ಸಾರ್ವತ್ರಿಕ ಹಬ್ಬ ಹೋಳಿ ಸೌಹಾರ್ದತೆಯೊಂದಿಗೆ ಆಚರಿಸಿ: ಉಪ್ಪಾರ್
ಮಹಾಲಿಂಗಪುರ 26: ಕೋವಿಡ್- 19 ಹಿನ್ನೆಲೆಯಲ್ಲಿ ಬರುವ ಸಾರ್ವತ್ರಿಕ ಹಬ್ಬ ಹೋಳಿಯನ್ನು ಸೌಹಾರ್ದತೆಯೊಂದಿಗೆ, ಸರಳ ಹಾಗೂ ಶಾಂತ ರೀತಿಯಿಂದ ಆಚರಿಸುವ ಕುರಿತು ಠಾಣಾಧಿಕಾರಿ ಜಿಎಸ್ ಉಪ್ಪಾರ್ ಪಟ್ಟಣದ ಪ್ರಮುಖರಿಗೆ ತಿಳಿಸಿದರು.
ಸ್ಥಳೀಯ ಠಾಣೆಯಲ್ಲಿ ಗುರುವಾರ ಮುಂಜಾನೆ ಪಟ್ಟಣ ಪ್ರಮುಖರ ಶಾಂತಿ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಹಬ್ಬಗಳು ಮಾನವನ ಬದುಕಿನ ಅವಿಭಾಜ್ಯ ಅಂಗ, ಆದರೆ ಕೆಲವೊಂದು ಸಮಯಗಳಲ್ಲಿ ಸಾಧಕ-ಬಾದಕಗಳನ್ನು ಗಣನೆಗೆ ತೆಗೆದುಕೊಂಡು ಸರ್ಕಾರ ನೀಡುವ ಮಾರ್ಗದರ್ಶಿ ಸೂತ್ರಗಳನ್ನು ನಾಗರಿಕರು ಪಾಲಿಸುವುದು ಅನಿವಾರ್ಯ ಹಾಗೂ ಅವು ನಮ್ಮ ಒಳಿತಿಗಾಗಿಯೇ ಇರುತ್ತವೆ ಎಂದರು.
ರಾಜ್ಯ ಹಾಗೂ ಜಿಲ್ಲೆಯಲ್ಲಿ ಕೊರೋನ ಮಹಾಮಾರಿ ತನ್ನ ಬಾಹುಳ್ಯವನ್ನು ವಿಸ್ತರಿಸಿ ಗತ ವರ್ಷ ಕರಾಳ ನೆನಪನ್ನು ಮರುಕಳಿಸುತ್ತಿದ್ದು ಇದನ್ನು ಮಟ್ಟಹಾಕಲು, ಸಾರ್ವಜನಿಕರು ಕಡ್ಡಾಯವಾಗಿ ಸ್ಯಾನಿಟೈಸರ್ ಬಳಕೆ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ಹೆಚ್ಚಿನ ಮಹತ್ವ ನೀಡಿ ಆರೋಗ್ಯ ಇಲಾಖೆ ನಿಯಮಗಳನ್ನು ಪಾಲಿಸಲು ಕರೆ ನೀಡಿದರು.
ಅಲ್ಲದೆ ಹೋಳಿ ಹಬ್ಬದಲ್ಲಿ ಹೆರಿ, ಟಾಪಿಂಗ್, ವಾರ್ನಿಗ್ ï ಹಾಗೂ ಇನ್ನೂ ಅನೇಕ ಮಾರಕ ರಾಸಾಯನಿಕ ಮಿಶ್ರಿತ ಬಣ್ಣಗಳನ್ನು ಬಳಸುವುದು, ಇವು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ನೈಸರ್ಗಿಕ ಒಣ ಬಣ್ಣವನ್ನು ಬಳಸಿ ಆರೋಗ್ಯ ಕಾಪಾಡಿಕೊಳ್ಳುವ ಕಡೆಗೆ ಗಮನ ನೀಡಬೇಕೆಂದರು.
ಸಾರ್ವಜನಿಕ ಸ್ಥಳ ಹಾಗೂ ರಸ್ತೆ ಮಧ್ಯದಲ್ಲಿ ಕಾಮದಹನ ಮಾಡುವಂತಿಲ್ಲ ಮತ್ತು ಪರೀಕ್ಷೆಯ ಸಮಯವಾದ್ದರಿಂದ ವಿದ್ಯಾರ್ಥಿಗಳಿಗೆ ಮತ್ತು ಕರ್ತವ್ಯ ನಿರತ ಸರ್ಕಾರಿ ನೌಕರರಿಗೂ ತೊಂದರೆಯಾಗದಂತೆ ಹಲಗೆಯ ವಾದನ ಹಾಗೂ ಬಣ್ಣದ ಹಬ್ಬವನ್ನು ಸೌಹಾರ್ದದ ನೆಲೆಗಟ್ಟಿನ ಮೇಲೆ ಆಚರಿಸಿರಿ ಎಂದು ಊರ ಪ್ರಮುಖರಿಗೆ ಹಾಗೂ ಪುರಸಭೆ ಅಧಿಕಾರಿಗಳಿಗೆ ಸಹಕರಿಸಲು ಕೋರಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಶೇಖರ್ ಅಂಗಡಿ, ರಾಜು ಭಾವಿಕಟ್ಟಿ, ಮುಸ್ಲಿಂ ಸಮಾಜದ ಸಜನಸಾಬ ಪೆಂಡಾರಿ, ಅಶೋಕ್ ಅಂಗಡಿ, ಭೀಮಶಿ ಗೌಂಡಿ, ಶಿವಾನಂದ ಅಂಗಡಿ, ಸಿದ್ದಪ್ಪ ಶಿರೋಳ, ಅನೀಲ್ ಕಿರಿಕಿರಿ, ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ಆಗಮಿಸಿದ ಸಾರ್ವಜನಿಕರು ಉಪಸ್ಥಿತರಿದ್ದರು.
ಅತಿಥಿಗಳನ್ನು ಈ ಕಾರ್ಯಕ್ರಮಕ್ಕೆ ಸಿಬ್ಬಂದಿಗಳಾದ ಜಗದೀಶ್ ಪಾಟೀಲ್ ಸ್ವಾಗತಿಸಿ, ಎ.ಆಯ್ ಮದರಖಂಡಿ ನಿರೂಪಿಸಿ, ವಂದಿಸಿದರು.