ಸ್ತನ್ಯಪಾನ ಅತ್ಯಂತ ಮಹತ್ವದ ಪ್ರಕ್ರಿಯೆ: ಡಾ. ಗಂಗಾಧರ ಗೌಡ
ಬಳ್ಳಾರಿ 04: ಸ್ತನ್ಯಪಾನ ಅತ್ಯಂತ ಮಹತ್ವದ ಪ್ರಕ್ರಿಯೆಯಾಗಿದ್ದು ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಮಹತ್ತರವಾದ ಪಾತ್ರ ನಿರ್ವಹಿಸುತ್ತದೆ. ದೇಶದಲ್ಲಿ ಶೇ.89 ರಷ್ಟು ಹೆರಿಗೆಗಳು ಆಸ್ಪತ್ರೆಯಲ್ಲಿ ಆದರೂ ಕೇವಲ ಶೇ.51 ತಾಯಂದಿರು ಮಾತ್ರ ಹೆರಿಗೆಯಾದ 1ತಾಸಿನೊಳಗೆ ಮಕ್ಕಳಿಗೆ ಎದೆಹಾಲು ನೀಡುತ್ತಿರುವುದು ಕಳವಳಪಡುವ ವಿಷಯವಾಗಿದೆ ಎಂದು ವಿಮ್ಸ್ ನಿರ್ದೇಶಕ ಡಾ.ಟಿ.ಗಂಗಾಧರ ಗೌಡ ಅವರು ಹೇಳಿದರು.
ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮಕ್ಕಳ ವಿಭಾಗ ಹಾಗೂ ಭಾರತೀಯ ಮಕ್ಕಳ ವೈದ್ಯರ ಸಂಘದ ಸಹಯೋಗದಲ್ಲಿ ವಿಮ್ಸ್ನ ಮಕ್ಕಳ ವಿಭಾಗದ ಉಪನ್ಯಾಸ ಕೊಠಡಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎದೆ ಹಾಲಿನಲ್ಲಿರುವ ಪೋಷಕಾಂಶಗಳು ಮಗುವಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಸಾಕಷ್ಟು ರೋಗಗಳಿಗೆ ಲಸಿಕೆಯಂತೆ ಕಾರ್ಯನಿರ್ವಹಿಸಿ ನವಜಾತ ಸೋಂಕುಗಳನ್ನು ತಡೆಗಟ್ಟುತ್ತದೆ. ಆದ್ದರಿಂದ ಪ್ರತಿಯೊಬ್ಬ ತಾಯಿಯೂ ಮೊದಲ 6 ತಿಂಗಳವರೆಗೆ ಮಗುವಿಗೆ ಕೇವಲ ಎದೆಹಾಲನ್ನು ಮಾತ್ರ ನೀಡಲು ಹಾಗೂ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೃತಕ ಆಹಾರಗಳಿಂದ ದೂರವಿರಲು ಅವರು ಸಲಹೆ ನೀಡಿದರು.
ಶತಶತಮಾನಗಳಿಂದಲೂ ತಾಯಿ ಮಗುವಿಗೆ ಹಾಲುಣಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದರೂ, ಕೆಲವು ವರ್ಷಗಳಿಂದ ಮಹಿಳೆಯ ಕಾರ್ಯಕ್ಷೇತ್ರ ಬದಲಾಗುತ್ತಿರುವುದರಿಂದ ಹಾಗೂ ಮಹಿಳೆಯರಲ್ಲಿ ಕೆಲಸದ ಒತ್ತಡದಿಂದ ಸ್ತನ್ಯಪಾನದ ಮಹತ್ವ ಕಡಿಮೆಯಾಗಿದ್ದರಿಂದ 1991 ರಲ್ಲಿ 148 ದೇಶಗಳಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆರಂಭಿಸಲಾಯಿತು ಎಂದು ವಿವರಿಸಿದ ಅವರು ಆಗಸ್ಟ್ 1 ರಿಂದ 7 ರವರೆಗೆ ಎದೆಹಾಲಿನ ಮಹತ್ವ ಹಾಗೂ ಉಪಯೋಗಗಳ ಬಗ್ಗೆ ಜಾಗೃತಿ ಮೂಡಿಸುವ ಹಲವಾರು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ ಎಂದರು.
ಇದೇ ಸಮಯದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ಮಕ್ಕಳ ಆರೋಗ್ಯ ವಿಭಾಗದ ಕೈಪಿಡಿ ಮತ್ತು ದಿನಚರಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅಶ್ವಿನ್ಕುಮಾರ್ ಸಿಂಗ್, ವಿಮ್ಸ್ನ ಮುಖ್ಯ ಆಡಳಿತಾಧಿಕಾರಿಗಳಾದ ಚೆನ್ನಪ್ಪ, ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ದುರುಗಪ್ಪ, ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿಗಳಾದ ಡಾ.ಬಿ.ಕೆ.ಶ್ರೀಕಾಂತ್, ವಿಮ್ಸ್ ಆಸ್ಪತ್ರೆಯ ಶುಶ್ರೂಷಕ ಅಧೀಕ್ಷಕರಾದ ಸಂಪತ್ಕುಮಾರ್ ಮತ್ತು ವಿದ್ಯಾರ್ಥಿಗಳು ಇತರರು ಇದ್ದರು.