ಬಕ್ರೀದ ಹಬ್ಬವನ್ನು ಶಾಂತಿ, ಸಾಮರಸ್ಯದಿಂದ ಆಚರಿಸಿ: ತಿಪ್ಪಾರೆಡ್ಡಿ
ಮುದ್ದೇಬಿಹಾಳ 16: ಬಕ್ರೀದ ಹಬ್ಬವನ್ನು ಎಲ್ಲರೂ ಅತ್ಯಂತ ಶಾಂತಿಯುತವಾಗಿ ಸಾಮರಸ್ಯದಿಂದ ಆಚರಿಸಬೇಕು. ಈ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲ ಮುಖಂಡರು ಜಾಗೃತಿಯಿಂದ ನೋಡಿಕೊಳ್ಳಬೇಕು. ಹಾಗೊಂದು ವೇಳೆ ಕಾನೂನು ವಿರೋಧಿ ಚಟುವಟಿಕೆ ನಡೆಸಿದರೆ ಪೋಲಿಸ್ ಇಲಾಖೆ ಸುಮ್ಮನೇ ಬಿಡುವುದಿಲ್ಲ. ಅಂತಹ ಗಂಭೀರ ಸ್ಥಿತಿಗಳು ಕಂಡು ಬಂದರೆ ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದಲ್ಲಿ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಬೇಕು ಎಂದು ಪಿಎಸೈ ಸಂಜಯ ತಿಪ್ಪಾರೆಡ್ಡಿ ತಿಳಿಸಿದರು.
ಪಟ್ಟಣದ ಪೋಲಿಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಭಾನುವಾರ ಮುಸ್ಲಿಂ ಧಾರ್ಮಿಕ ಮುಖಂಡರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ನಡೆದ ಶಾಂತಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಹಲವಾರು ವರ್ಷಗಳಿಂದ ಮುದ್ದೇಬಿಹಾಳ ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ಹಿಂದೂ ಮುಸ್ಲಿಂ ಎನ್ನುವ ಯಾವೂದೇ ಬೇದಭಾವವಿಲ್ಲದೇ ಪರಸ್ಪರ ಎಲ್ಲ ಹಬ್ಬ ಹರಿದಿನಗಳಲ್ಲಿ ಭಾಗಿಯಾಗಿ ಸೌಹಾರ್ದತೆಯಿಂದ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಇದರಿಂದ ಇಲ್ಲಿ ಸದಾ ಧಾರ್ಮಿಕ ಸೌಹಾರ್ದತೆಯ ಪ್ರತೀಕವಾಗಿ ಉಳಿದಿದೆ. ಜೂನ್ 17 ರಂದು ಬಕ್ರೀದ್ ಹಬ್ಬವನ್ನು ಯಾವುದೇ ಗೊಂದಲಗಳಿಲ್ಲದೆ ಆಚರಿಸುವಂತೆ ಸಮಾಜದ ಮುಖಂಡರಲ್ಲಿ ಮನವಿ ಮಾಡಿದರು. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಜಾತಿ ಧರ್ಮ, ಸಂಸ್ಕೃತಿ ಸೇರಿದಂತೆ ಇತರೇ ರೀತಿಯ ಕೋಮಭಾವನೆ ಕೆರಳಿಸುವ ಪೋಸ್ಟಗಳ ಸುದ್ದಿಗಳ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಸಾಮಾಜಿಕ ಯಾವುದೇ ಸಣ್ಣ ಸಮಸ್ಯೆ ಸಂಭವಿಸಿದರೂ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವ ಮೂಲಕ ಮುಂದಾಗುವ ಅಹಿತಕರ ಘಟನೆಯನ್ನು ತಪ್ಪಿಸಿ ಶಾಂತಿಯುತ ವಾತಾವರಣ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.
ಈ ವೇಳೆ ವಯಕ್ತಿಕ ದ್ವೇಶವನ್ನು ಇಂತಹ ಧಾರ್ಮಿಕ ಹಬ್ಬ ಹರಿದಿನಗಳಲ್ಲಿ ಶಾಂತಿಗೆ ಭಂಗ ತುರುವವರ ವಿರುದ್ಧ ಯಾವೂದೇ ಮೂಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಇತ್ತಿಚಿಗೆ ಪಟ್ಟಣದಲ್ಲಿ ದಿನದಿನಕ್ಕೆ ಸಾರ್ವಜನಿಕರ ಸಂಚಾರದಿಂದ ಟ್ರಾಫಿಕ ಸಮಸ್ಯೆ ಹೆಚ್ಚಾಗುತ್ತಿದೆ. ದ್ವೀಚಕ್ರ ವಾಹನ ಸವಾರರು ಹಾಗೂ ಇತರೇ ವಾಹನಗಳ ಸವಾರರು ವೇಗವಾಗಿ ವಾಹನಗಳನ್ನು ಓಡಿಸುವುದು ಮಾತ್ರವಲ್ಲದೇ ವಾಹನ ಪರವಾನಿಗೆ, ಲೈಸನ್ಸ್, ಇನ್ಸೂರೆನ್ಸ್ ಇಲ್ಲದೇ, ವೇಗವಾಗಿ ವಾಹನ ಓಡಿಸುವುದು ಕಾನೂನು ಉಲ್ಲಂಘಿಸಿದಂತಾಗುತ್ತದೆ ಇದರಿಂದಾಗಿ ಅಪಘಾತಗಳ ಸಂಖ್ಯೆಯೂ ಕೂಡ ಹೆಚ್ಚಾಗುತ್ತಿವೆ ಕಾರಣ ಯಾವೂದೇ ವಾಹನಗಳನ್ನು ಜಾಗೃತಿಯಿಂದ ಓಡಿಸಬೇಕು ಇದರಿಂದ ಅಪಘಾತನಗಳನ್ನು ತಡೆಯಲು ಸಾಧ್ಯ ಎಂದರು.
ಯುವ ಮುಖಂಡ ಕಾಮರಾಜ ಬಿರಾದಾರ ಅವರು ಮಾತನಾಡಿ ನಮ್ಮಲ್ಲಿ ಯಾವೂದೇ ತರಹದ ಗೊಂದಲಗಳಿಲ್ಲ. ಎಲ್ಲ ಧರ್ಮದವರು ಅವರವರ ಧರ್ಮ ಆಚರಣೆಗಳನ್ನು ಸೌಹಾರ್ಧತೆಯಿಂದ ಆಚರಿಸುವುದರೊಂದಿಗೆ ಭಾವೈಕೆತೆ ಮೆರೆಯುತ್ತಿದ್ದೇವೆ. ಈಗಲೂ ಸಹಿತ ನಾವೆಲ್ಲ ಒಗ್ಗಟ್ಟಾಗಿ ಬಕ್ರೀದ ಹಬ್ಬವನ್ನು ಆಚರಿಸುತ್ತೇವೆ. ಯಾವೂದೇ ಅನುಮಾನ ಬೇಡ ಎಂದರು.
ಪುರಸಭೆ ಸದಸ್ಯ ಮೈಬೂಬ ಗೊಳಸಂಗಿ, ಗಣ್ಯ ಹೋಟೇಲ್ ಉದ್ಯಮಿ ಸದಾಶಿವ ಮಠ, ಯುವ ಮುಖಂಡ ಎಚ್. ಬಿ ಸಾಲಿಮನಿ, ಹುಸೇನ್ ಮುಲ್ಲಾ, ರಾಜಶೇಖರ ಹೊಳಿ, ಸಂಗಪ್ಪ ಮೇಲಿನಮನಿ, ಸಂಜು ಬಾಗೇವಾಡಿ, ಸದ್ದಾಂ ಕುಂಟೋಜಿ, ಮುನ್ನಾ ಮಕನದಾರ, ಬಾಪ್ ಢವಳಗಿ ಸೇರಿದಂತೆ ಹಲವರು ಇದ್ದರು.