ಅಂಧತ್ವ ಮುಕ್ತ ಬಳ್ಳಾರಿ ನಗರಕ್ಕೆ ಕೈಜೋಡಿಸಿ:ಶಾಸಕ ಸೋಮಶೇಖರ ರೆಡ್ಡಿ
ವಿಶೇಷ ಅಭಿಯಾನಕ್ಕೆ ಚಾಲನೆ ಮನೆ-ಮನೆ ಭೇಟಿ ಮೂಲಕ ಪರೀಕ್ಷೆ
ಬಳ್ಳಾರಿ, ನವೆಂಬರ್ .21: ವಿಶೇಷ ಅಭಿಯಾನವನ್ನು ಕೈಗೊಳ್ಳುವುದರ ಮೂಲಕ ‘ಅಂಧತ್ವ ಮುಕ್ತ ಬಳ್ಳಾರಿ ನಗರ’ವನ್ನಾಗಿ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಹೇಳಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಯೋನಿಕ ಐ ಕೇರ್ ಚಾರಿಟೇಬಲ್ ಟ್ರಸ್ಟ್ ಹಾಗೂ ನಗರ ಆರೋಗ್ಯ ಕೇಂದ್ರ ಮಿಲ್ಲರ್ಪೇಟೆ ಸಂಯುಕ್ತ ಆಶ್ರಯದಲ್ಲಿ ಮಿಲ್ಲರಪೇಟೆ ನಗರ ಆರೋಗ್ಯ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ “ಅಂಧತ್ವ ಮುಕ್ತ ಬಳ್ಳಾರಿ ನಗರ” ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಯನ ಸೇವಾ ಪ್ರೋಜೆಕ್ಟ್ ಮೂಲಕ ಈ ವಿಶೇಷ ಅಭಿಯಾನ ಕೈಗೊಳ್ಳಲಾಗುತ್ತಿದ್ದು, ಇದರಡಿ ಅಂಧತ್ವ ನಿಯಂತ್ರಣಕ್ಕಾಗಿ ಮನೆ ಮನೆ ಭೇಟಿ ಮೂಲಕ ಅಂಧತ್ವ ಪರೀಕ್ಷೆ ಹಾಗೂ ಅಗತ್ಯವುಳ್ಳವರಿಗೆ ಕನ್ನಡಕ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು.
ಕಡುಬಡವರು ಅಂಧತ್ವದಿಂದ ಹೊರಬರುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಈ ವಿಶೇಷ ಅಭಿಯಾನದ ಸದುಪಯೋಗವನ್ನು ಬಡವರು ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಎಲ್.ಜನಾರ್ಧನ್ ಮಾತನಾಡಿ,ಅಂಧತ್ವ ಮುಕ್ತ ಬಳ್ಳಾರಿ ನಗರ ವಿಶೇಷ ಅಭಿಯಾನದ ಸಂದರ್ಭದಲ್ಲಿ ನಗರದಲ್ಲಿ 132 ಸ್ಲಂಗಳಲ್ಲಿ ಸಮೀಕ್ಷೆ ಮಾಡಲಾಗುತ್ತಿದ್ದು, 44,285 ಮನೆ ಭೇಟಿ ಮಾಡಿ 221427 ಜನರ ಪರೀಕ್ಷೆ ನಡೆಸುವ ಗುರಿ ಹೊಂದಲಾಗಿದೆ. ಈ ಕಾರ್ಯಕ್ಕೆ 68 ಆಶಾಕಾರ್ಯಕರ್ತೆಯರು, 08ಸಿಬ್ಬಂದಿ ಮೇಲ್ವಿಚಾರಣೆ, 08 ನೇತ್ರ ಸಹಾಯಕರು, 08 ಕಿರಿಯ ಮಹಿಳಾ ಆರೋಗ್ಯ ಸಹಾಯಕರನ್ನು ಈ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ ಎಂದರು.
ಕಡುಬಡವರಿಗೆ ಅಂಧತ್ವ ನಿಯಂತ್ರಣಕ್ಕಾಗಿ ಔಷಧೋಪಚಾರ, ಶಸ್ತ್ರಚಿಕಿತ್ಸೆ, ಅಗತ್ಯವುಳ್ಳವರಿಗೆ ಕನ್ನಡಕ ವಿತರಣೆ, ಸಮೀಕ್ಷೆ ಅವಧಿಯಲ್ಲಿ ನಯೋನಿಕ ಐ ಚಾರ್ಟ್ ಬಳಕೆ ಮಾಡಲಾಗುವುದು. ಇದರ ಜೊತೆಗೆ ಆರೋಗ್ಯದ ಜಾಗೃತಿ, ಕಣ್ಣಿನ ಆರೈಕೆ, ನೇತ್ರದಾನ ಕುರಿತು ಮಾಹಿತಿ ನೀಡಲಾಗುತ್ತದೆ ಎಂದು ಅವರು ವಿವರಿಸಿದರು.
ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ರಾಜಶೇಖರ ರೆಡ್ಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಶಾಸಕ ಸೋಮಶೇಖರ ರೆಡ್ಡಿ ಅವರು ಅಂಧತ್ವ ನಿಯಂತ್ರಣಕ್ಕಾಗಿ ಮನೆ ಮನೆ ಭೇಟಿ ಸಮೀಕ್ಷಾ ಜಾಥಾಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಮೋಹನಕುಮಾರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್, ವೈದ್ಯಾಧಿಕಾರಿ ಡಾ.ಸೌಜನ್ಯ, ಡಾ.ಪಾವನಿ, ಡಾ.ಸೈಯದ್ ಜಯನುಲ್ಲಾ, ಪಾಲಿಕೆ ಸದಸ್ಯ ಇಬ್ರಾಹಿಂ ಬಾಬು, ಗಂಗಾಧರ, ಶಾಂತಮ್ಮ, ನಾಗರಾಜ್, ಮೇಘರಾಜ್ ಮತ್ತಿತರರು ಇದ್ದರು. ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೌರಮ್ಮ ಪ್ರಾರ್ಥಿಸಿದರು.