ಕೊರೋನಾ 2ನೇ ಅಲೆ: ಮುಂಜಾಗÀ್ರತಾ ಕ್ರಮಕ್ಕೆ ಒತ್ತಾಯ
ಬಳ್ಳಾರಿ 26: ಕಳೆದ ನಾಲ್ಕಾರು ದಿನಗಳಿಂದ ಇಡೀ ರಾಜ್ಯದಲ್ಲಿ ದಿನೇ ದಿನೇ ಕೊರೋನಾದ 2ನೇ ಅಲೆ ಅಬ್ಬರಿಸುತ್ತಿದ್ದು, ಅದರಲ್ಲೂ ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರಮುಖವಾಗಿ ದಕ್ಷಿಣ ಭಾರತದಲ್ಲೇ ಅತಿದೊಡ್ಡ ಕಾರ್ಖಾನೆಯಾಗಿರುವ ಜಿಂದಾಲ್ ಸೇರಿದಂತೆ ವಿವಿಧ ಕಾರ್ಖಾನೆಗಳಲ್ಲಿ ಅಂತಾರಾಜ್ಯ ಕಾರ್ಮಿಕರು ಹೆಚ್ಚಾಗಿರುವುದರಿಂದ ಕಡ್ಡಾಯವಾಗಿ ಕೊರೋನಾ ತಪಾಸಣೆ ಮಾಡಿಸುವುದು ಕಡ್ಡಾಯಗೊಳಿಸಬೇಕು. ಅಂತೆಯೇ ಎಲ್ಲಾ ಕಾರ್ಮಿಕರಿಗೂ ಮುಂಜಾಗ್ರತಾ ಕ್ರಮವಾಗಿ ತಪಾಸಣೆ ಕಡ್ಡಾಯವಾಗಿ ಮಾಡಬೇಕು ಎಂದು ಒತ್ತಾಯಿಸಿ ಶುಕ್ರವಾರ ಬೆಳಿಗ್ಗೆ ಕರ್ನಾಟಕ ಜನಸೈನ್ಯ ಸಂಘಟನೆಯು ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿಗಳಾದ ಪಿ.ಎಸ್.ಮಂಜುನಾಥರವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಜನಸೈನ್ಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ.ಎರ್ರಿಸ್ವಾಮಿ ಅವರು, ಒಂದು ವೇಳೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಇದ್ದಲ್ಲಿ ಕಳೆದ ವರ್ಷ ಆಗಿರುವ ಅನಾಹುತಗಳನ್ನು ನೆನಪಿಸಿಕೊಂಡಾಗ.... ಪ್ರಮುಖವಾಗಿ ಜಿಂದಾಲ್ ಕಾರ್ಖಾನೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಮಹಾಮಾರಿ ಕೊರೋನಾ ಬಲಿಯಾದ ದೃಶ್ಯಗಳನ್ನು ಈಗಲೂ ನಮ್ಮ ಕಣ್ಮುಂದೆ ಕಾಣುತ್ತಿವೆ.2020ನೇ ಸಾಲಿನ ದಿನಗಳನ್ನು ಕೆಲವು ಕೆಟ್ಟ ಮತ್ತು ಕೆಲವು ಒಳ್ಳೆಯ ದಿನಗಳನ್ನು ನಾವೆಂದಿಗೂ ಮರೆಯಲು ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮೂಢವಾಗಿದೆ. ಮಾನವನ ಅಂತ್ಯಕ್ಕೆ ಕೆನ್ನಾಲಿಗೆ ಚಾಚಿರುವ ಮಹಮಾರಿ ಕೊರೋನಾ. ಈ ರೋಗಾಣು ದಾಳಿಯಿಂದ ಇಡೀ ಜಗತ್ತಿನಲ್ಲಿ ಪ್ರತ್ಯಕ್ಷವಾಗಿ ಕಾಣುತ್ತಿರುವ ಸಾವು-ನೋವುಗಳು ಅಸಂಖ್ಯಾತ. ನಾನಾ ಸಮಸ್ಯೆಗಳು ಎದುರಾಗುವ ಜೊತೆಗೆ ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡು ಮೂಲ ಸೇರಿದ್ದಾರೆ. ಅದೆಷ್ಟೋ ಬಡಜನತೆ ಊಟವಿಲ್ಲದೆ ಪರದಾಡುತ್ತಿರುವುದನ್ನು, ಕಾರ್ಮಿಕರು ಬೀದಿ ಪಾಲಾಗಿರುವುದನ್ನು ನಾವು ಕಂಡಿದ್ದೇವೆ. ಅನ್ಯರಾಜ್ಯದ ಎಷ್ಟೋ ಜನ ಕಾರ್ಮಿಕರು ತಮ್ಮ ಊರಿಗೆ ತೆರಳದೇ ಬೀದಿ ಪಾಲಾಗಿದ್ದು ಹೃದಯ ಹಿಂಡುವ ಕಥೆ. ಎಷ್ಟೋ ವಯೋವೃದ್ಧರು ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಪರದಾಡುತ್ತಿರುವುದು ಇನ್ನೂ ಕಣ್ಣಿಗೆ ಕಾಣುತ್ತಿದೆ. ಇಡೀ ವಿಶ್ವವೇ ಕೊರೋನಾ ಕಾರಣದಿಂದ ತತ್ತರಿಸಿ ಹೋಗಿರುವ ಹೊತ್ತಲ್ಲಿ ಜನ ಜೀವನದಲ್ಲಿ ನಾನಾ ವ್ಯತ್ಯಾಸಗಳು, ತಲ್ಲಣಗಳು ಉಂಟಾಗಿವೆ.
ಇದೀಗ ಕೊರೋನಾದ 2ನೇ ಅಲೆ ಪ್ರಾರಂಭವಾಗಿದ್ದು, ಪ್ರಾಥಮಿಕ ಹಂತದಲ್ಲೇ ಅದನ್ನು ಜಿಲ್ಲೆಯ ಎಲ್ಲಾ ಕಾರ್ಖಾನೆಗಳು ಈ ಮಹಾಮಾರಿ ರೋಗವನ್ನು ಕಟ್ಟಿ ಹಾಕುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಅತ್ಯಂತ ಜಾಗೃತೆಯಿಂದ ಮುನ್ನುಗ್ಗಬೇಕಾಗಿ. ಇಲ್ಲದೇ ಹೋದಾಗ ಕಳೆದ ವರ್ಷ ನಾವುಗಳು ಕಂಡ ಅದೇ ಭೀಕರ ದೃಶ್ಯಗಳನ್ನು ಮರುಕಳಿಸುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಜಿಲ್ಲಾಡಳಿತ ಎಚ್ಚೆತುಕೊಂಡು ಬಳ್ಳಾರಿ ಜಿಲ್ಲೆಯಲ್ಲಿರುವ ಎಲ್ಲಾ ಕಾರ್ಖಾನೆಗಳ ಸಿಬ್ಬಂದಿ, ಕಾರ್ಮಿಕರು ಮತ್ತು ಅಧಿಕಾರಿಗಳಿಗೆ ಕಡ್ಡಾಯವಾಗಿ ಕೊರೋನಾ ತಪಾಸಣೆಯನ್ನು ಮಾಡಿಯೇ ಒಳಬಿಡುವ ಆದೇಶ ನೀಡಬೇಕೆಂದು ಈ ಮೂಲಕ ಕರ್ನಾಟಕ ಜನಸೈನ್ಯದ ವತಿಯಿಂದ ಮನವಿ ಮಾಡಿಕೊಳ್ಳುತ್ತಿದ್ದೇವೆ. ಈ ಸಂದರ್ಭದಲ್ಲಿ ಕರ್ನಾಟಕ ಜನಸೈನ್ಯದ ಎಂ.ಚೆಂಚಯ್ಯ, ಉತ್ತರ ಕರ್ನಾಟಕದ ಉಪಾಧ್ಯಕ್ಷರಾದ ಫಯಾಜ್ ಭಾಷ, ನಾಸೀರ್ ಫಾರೂಕ್, ಮಂಜುನಾಥ್, ಗೋವಿಂದ, ಆಯೇಷಾ ಸಿದ್ದಿಕಿ, ಇಬ್ರಾಹಿಂ ಮುಂತಾದವರು ಉಪಸ್ಥಿತಿದ್ದರು.