ಮನರಂಜನೆ

ಹಿರಿಯ ನಟಿ ಸುರೇಖಾ ವಿಧಿವಶ

ಹಿರಿಯ ನಟಿ ಸುರೇಖಾ ವಿಧಿವಶ

ಬೆಂಗಳೂರು, ಜೂ.6: ಸ್ಯಾಂಡಲ್ ವುಡ್ ನ  ಹಿರಿಯ ನಟಿ ಸುರೇಖಾ (69) ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸುರೇಖಾ ಅವರು ನೃತ್ಯ ಕಲಾವಿದೆಯಾಗಿದ್ದರು. ಆಗಾಗ ಅವರು ಮಂಡಿ ನೋವಿನಿಂದ ಬಳಲುತ್ತಿದ್ದರು. ಆರೋಗ್ಯವಾಗಿಯೇ ಇದ್ದ ಅವರು ಶನಿವಾರ ರಾತ್ರಿ 9.30ರ ಸುಮಾರಿಗೆ ಟಿವಿ ನೋಡುತ್ತ ಕುಳಿತಿದ್ದರು. ಆಗ ಅವರಿಗೆ ತೀವ್ರ ಹೃದಯಾಘಾತವಾಯಿತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರು ಎಳೆದಿದ್ದಾರೆ ಎಂದು ಕುಟುಂಬದ ಮೂಲಗಳು ಮಾಹಿತಿ ನೀಡಿವೆ. ಮೂಲತಃ ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯಗಾರ್ತಿ ಆಗಿದ್ದ ಸುರೇಖಾ. ಈ ಮೂಲಕವೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಲಂಡನ್, ಪ್ಯಾರಿಸ್, ಮಾಸ್ಕೋ, ತಾಷ್ಕೆಂಟ್‌ಗಳಲ್ಲಿಯೂ ಅವರು ನೃತ್ಯ ಪ್ರದರ್ಶನ ನೀಡಿದ್ದರು.ಡಾ.ರಾಜ್‌ಕುಮಾರ್‌ ಸೇರಿದಂತೆ ಹಲವು ಪ್ರಮುಖ ನಟರೊಂದಿಗೆ ತೆರೆ ಹಂಚಿಕೊಂಡಿದ್ದ ಅವರು ‘ಆಪರೇಷನ್ ಜಾಕ್‌ಪಾಟ್’, ‘ತ್ರಿಮೂರ್ತಿ’, ‘ಒಲವು ಗೆಲುವು’, ‘ಗಿರಿ ಕನ್ಯೆ’, ‘ಸಾಕ್ಷಾತ್ಕಾರ’, ‘ಕಸ್ತೂರಿ ನಿವಾಸ’, ‘ಹುಲಿಯ ಹಾಲಿನ ಮೇವು’, ‘ಶಿವಕನ್ಯೆ’, ‘ಕಾವೇರಿ’, ‘ಕೆಸರಿನ ಕಮಲ’, ‘ಬ್ಯಾಂಕರ್ ಮಾರ್ಗಯ್ಯ’, ‘ಆಲೆಮನೆ’, ‘ನಾಗರಹೊಳೆ’, ‘ತಾಯಿ ದೇವರು’, ‘ಭಕ್ತ ಸಿರಿಯಾಳ’ ಮೊದಲಾದವು ಅವರು ಅಭಿನಯಿಸಿದ ಪ್ರಮುಖ ಚಿತ್ರಗಳು. 150ಕ್ಕೂ ಹೆಚ್ಚು ಚಿತ್ರಗಳ ಪ್ರಮುಖ ಪಾತ್ರಗಳಲ್ಲಿ ಸುರೇಖಾ ಅವರು ಬಣ್ಣಹಚ್ಚಿದ್ದರು. ಸುರೇಖಾ ಅವರು ವಿವಾಹವಾಗಿರಲಿಲ್ಲ. ಸಹೋದರಿಯರಾದ ಶಾರದಾ ಹಾಗೂ ಪ್ರೇಮಾ ಅವರನ್ನು ಸುರೇಖಾ ಅಗಲಿದ್ದಾರೆ. ಭಾನುವಾರ ಬೆಳಿಗ್ಗೆ ನಗರದ ಬನಶಂಕರಿ ಚಿತಾಗಾರದಲ್ಲಿ ಸುರೇಖಾ ಅವರ ಅಂತ್ಯಕ್ರಿಯೆಯನ್ನು ಕುಟುಂಬ್ಥರು ನೆರವೇರಿಸಿದ್ದಾರೆ.





ಸುದ್ದಿ ಓದಿ