳ್ಳಾರಿ 23: ಲಾಕ್ ಡೌನ್ ನಂತರದ ಬೆಳವಣಿಗೆಗಳು ದೇಶದ ಜನತೆಗೆ ಸಮಸ್ಯೆ ತಂದೊಡ್ಡಿದ್ದ ಬೆನ್ನಲ್ಲೇ ಕೇಂದ್ರದ ಯೋಜನೆಗಳು ಗಾಯದ ಮೇಲೆ ಬರೆ ಎಳೆದಂತೆ ಭಾಸವಾದರೂ ಮುಂದಿನ ದಿಗಳಲ್ಲಿ ಎಲ್ಲವೂ ಸರಿ ಹೋಗಲಿದೆ ಎಂದು ಬಿಜೆಪಿ ಮುಖಂಡ ಮಹಮ್ಮದ್ ಫಾರೂಕ್ ತಿಳಿಸಿದ್ದಾರೆ.
ಕೇಂದ್ರ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಅಸಹನೆ ವ್ಯಕ್ತಪಡಿಸಿದವು. ರೈತರು ಅದಕ್ಕೂ ಮುಂಚೆ ದೆಹಲಿಯತ್ತ ದಾಂಗುಡಿಯಿಟ್ಟರು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಹೆಚ್ಚಳವಾಯಿತು. ಪ್ರಸ್ತುತ ಪರಿಸ್ಥಿತಿಯಲ್ಲಿ ಇದು ಅನಿವಾರ್ಯ. ನಿರುದ್ಯೋಗ ಸಮಸ್ಯೆ, ದೈನಂದಿನ ಜೀವನ ನಿರ್ವಹಣೆಗೆ ಇದೀಗ ದೇಶ ಕಠಿಣ ಸವಾಲುಗಳನ್ನು ಎದುರಿಸುತ್ತಿದೆ. ಇದೆಲ್ಲದರ ಅರಿವು ಪ್ರಧಾನಮಂತ್ರಿಯವರಿಗಿದೆ. ಬರುವ ದಿನಗಳಲ್ಲಿ ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಎಂದರು.
ಕಾಂಗ್ರೆಸ್ ಅವಧಿಯಲ್ಲೂ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿದ ದರ ಹೆಚ್ಚಳವಾಗಿತ್ತು. ಬಿಜೆಪಿ ಕೂಡ ಆಗ ಪ್ರತಿಭಟನೆ ನಡೆಸಿತ್ತು. ಕಾಂಗ್ರೆಸ್ ನವರು 60 ವರ್ಷ ದೇಶವಾಳಿದ್ದಾರೆ. ಆಗಲೂ ಸಮಸ್ಯೆಗಳಿದ್ದವು. ನೆಹರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿಯೂ ಕೂಡ ಖಾಸಗಿಯವರ ಪ್ರಭಾವ ಇತ್ತು. ಬಿಎಸ್ಎನ್ಎಲ್, ಎಲ್ಐಸಿ, ರೈಲು ಖಾಸಗೀಕರಣ ಮಾಡುವುದರಿಂದ ಉದ್ಯೋಗಿಗಳಲ್ಲಿ ಇನ್ನಷ್ಟು ಚುರುಕುತನ ಮೂಡಲಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಕೇಂದ್ರದ ಯೋಜನೆಗಳ ಕುರಿತು ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ವಿರೋಧ ವ್ಯಕಪಡಿಸುತ್ತಿದ್ದಾರೆ. ಆಂಧ್ರ, ತೆಲಂಗಾಣ ಸೇರಿದಂತೆ ಅನ್ಯ ರಾಜ್ಯಗಳಲ್ಲಿ ಇಂತಹ ವಿರೋಧಾಭಾಸಗಳು ಇಲ್ಲ. ಅಲ್ಲಿನ ಜನತೆ ಏಕೆ ಸುಮ್ಮನಿದ್ದಾರೆ? ಎಂದೂ ಮಹಮ್ಮದ್ ಫಾರೂಕ್ ಪ್ರಶ್ನಿಸಿದ್ದಾರೆ.