ಮನರಂಜನೆ

ಒಂದೇ ಸಿನೆಮಾ ಮೂರು ವಿಭಾಗಗಳಲ್ಲಿ ಸ್ಪರ್ಧಿಸಬಹುದೇ ?

ಒಂದೇ ಸಿನೆಮಾ ಮೂರು ವಿಭಾಗಗಳಲ್ಲಿ ಸ್ಪರ್ಧಿಸಬಹುದೇ ?

ಬೆಂಗಳೂರು: ಫೆಬ್ರವರಿ ೧೭:  ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್‌ ೩ ರಿಂದ ಆರಂಭವಾಗಲಿದೆ. ದೇಶ ವಿದೇಶಗಳ ಉತ್ತಮ ಸಿನೆಮಾಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ. ಈ ಸಂದರ್ಭದಲ್ಲಿ ಒಂದೇ ಸಿನೆಮಾಕ್ಕೆ ಮೂರು ವಿಭಾಗಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಿರುವುದು ಸರಿಯೇ ಎಂಬ ಪ್ರಶ್ನೆ ಮೂಡಿದೆ.

ಈ ಕುರಿತು ಚಲನಚಿತ್ರ ಅಧ್ಯಯನ ಸಮೂಹಗಳಲ್ಲಿ ಚರ್ಚೆ ನಡೆಯುತ್ತಿದೆ.  ಪ್ರತಿ ಮೂರು ತಿಂಗಳೊಮ್ಮೆ ರಾಜ್ಯದ ವಿವಿಧೆಡೆ  ಸಿನೆಮೋತ್ಸವ – ಸಂವಾದ ಸಂಘಟಿಸುತ್ತಿರುವ “ಮನುಜಮತ ಸಿನೆಯಾನ” ಗ್ರೂಪಿನಲ್ಲಿ ಈ ಪ್ರಶ್ನೆಯನ್ನು ಸಿನೆ ವಿಮರ್ಶಕ ಕೆ. ಫಣಿರಾಜ್‌ ಎತ್ತಿದ್ದಾರೆ.  “ಒಂದೇ ಸಿನೆಮಾವು ಮೂರು ವಿಭಾಗಗಳಲ್ಲಿ ಸ್ಪರ್ಧಿಸಲು ಅ.ರಾ.ಸಿನೆಮೋತ್ಸವಗಳಲ್ಲಿ ಅವಕಾಶವಿರೋದಿಲ್ಲ. ಬಿಫೆಸ್ ನಿಯಮ ಬಲ್ಲವರು ಹೇಳಬೇಕು” ಎಂದಿದ್ದಾರೆ.

ಈ ಕುರಿತಂತೆ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಮಿತಿಯಲ್ಲಿ ಪ್ರಮುಖರಾಗಿರುವ ಖ್ಯಾತ ನಿರ್ದೇಶಕ ಪಿ. ಶೇಷಾದ್ರಿ ಅವರನ್ನು  ಯು.ಎನ್.ಐ. ಸುದ್ದಿಸಂಸ್ಥೆ ಪ್ರತಿನಿಧಿ ಮಾತನಾಡಿಸಿದರು. “ಸದ್ಯ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಒಂದೇ ಸಿನೆಮಾ ಒಂದಕ್ಕಿಂತ ಹೆಚ್ಚು ಸಿನೆಮಾಗಳಲ್ಲಿ ಸ್ಪರ್ಧಿಸಬಾರದು ಎಂಬ ನಿಯಮವಿಲ್ಲ. “ಪಿಂಕಿ ಎಲ್ಲಿ” ಸಿನೆಮಾ ತಂಡದವರು ಕನ್ನಡ ಸಿನೆಮಾ ಕಾಂಪಿಟೇಶನ್‌, ಇಂಡಿಯನ್‌ ಸಿನೆಮಾ ಕಾಂಪಿಟೇಶನ್‌ ಗಳಿಗೆ ಸ್ಪರ್ಧಾ ಶುಲ್ಕ ತಲಾ ಮೂರು ಸಾವಿರದಂತೆ ಒಟ್ಟು ಆರು ಸಾವಿರ ಶುಲ್ಕ ಭರಿಸಿದ್ದಾರೆ. ಏಶಿಯನ್‌ ಕಾಂಪಿಟೇಶನ್‌ ವಿಭಾಗದಲ್ಲಿ ಸ್ಪರ್ಧಿಸಲು ಶುಲ್ಕ ಕಟ್ಟಬೇಕಾದ ಅವಶ್ಯಕತೆಯಿಲ್ಲ. ಈ ಹಿನ್ನೆಲೆಯಲ್ಲಿ ಈ ಸಿನೆಮಾಕ್ಕೆ ಮೂರು ವಿಭಾಗಗಳಲ್ಲಿಯೂ ಅವಕಾಶ ನೀಡಲಾಗಿದೆ” ಎಂದು ಹೇಳಿದರು.

ಚಿತ್ರೋತ್ಸವಕ್ಕೆ ಮಾರ್ಚ್‌ ೩ ರಂದು ಚಾಲನೆ ದೊರೆಯಲಿದೆ. ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಡಾ.ಬಾಬು ರಾಜೇಂದ್ರ ಪ್ರಸಾದ್‌ ಸಭಾಂಗಣದಲ್ಲಿ ಉದ್ಘಾಟನಾ ಸಮಾರಂಭವಿದೆ. ಈ ಹಿನ್ನೆಲೆಯಲ್ಲಿ  ಚಿತ್ರೋತ್ಸವದ ಅತಿಥೇಯ ಹೊಣೆ ಹೊತ್ತ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌ ನೇತೃತ್ವದಲ್ಲಿ ವಿವಿಧ ಸಮಿತಿಗಳು ಉತ್ಸವದ ಯಶಸ್ಸಿಗೆ ನಿರಂತರ ಶ್ರಮಿಸುತ್ತಿವೆ.



ಸುದ್ದಿ ಓದಿ