ಮುಂದಗೋಡ

ವಿಜೃಂಭಣೆಯಿಂದ ಸ್ವಾತಂತ್ರ್ಯ ದಿನಾಚರಣೆ: ಶಂಕರ ಗೌಡಿ

ವಿಜೃಂಭಣೆಯಿಂದ ಸ್ವಾತಂತ್ರ್ಯ ದಿನಾಚರಣೆ: ಶಂಕರ ಗೌಡಿ

ಲೋಕದರ್ಶನ ವರದಿ 

ಮುಂಡಗೋಡ:ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಎಲ್ಲರೂ ತಮ್ಮ-ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜಗಳನ್ನು ಆ.13ರಂದು ಬೆಳಗ್ಗೆ ಹಾಕಿ ಆ.15ರ ಸಂಜೆ ತೆಗೆದು ಎಸೆಯದೆ ಸುರಕ್ಷಿತವಾಗಿ ಇಡಬೇಕು ಸರ್ಕಾರಿ ನೌಕರರು ಕಡ್ಡಾಯವಾಗಿ ಧ್ವಜಗಳನ್ನು ಹಾಕಬೇಕು ಎಂದು ತಹಶೀಲ್ದಾರ ಶಂಕರ ಗೌಡಿ ಹೇಳಿದರು. 

ಪಟ್ಟಣದ ಮಿನಿ ವಿಧಾನಸೌಧದ ಸಭಾಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಡಿ.ದೇವರಾಜ ಅರಸು ಅವರ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಶುಕ್ರವಾರ ಅವರು ಮಾತನಾಡಿದರು. 2020-21ರಲ್ಲಿ ಕೋವಿಡ್ ಕಾರಣದಿಂದ ಸರಳ ಸ್ವಾತಂತ್ರ್ಯ ದಿನಾಚರಣೆ ಮಾಡಿದ್ದೆವು. ಈ ಬಾರಿ ಯಾವುದೆ ರೀತಿಯ ನಿರ್ಬಂಧನೆ ಮತ್ತು ಕೋವಿಡ್ ಭೀತಿ ಇಲ್ಲದ ಕಾರಣ ಮೊದಲಿನ ಹಾಗೆಯೇ ವಿಜೃಂಭಣೆಯಿಂದ ಸ್ವಾತಂತ್ರ್ಯ ದಿನಾಚರಣೆ ಮಾಡಲಾಗುವುದು. ಬೆಳಗ್ಗೆ 8ಗಂಟೆಗೆ ಪಟ್ಟಣದ ಎಲ್ಲ ಸರ್ಕಾರಿ, ಅರೆ ಸರ್ಕಾರಿ ಕಾರ್ಯಾಲಯ, ಶಾಲಾ-ಕಾಲೇಜು ಮತ್ತು ಸಂಘ-ಸಂಸ್ಥೆಗಳು ಧ್ವಜಾರೋಹಣ ನೆರವೇರಿಸಿ ಶಿಕ್ಷಕ-ಶಿಕ್ಷಕಿಯರು ವಿದ್ಯಾರ್ಥಿಗಳೊಂದಿಗೆ ಸರಿಯಾಗಿ 8.30ಕ್ಕೆ ಪ.ಪಂ.ಧ್ವಜಾರೋಹಣ ಸ್ಥಳಕ್ಕೆ ಬಂದು ಸೇರಿ 8.50ಕ್ಕೆ ಧ್ವಜಾರೋಹಣ ಮುಗಿಸಿ 9ಗಂಟೆಗೆ ಸಾರ್ವಜನಿಕ ಧ್ವಜಾರೋಹಣ ನಡೆಯುವ ತಾಲೂಕು ಕ್ರೀಡಾಂಗಣದಲ್ಲಿ ಸೇರಬೇಕು. 9.15ಕ್ಕೆ ಧ್ವಜಾರೋಹಣ ಕಾರ್ಯಕ್ರಮ ನೆರವೇರುವುದು. ಪ್ರತಿ ವರ್ಷದಂತೆ ಪೊಲೀಸ್, ಹೋಂ-ಗಾರ್ಡ್ಸ್‌, ಸ್ಕೌಟ್ಸ್‌ ಮತ್ತು ಗೈಡ್ಸ್‌, ಭಾರತ ಸೇವಾದಳ ಮತ್ತು ಅಗ್ನಿಶಾಮಕದಳದವರಿಂದ ಪಥಸಂಚಲನೆ ಕಾರ್ಯಕ್ರಮ ಜರುಗಲಿದೆ ಎಂದರು. 

ಪಟ್ಟಣದ ಬೀದಿಗಳ ಸ್ವಚ್ಛತೆಗೊಳಿಸಿ ತಳಿರು-ತೋರಣಗಳಿಂದ ಸಿಂಗರಿಸಲು ಸಿಬ್ಬಂದಿಗೆ ತಿಳಿಸುವಂತೆ ಪ.ಪಂ.ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ ಅವರಿಗೆ ಸೂಚಿಸಲಾಯಿತು ಮತ್ತು ಗ್ರಾಮೀಣ ಭಾಗಗಳಲ್ಲಿ ಆಯಾ ಗ್ರಾ.ಪಂ.ಗಳಿಗೆ ಸೂಚಿಸಲು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಕಟ್ಟಿ ಅವರಿಗೆ ಕೋರಲಾಯಿತು. ಮಳೆಗಾಲ ಮುಗಿಯುವವರೆಗೂ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ವಹಿಸಲು ಪ.ಪಂ. ಮತ್ತು ತಾ.ಪಂ.ನವರಿಗೆ ತಿಳಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸ್ಪರ್ಧೆಗಳ ವಿಜೇತರ ಪಟ್ಟಿಯನ್ನು ತಯಾರಿಸಿ ಕೊಡಲು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಎಸ್‌.ಪಟಗಾರ ಅವರಿಗೆ ಸೂಚಿಸಲಾಯಿತು. ಆ.14ಮತ್ತುಆ.15ರಂದು ಸರ್ಕಾರಿ, ಸರ್ಕಾರೇತರ ಕಟ್ಟಡಗಳು, ಮಂದಿರ, ಮಸೀದಿ ಮತ್ತು ಚರ್ಚ್‌ಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕರಿಸಬೇಕು. ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ಸಿಬ್ಬಂದಿಗೆ ನೋಡಿಕೊಳ್ಳುವಂತೆ ತಿಳಿಸಬೇಕು. ಆ.20ರಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನ್ಮ ದಿನಾಚರಣೆಯನ್ನು ಸರ್ಕಾರದ ವತಿಯಿಂದ ಮಾಡಲಾಗುವುದು ಎಂದು ತಿಳಿಸಿದರು.    

ಪ.ಪಂ.ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ ಮಾತನಾಡಿ ವಾರ್ಡ್‌ ಸದಸ್ಯರ ಮೂಲಕ ಪ್ರತಿಯೊಬ್ಬರ ಮನೆಗೆ ಧ್ವಜಗಳನ್ನು ತಲುಪಿಸಲಾಗುವುದು. ಜೊತೆಗೆ ಸೂಚನಾ ಪಟ್ಟಿ ನೀಡಲಾಗುವುದು. ಧ್ವಜ ವಾಲಬಾರದು ಮತ್ತು ಕ್ರಮವಾಗಿ ಮೇಲ್ಮುಖವಾಗಿರಬೇಕು ಎಂದರು.  

ಈ ವೇಳೆ ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್‌.ಪಾಟೀಲ, ಪ.ಪಂ.ಅಧ್ಯಕ್ಷೆ ರೇಣುಕಾ ಹಾವೇರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಶಕುಂತಲಾ ನಾಯಕ, ಸಿಪಿಐ ಎಸ್‌.ಎಸ್‌.ಸಿಮಾನಿ, ಆರ್‌ಎಫ್‌ಒ ಸುರೇಶ ಕುಳ್ಳೊಳ್ಳಿ, ತೋಟಗಾರಿಕಾ ಸಹಾಯಕ ನಿರ್ದೇಶಕ ಕೃಷ್ಣ ಕೋಳುರ, ಹನುಮಂತ ಭಜಂತ್ರಿ, ತಾಲೂಕು ಮಟ್ಟದ ಹಿರಿಯ, ಕಿರಿಯ ಅಧಿಕಾರಿಗಳು ಮತ್ತು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗ್ರೇಡ್‌-2 ತಹಶೀಲ್ದಾರ ಜಿ.ಬಿ.ಭಟ್ ಸ್ವಾಗತಿಸಿ ವಂದಿಸಿದರು. 


ಸುದ್ದಿ ಓದಿ