ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಆರೋಪ: ಕೃಪಾ ಆಳ್ವ ಮೊಬೈಲ್ ಸಿಸಿಬಿ ವಶಕ್ಕೆ
ಸಹಾಯಕ ಪೊಲೀಸ್ ಆಯುಕ್ತ ರವಿ ನೇತೃತ್ವದ ತನಿಖಾ ತಂಡವು ವಿಚಾರಣೆ ವೇಳೆ ಮೊಬೈಲ್ ಹಸ್ತಾಂತರಿಸುವಂತೆ ಆಳ್ವ ಅವರಿಗೆ ಸೂಚಿಸಿತ್ತು. ಬಳಿಕ ಮೊಬೈಲ್ ಅನ್ನು ವಶಕ್ಕೆ ಪಡೆದಿದೆ ಎಂದು ವರದಿಯಾಗಿದೆ. ಮೊಬೈಲ್‌ನಲ್ಲಿರುವ ಸಂದೇಶಗಳು, ಕರೆ ದಾಖಲೆಗಳು ಮತ್ತು ಇತರ ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸಲು ತನಿಖಾಧಿಕಾರಿಗಳು ಮುಂದಾಗಿದ್ದಾರೆ. ಪೊಲೀಸರು ಆಳ್ವ ಅವರ ಧ್ವನಿ ಮಾದರಿಯನ್ನೂ ಸಂಗ್ರಹಿಸಿದ್ದು, ಅದನ್ನು ವಿಡಿಯೊದಲ್ಲಿನ ಧ್ವನಿಯೊಂದಿಗೆ ಹೋಲಿಸಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲು ಯೋಜಿಸಿದ್ದಾರೆ.
ಕೃಪಾ ಆಳ್ವ ಮತ್ತು ಪವರ್ ಟಿವಿಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶೆಟ್ಟಿ ಕಾಣಿಸಿಕೊಂಡಿರುವ ವಿಡಿಯೊವನ್ನು 2023ರ ಫೆಬ್ರುವರಿಯಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾಗಿದೆ. 2026ರ ಸೆಪ್ಟೆಂಬರ್‌ನಲ್ಲಿ ಈ ವಿಡಿಯೊ ಯೂಟ್ಯೂಬ್‌ನಲ್ಲಿ ಕಾಣಿಸಿಕೊಂಡ ಬಳಿಕ, ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಲು ಸಂಚು ರೂಪಿಸಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.
ಆಳ್ವ ಅವರು ಸಿಸಿಬಿ ಮುಂದೆ ಮೂರು ಬಾರಿ ಹಾಜರಾಗಿ ಹೇಳಿಕೆ ನೀಡಿದ್ದಾರೆ. ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿರುವ ಅವರು, ವಿಡಿಯೊಗೆ ಸಂಬಂಧಿಸಿ ಶೆಟ್ಟಿ ತಮ್ಮನ್ನು ಸಂಪರ್ಕಿಸಿದ್ದರು ಎಂದು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಬಂಧನದಿಂದ ರಕ್ಷಣೆ ಕೋರಿ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದೆ.
ಪೊಲೀಸರು ಶೆಟ್ಟಿ ಅವರ ನಿವಾಸ ಮತ್ತು ಕಚೇರಿಯಲ್ಲಿ ಶೋಧ ನಡೆಸಿದ್ದಾರೆ. ವಿಡಿಯೊವನ್ನು ಹರಡಲು ಬಳಸಲಾಗಿದೆ ಎನ್ನಲಾದ ಮೊಬೈಲ್ ಫೋನ್ ಅನ್ನೂ ಪರಿಶೀಲಿಸಿದ್ದಾರೆ. ವಿಡಿಯೊವನ್ನು ಯಾವ ಉದ್ದೇಶಕ್ಕಾಗಿ ಚಿತ್ರೀಕರಿಸಲಾಯಿತು ಮತ್ತು ಅದನ್ನು ಸಾರ್ವಜನಿಕಗೊಳಿಸುವಲ್ಲಿ ಯಾರ ಪಾತ್ರವಿತ್ತು ಎಂಬ ಬಗ್ಗೆ ಸಿಸಿಬಿ ತನಿಖೆ ಮುಂದುವರಿಸಿದೆ.