ಮುಂದಗೋಡ

ಬಸ್ ನಿರ್ವಾಹಕಿ ವಿದ್ಯಾರ್ಥಿಗಳಿಗೆ ಬಯ್ಯುತ್ತಾರೆ: ವಿದ್ಯಾರ್ಥಿನಿಯರ ಆರೋಪ

ಬಸ್ ನಿರ್ವಾಹಕಿ ವಿದ್ಯಾರ್ಥಿಗಳಿಗೆ ಬಯ್ಯುತ್ತಾರೆ: ವಿದ್ಯಾರ್ಥಿನಿಯರ ಆರೋಪ

ಮುಂಡಗೋಡ:ಬಸ್ ನಿರ್ವಾಹಕಿ ವಿದ್ಯಾರ್ಥಿಗಳಿಗೆ ಬಯ್ಯುತ್ತಾರೆ. ಕೆಲವೊಮ್ಮೆ ಬಸ್ ಹತ್ತುತ್ತಿರುವಾಗಲೆ ವಿಶಲ್ ಹಾಕುತ್ತಾರೆ ಎಂದು ಆರೋಪಿಸಿ ತಾಲೂಕಿನ ಸನವಳ್ಳಿ ಗ್ರಾಮದ ವಿದ್ಯಾರ್ಥಿನಿಯರು ಪೊಲೀಸರ ಎದುರು ಅಳಲು ತೋಡಿಕೊಂಡ ಘಟನೆ ಬುಧವಾರ ಸಂಜೆ ನಡೆದಿದೆ.   

ಸವಣೂರ-ಕಾರವಾರ ಮಾರ್ಗದ ಸರ್ಕಾರಿ ಬಸ್ ಸನವಳ್ಳಿ ಗ್ರಾಮದಲ್ಲಿ ಹಾದು ಬರುತ್ತದೆ. ಗ್ರಾಮದಿಂದ ನಿತ್ಯವೂ ವಿದ್ಯಾರ್ಥಿಗಳು ಪಟ್ಟಣದ ಶಾಲಾ-ಕಾಲೇಜಿಗೆ ಬರುತ್ತಾರೆ. ಆದರೆ ಬಸ್ ನಿರ್ವಾಹಕಿ ವಿದ್ಯಾರ್ಥಿಗಳಿಗೆ ಬಯ್ಯುತ್ತಾರೆ. ಬಸ್ ಮೆಟ್ಟಿಲಲ್ಲಿ ಇರುವಾಗಲೆ ಬಸ್ ಬಿಡಲು ವಿಶಲ್ ಹಾಕುತ್ತಾರೆ. ಕಳೆದ ಒಂದು ತಿಂಗಳಿಂದ ಈ ರೀತಿಯಾಗಿ ಮಾಡುತ್ತಿದ್ದಾರೆ. ಈ ಬಸ್ಸಿನಲ್ಲಿ ಶಾಲೆಗೆ ಹೋಗುವುದೆಂದರೆ ಭಯವಾಗುತ್ತದೆ ಎಂದು ವಿದ್ಯಾರ್ಥಿಗಳು ಪಿಎಸ್‌ಐ ಎನ್‌.ಡಿ.ಜಕ್ಕಣ್ಣವರ ಮುಂದೆ ದೂರಿದರು.  

ಇದಕ್ಕೆ ಪ್ರತಿಕ್ರಿಯಿಸಿದ ನಿರ್ವಾಹಕಿ ಮೀನಾಕ್ಷಿ ನಾನು ಮಕ್ಕಳಿಗೆ ಬೈದಿಲ್ಲ. ಯಾರದ್ದೋ ಮಾತು ಕೇಳಿ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಕೆಲವೊಮ್ಮೆ ಬಸ್ ಹತ್ತುವ ವಿದ್ಯಾರ್ಥಿಗಳು ಬಸ್ ಚಲಿಸುತ್ತಿದ್ದಂತೆಯೆ ಇಳಿದು ಬಿಡುತ್ತಾರೆ. ಬಿದ್ದು ಏನಾದರೂ ಅನಾಹುತ ಮಾಡಿಕೊಂಡರೆ ನಾನು ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಬುದ್ಧಿ ಮಾತು ಹೇಳಿರಬಹುದು. ಉದ್ದೇಶಪೂರ್ವಕವಾಗಿ ಬೈದಿಲ್ಲ. ಅವರ ಆರೋಪಗಳೆಲ್ಲವೂ ಸುಳ್ಳು ಎಂದು ವಾದಿಸಿದರು. ಈ ವೇಳೆ ಮಾತನಾಡಿದ ಗ್ರಾಮಸ್ಥ ಸಂಪತ್‌ಕುಮಾರ ಕ್ಯಾಮನಕೇರಿ ಬುಧವಾರ ಬೆಳಗ್ಗೆ ನಾನೇ ಕಣ್ಣಾರೆ ನೋಡಿದ್ದೇನೆ. ವಿದ್ಯಾರ್ಥಿಗಳು ಹತ್ತುತ್ತಿರುವಾಗಲೇ ವಿಶಲ್ ಹಾಕಿದ್ದೀರಿ. ಈ ಬಗ್ಗೆ ವಿಡಿಯೋ ಸಹ ಮಾಡಿದ್ದೇನೆ. ಮಕ್ಕಳ ಮೇಲೆ ದ್ವೇಷ ಮಾಡುವುದನ್ನು ಬಿಟ್ಟು ಬಡವರ ಮಕ್ಕಳು ಕಲಿಯಲು ಪಟ್ಟಣಕ್ಕೆ ಬರುತ್ತಾರೆ ಎಂಬ ಭಾವನೆಯಿಂದ ಬಸ್ಸಿನಲ್ಲಿ ಹತ್ತಿಸಿಕೊಂಡು ಹೋಗಿ ಎಂದರು. ಇದಕ್ಕೆ ವಿರೋಧಿಸಿದ ನಿರ್ವಾಹಕಿ ನಾನು ಯಾವ ಮಕ್ಕಳನ್ನು ಬಿಟ್ಟು ಬರುವುದಿಲ್ಲ. ನಿತ್ಯವೂ ಹತ್ತಿಸಿಕೊಂಡೇ ಬರುತ್ತೇವೆ. ನನ್ನದಲ್ಲದ ತಪ್ಪನ್ನು ನಾನು ಒಪ್ಪಿಕೊಳ್ಳುವುದಿಲ್ಲ. ವಿದ್ಯಾರ್ಥಿಗಳು ಅಥವಾ ಗ್ರಾಮಸ್ಥರ ದೂರು ಇದ್ದರೆ ಬರೆದುಕೊಳ್ಳಿ. ನಾನೂ ಕಂಪ್ಲೇಂಟ್ ಕೊಡುತ್ತೇನೆ ಎಂದು ಠಾಣೆಯ ಒಳಗಡೆ ಹೊರಟರು.   

ಪಿಎಸ್‌ಐ ಯಲ್ಲಾಲಿಂಗ ಕುನ್ನೂರ ಮಾತನಾಡಿ ಸಾರಿಗೆ ಸಿಬ್ಬಂದಿಯಾಗಿ ತಾವು ವಿದ್ಯಾರ್ಥಿಗಳ ಜೊತೆ ಸೌಜನ್ಯದಿಂದ ವರ್ತಿಸಿ. ವಿದ್ಯಾರ್ಥಿಗಳ ತಪ್ಪು ಮಾಡಿದರೆ ಬುದ್ಧಿ ಹೇಳಿರಿ. ಮಾತಿಗೆ ಮಾತು ಬೆಳೆಸುವುದರಲ್ಲಿ ಅರ್ಥವಿಲ್ಲ ಎಂದರು. ಯಾರ ಮಾತಿಗೂ ಒಪ್ಪದ ನಿರ್ವಾಹಕಿ ನಾನು ತಪ್ಪು ಮಾಡದೆ ಇರುವಾಗ ವಿದ್ಯಾರ್ಥಿಗಳ ಮತ್ತು ಗ್ರಾಮಸ್ಥರ ದೂರನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ವಾದಿಸಿದರು. ನಂತರ ಚಾಲಕ ಬಸ್ ತೆಗೆದುಕೊಂಡು ಬಂದ ಮೇಲೆ ಪಿಎಸ್‌ಐ ಎನ್‌.ಡಿ.ಜಕ್ಕಣ್ಣವರ ತಾವೇ ಮುಂದೆ ನಿಂತು ವಿದ್ಯಾರ್ಥಿಗಳಿಗೆ ಬಸ್ ಹತ್ತಿಸಿ ಕಳಿಸಿದರು. 


ಸುದ್ದಿ ಓದಿ