ಬೇಡಿಕೆಗಳ ಈಡೇರಿಕೆಗೆ ಗ್ರಾಮ ಪಂಚಾಯಿತಿ ನೌಕರರ ಒಗ್ಗಟ್ಟಿನ ಹೋರಾಟಕ್ಕೆ ಕರೆ
ಲಕ್ಷ್ಮೇಶ್ವರ 01: ಗ್ರಾಮ ಪಂಚಾಯಿತಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಕೇವಲ ಹೋರಾಟ ನಡೆಸಿದರೆ ಸಾಲದು. ಎಲ್ಲಾ ಗ್ರಾಮ ಪಂಚಾಯಿತಿ ನೌಕರರು ಒಗ್ಗಟ್ಟಿನಿಂದ ಹೋರಾಟದಲ್ಲಿ ಪಾಲ್ಗೊಂಡು ತಮ್ಮ ಶಕ್ತಿಯನ್ನು ಪ್ರದರ್ಶಿಸಿದಾಗ ಮಾತ್ರ ಸರ್ಕಾರದ ಗಮನ ಸೆಳೆದು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ ಎಂದು ಲಕ್ಷ್ಮೇಶ್ವರ ತಾಲೂಕು ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಅರ್ಕಸಾಲಿ ಹೇಳಿದರು. ತಮ್ಮ ಹುಟ್ಟುಹಬ್ಬದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ನೌಕರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ನೌಕರರಿಗೆ ಸಂಬಂಧಿಸಿದ ಬೇಡಿಕೆಗಳ ಈಡೇರಿಕೆಗಾಗಿ ನಡೆಯುವ ಎಲ್ಲ ಹೋರಾಟಗಳ ಸಂದರ್ಭದಲ್ಲಿ ನೌಕರರು ತಮ್ಮ ಕೆಲಸಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಪಾಲ್ಗೊಳ್ಳಬೇಕು. ಸಂಘಟಿತರಾಗಿ ಹೋರಾಟ ನಡೆಸಿದಾಗ ಮಾತ್ರ ನಮ್ಮ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ದೊರೆಯಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ನೌಕರರಾದ ಮಾಂತೇಶ ಮಾದಳ್ಳಿ, ಶಂಕರ ಗೊಣೇಪ್ಪನವರ, ಸಿದ್ದು ಹರದಗಟ್ಟಿ, ಕಿರಣ ಗೌಡ ಪಾಟೀಲ ಸೇರಿದಂತೆ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ನೌಕರರು ಉಪಸ್ಥಿತರಿದ್ದರು.