ವಿಜಯಪುರ

ಬಸ್ ಕ್ಯಾಂಟರ್ ಮುಖಾಮುಖಿ ಡಿಕ್ಕಿ: ದಂಪತಿ ಸೇರಿ ಮೂವರು ಸಾವು; ಆರು ಮಂದಿಗೆ ಗಂಭೀರ ಗಾಯ

ಬಸ್ ಕ್ಯಾಂಟರ್ ಮುಖಾಮುಖಿ ಡಿಕ್ಕಿ: ದಂಪತಿ ಸೇರಿ ಮೂವರು ಸಾವು; ಆರು ಮಂದಿಗೆ ಗಂಭೀರ ಗಾಯ

ಲೋಕದರ್ಶನ ವರದಿ 

   ಚಡಚಣ 16  : ರಾಜ್ಯ ಹೆದ್ದಾರಿ 41ರ ಲೋಣಿ ಕ್ರಾಸ್ ಸಮೀಪ ಸಾರಿಗೆ ಸಂಸ್ಥೆಯ ಬಸ್ ಹಾಗೂ ಸಿಮೆಂಟ್ ಸಾಗಿಸುತ್ತಿದ್ದ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಓರ್ವ ದಂಪತಿ ಸೇರಿದಂತೆ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದೆ. 

  ಚಡಚಣ ಪಟ್ಟಣದಿಂದ ಬದಾಮಿ ಕಡೆಗೆ ಸುಮಾರು 30 ಪ್ರಯಾಣಿಕರನ್ನು ಹೊತ್ತು ತೆರಳುತ್ತಿದ್ದ ಸಾರಿಗೆ ಬಸ್ ಹಾಗೂ ಝಳಕಿ ಕಡೆಯಿಂದ ಚಡಚಣಕ್ಕೆ ಬರುತ್ತಿದ್ದ ಸಿಮೆಂಟ್ ಹೊತ್ತ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಕ್ಯಾಂಟರಿನ ಟಾಯರ್ ಬ್ಲಾಸ್ಟ್‌ ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಸಾರಿಗೆ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.  

  ಪ್ರಾಥಮಿಕ ಮಾಹಿತಿಯ ಪ್ರಕಾರ ಮೃತಪಟ್ಟವರನ್ನು ಕ್ಯಾಂಟರ್ ವಾಹನದಲ್ಲಿದ್ದ ಹಾವಿನಾಳ ಗ್ರಾಮದ ಅಶೋಕ ಮಹಾದೇವ ಉಟಗಿ ಆತನ ಪತ್ನಿ ರಾಧಾಬಾಯಿ ಅಶೋಕ ಉಟಗಿ ಹಾಗೂ ಸಾರಿಗೆ ಬಸ್ ಚಾಲಕ ನಿಡಗುಂದಿ ಗ್ರಾಮದ ಹಣಮಂತ ಚಲವಾದಿ ಎಂದು ಗುರುತಿಸಲಾಗಿದೆ. 

  ಡಿಕ್ಕಿಯ ರಭಸಕ್ಕೆ ಸಾರಿಗೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ 6 ಪ್ರಯಾಣಿಕರಿಗೆ ಗಂಭೀರ ಪ್ರಮಾಣದ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಜಿಲ್ಲ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನುಳಿದ 17ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಯದಿಂದ ಪಾರಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಚಡಚಣ ಪಿ.ಎಸ್‌.ಐ. ಸೋಮೇಶ ಗೆಜ್ಜಿ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ, ಸ್ಥಳ ಪರೀಶೀಲಿಸಿದರು.   


ಸುದ್ದಿ ಓದಿ