ಲೇಖನಗಳು

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಮಹಿಳೆಯರು...

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಮಹಿಳೆಯರು...

ವೇಲು ನಾಚಿಯಾರ್  

ತಮಿಳುನಾಡಿನ ಶಿವಗಂಗೆಯನ್ನು ಅತ್ಯಂತ ದಿಟ್ಟತನದಿಂದ ಆಳಿದ ರಾಣಿ ವೇಲು ನಾಚಿಯಾರ್‌. ಝಾನ್ಸಿರಾಣಿ ಲಕ್ಷ್ಮಿಬಾಯಿ ಕಿತ್ತೂರು ಚೆನ್ನಮ್ಮ ಳಿಗೂ ಮೊದಲೇ ಬ್ರಿಟಿಷರೊಂದಿಗೆ ವೀರಾವೇಶದಿಂದ ಹೋರಾಡಿದ ಮಹಿಳೆ ಇವಳು. 1730 ರಿಂದ 1796 ರವರೆಗೆ ಈಕೆಯ ಕಾಲಘಟ್ಟ. ಈಕೆಯ ಪತಿಯನ್ನು ಬ್ರಿಟಿಷರು ಕೊಂದು ಹಾಕಿದಾಗ ಅಲ್ಲಿಂದ ತಪ್ಪಿಸಿಕೊಂಡ ವೇಲು ನಾಚಿಯಾರ್ ಮಹಿಳಾ ಸೈನ್ಯವನ್ನು ಕಟ್ಟಿ ಅವರಿಗೆ ಯುದ್ಧ ತರಬೇತಿಯನ್ನು ನೀಡುತ್ತಾಳೆ. ಆ ಸೈನ್ಯದಲ್ಲಿ ಕುವಲಿ ಎಂಬ ಮಹಿಳೆಯು ವೇಲೂ ನಾಚಿ ಯಾರಳನ್ನು ಪ್ರಾಣಾಪಾಯದಿಂದ ಉಳಿಸುತ್ತಾಳೆ. ಹೀಗಾಗಿ ಸೇನಾ ಪ್ರಮುಖಳನ್ನಾಗಿ ಕುವಲಿಯನ್ನು ಮಾಡುತ್ತಾಳೆ. ಚಿಕ್ಕ ಚಿಕ್ಕ ಕದನ ಮಾಡುತ್ತಾ ಅಷ್ಟಷ್ಟೇ ಪ್ರದೇಶಗಳನ್ನು ಗೆಲ್ಲುತ್ತಾ ಸಾಗುತ್ತಾಳೆ ಕುವಲಿ. ಬ್ರಿಟಿಷರ ಹತ್ತಿರವಿರುವ ಆಧುನಿಕ ಶಸ್ತ್ರಾಸ್ತ್ರಗಳನ್ನು ನಾಶಪಡಿಸದೇ  ಶಿವಗಂಗೆ ಕೋಟೆಯನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲವೆಂಬುದನ್ನು ಮನಗಂಡ ವೇಲು ನಾಚಿಯಾರ್ ಅದಕ್ಕಾಗಿ ಮಾನವಬಾಂಬ್ ಳನ್ನಾಗಿ ಕುವಲಿಯನ್ನು ತಯಾರು ಮಾಡುತ್ತಾಳೆ. ಕುವಲಿ ತನ್ನ ಮೈಮೇಲೆಲ್ಲ ತುಪ್ಪ ಸುರಿದುಕೊಂಡು ಸೀರೆಯ ಸೆರಗಿಗೆ ದೇವರ ಗರ್ಭಗುಡಿಯಲ್ಲಿದ್ದ ದೀಪದಿಂದ ಬೆಂಕಿ ಹಚ್ಚಿಕೊಂಡು ಬ್ರಿಟಿಶರ ಶಸ್ತ್ರಾಸ್ತ್ರಗಳ ಉಗ್ರಾಣದಲ್ಲಿ ಹೊರಳಾಡುತ್ತಾಳೆ. ಹೀಗಾಗಿ ಇಡೀ ಶಸ್ತ್ರಾಗಾರಿಕೆಗೆ ಬೆಂಕಿ ತಗುಲಿ ಬ್ರಿಟಿಷರ ಶಸ್ತ್ರಾಸ್ತ್ರಗಳೆಲ್ಲ  ಬೆಂಕಿಗೆ ಆಹುತಿಯಾಗಿ ನಾಶವಾಗುತ್ತವೆ. ಮುಂದೆ ವೇಲು ನಾಚಿಯಾರ್ ಕೋಟೆಗೆ ದಾಳಿ ಮಾಡಿದಾಗ ಬ್ರಿಟಿಷರು ಸುಲಭವಾಗಿ ಸೋಲು ಕಾಣುತ್ತಾರೆ. ಕೋಟೆ ವಶಪಡಿಸಿಕೊಂಡ  ವೇಲು ನಾಚಿಯಾರ್ ಹತ್ತು ವರ್ಷಗಳ ವರೆಗೆ ಧರ್ಮರಕ್ಷಣೆ ಮಾಡುತ್ತಾ ರಾಜ್ಯಭಾರ ನಡೆಸುತ್ತಾಳೆ. ಇತಿಹಾಸದಲ್ಲೇ ಮೊದಲ ಬಾರಿಗೆ  ಮಾನವ ಬಾಂಬ್‌ರಳನ್ನು ಪರಿಚಯಿಸಿದ ಕೀರ್ತಿ ವೇಲು ನಾಚಿಯಾರ್‌ಗೆ  ಹಾಗೂ ಮಾನವ ಬಾಂಬ್‌ಳಾಗಿ  ಕುಯಿಲಿಯ ಕೀರ್ತಿ ಅಜರಾಮರವಾಗಿದೆ.  

ಬ್ರಿಟಿಷರನ್ನು ಎದುರಿಸಿ ಸೋಲಿಸಿದ ಕೀರ್ತಿ ವೇಲು  ನಾಚಿಯಾರ್‌ಳ ಹೆಸರನ್ನು ಇತಿಹಾಸ ಪುಟಗಳಲ್ಲಿ ಸುವರ್ಣ ಅಕ್ಷರದಿಂದ ಬರೆಯಲ್ಪಟ್ಟಿದೆ.  

ಅವಧ್ ರಾಣಿ ಬೇಗಂ ಹಜರತ್ ಮಹಲ್  

ಅವಧ್(ಅಯೋಧ್ಯಾ) ರಾಜ್ಯದ ನವಾಬನಾಗಿದ್ದ ನವಾಬ್ ವಜಿದ್ ಅಲಿಷಾನನ ಎರಡನೇ ಪತ್ನಿ ಹಜರತ್ ಮಹಲ್‌. ಈಕೆಯನ್ನು ಅವಧ್‌ನ ಬೇಗಮ್ ಎಂದು ಕರೆಯಲಾಗುತ್ತಿತ್ತು. 1857ರ ಪ್ರಥಮ ಸ್ವಾತಂತ್ರ್ಯ ಹೋರಾಟದ ವೇಳೆ ಬ್ರಿಟಿಷರ ವಿರುದ್ಧ ಹೋರಾಡಿದ ವೀರರಾಣಿಯರ ಪೈಕಿ ಈಕೆಯೂ ಒಬ್ಬಳು. ಸಿಪಾಯಿದಂಗೆಯೆದ್ದಾಗ ಕಾಳ್ಗಿಚ್ಚಿನಂತೆ ಅದು ದೆಹಲಿ, ಲಖನೌ, ಮೀರತ್ ಮುಂತಾದೆಡೆ ಹಬ್ಬಿತು. ಕ್ರಾಂತಿಕಾರಿಗಳು ನಾನಾ ವಿಧವಾಗಿ ಬ್ರಿಟಿಷರ ಸೈನ್ಯಕ್ಕೆ ಆಘಾತವನ್ನು ಉಂಟು ಮಾಡಿದರು. ಅವರೆಲ್ಲ ಬ್ರಿಟಿಷರ ವಿರುದ್ಧ ದಂಗೆ ಎದ್ದಿದ್ದರೂ ಅವರನ್ನೆಲ್ಲ ನಡೆಸಿಕೊಂಡು ಹೋಗುವ ಸಮರ್ಥ ನಾಯಕತ್ವ ಅವರಿಗಿರಲಿಲ್ಲ. ಆ ಸಂದರ್ಭದಲ್ಲಿ ಅವರೆಲ್ಲರಿಗೂ ಹಜರತ್ ಮಹಲ್ ಮುಂದಾಳತ್ವ ವಹಿಸಿದಳು. 1857ರ ದಂಗೆಯ ನಂತರ 1858ರಲ್ಲಿ ಬ್ರಿಟಿಷ್ ರಾಣಿ ವಿಕ್ಟೋರಿಯಾ ಭಾರತದ ಆಡಳಿತವನ್ನು ಈಸ್ಟ್‌ ಇಂಡಿಯಾ ಕಂಪನಿಯಿಂದ ತಾನೇ ಸ್ವತಃ ವಹಿಸಿಕೊಳ್ಳುವುದಾಗಿ ಫರ್ಮಾನು ಹೊರಡಿಸಿದಾಗ ಅದಕ್ಕೆ ತಕ್ಕ ಪ್ರತ್ಯುತ್ತರ ಕೊಟ್ಟವಳು ಈ ಹಜರತ್ ಮಹಲ್‌. ಹೀಗಾಗಿ ಆಕೆ ಬ್ರಿಟಿಷ್‌ರ ಮೊದಲ ವೈರಿಯಾದಳು. ಅಪಾರ ಸೈನ್ಯದಿಂದ ದಂಡೆತ್ತಿ ಬಂದ ಬ್ರಿಟಿಷ್‌ರನ್ನು ಕಂಡು ಹಜರತ್ ಮಹಲ್ ನೇಪಾಳಕ್ಕೆ ಓಡಿಹೋದಳು. ಹೀಗಾಗಿ ಅವಧ್ ಪ್ರಾಂತ ಬ್ರಿಟಿಷರ ಕೈವಶವಾಯಿತು. ಬಡತನದಲ್ಲಿ ಹುಟ್ಟಿ ಬೆಳೆದಿದ್ದರೂ ಅವಧ್ ಪ್ರಾಂತದ ರಾಣಿಯಾಗಿ ಚೆನ್ನಾಗಿ ಆಡಳಿತ ನಿರ್ವಹಿಸಿದ್ದಳು. ಆದರೆ ದೈವ ಕೊನೆಗಾಲದಲ್ಲಿಯೂ ಆಕೆ ಬಡತನದಲ್ಲಿಯೇ ಬಾಳುವಂತೆ ಮಾಡಿತು ಎಂಬುದು ವಿಪರ್ಯಾಸ.  

ಮೇಡಂ ಕಾಮಾ  

ವಿದೇಶಿ ನೆಲದಲ್ಲಿ ಭಾರತದ ಧ್ವಜವನ್ನು ಹಾರಿಸಿದ ಪ್ರಥಮ ಮಹಿಳೆ ಮೇಡಂ ಕಾಮಾ. ಇಂಗ್ಲೆಂಡ್ ಫ್ರಾನ್ಸ್‌ ಮುಂತಾದ ದೇಶಗಳಲ್ಲಿ ಹೋಗಿ ಭಾರತದಲ್ಲಿಯ ಬ್ರಿಟಿಷರ ದೌರ್ಜನ್ಯ, ಶೋಷಣೆ ಕುರಿತು ಮೊದಲು ತಿಳಿಸಿದವಳೇ ಮೇಡಂ ಕಾಮಾ. ಇದರಿಂದ ತಲೆನೋವಾದ ಬ್ರಿಟಿಷರು ಅವಳನ್ನು ಭಾರತಕ್ಕೆ ಬರಲು ಕೊಡಲಿಲ್ಲ. ಆದರೇನಂತೆ ಪ್ಯಾರಿಸ್ ನಲ್ಲಿದ್ದೇ "ಒಂದೇ ಮಾತರಂ" ವಾರ್ತಾ ಪತ್ರಿಕೆಯನ್ನು ತೆಗೆದು ಅದರ ಮೂಲಕ ಭಾರತದಲ್ಲಿ ನಡೆಯುವ ಅನ್ಯಾಯದ ಕುರಿತು ಪ್ರಪಂಚಕ್ಕೆ ಅರುಹಿದಳು.  

1907ರಲ್ಲಿ ಆಗಸ್ಟ್‌ ಮೂರನೇ ವಾರ ಜರ್ಮನಿಯ ಸ್ಟಟ್ ಗಾಟ್ ಎಂಬಲ್ಲಿ ಅಂತರರಾಷ್ಟ್ರೀಯ ಸಮಾಜವಾದಿ ಸಮ್ಮೇಳನ ನಡೆದಿತ್ತು. ಆ ಸಮ್ಮೇಳನಕ್ಕೆ ಭಾರತದ ವರಾದ ಮೇಡಂ ಕಾಮಾ ಕೂಡ ಹೋಗಿದ್ದರು. ಅಲ್ಲಿ ಅನೇಕ ದೇಶಗಳ ಪ್ರತಿನಿಧಿಗಳು ಆಗಮಿಸಿದ್ದರು. ಮೇಡಂ ಕಾಮಾ ಭಾರತದ ಸ್ಥಿತಿಗತಿಯ ಕುರಿತು ಅಲ್ಲಿ ಭಾಷಣ ಮಾಡಿದ್ದಲ್ಲದೆ ಅವರೆಲ್ಲರ ಸಹಾಯಹಸ್ತವನ್ನು ಚಾಚಿದಳು. ಬ್ರಿಟಿಷರ ದಬ್ಬಾಳಿಕೆಯನ್ನು ಖಂಡಿಸಿದ್ದಲ್ಲದೆ ಭಾರತದ ಧ್ವಜವನ್ನು ಅಲ್ಲಿ ಹಾರಿಸಿದಳು. ಆಗ ಇಡೀ ಸಭೆ ಎದ್ದು ನಿಂತು ಧ್ವಜಕ್ಕೆ ಗೌರವ ಸಲ್ಲಿಸಿತ್ತು. ಅಲ್ಲಿ ಆಕೆ ಮಾಡಿದ ಭಾಷಣದ ಪ್ರತಿಗಳು ಮುಂದೆ ಕ್ರಾಂತಿಕಾರಿಗಳಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿಸಲು ನಾಂದಿ ಹಾಡಿದವು.  

ಮೇಡಂ ಕಾಮಾ ಕೇವಲ ಭಾರತವಷ್ಟೇ ಅಲ್ಲ ಜಗತ್ತಿನಾದ್ಯಂತ ಎಲ್ಲೆಲ್ಲಿ ದೌರ್ಜನ್ಯ ದಬ್ಬಾಳಿಕೆ ನಡೆಯುತ್ತದೆಯೋ ಅವುಗಳನ್ನೆಲ್ಲ ಖಂಡಿಸುತ್ತಿದ್ದಳು. ಇದು ಬ್ರಿಟಿಷರಿಗೆ ತಲೆನೋವು ತಂದಿತ್ತಿತು. ಆಕೆಯನ್ನು ಬ್ರಿಟನ್‌ನಿಂದ ಕೂಡ ಹೊರಹಾಕಿದರು. ಭಾರತಕ್ಕೂ ಬರಲು ಕೊಡಲಿಲ್ಲ. ಹೀಗಾಗಿ ಸಾಕಷ್ಟು ಸಮಯ ಆಕೆ ಪ್ಯಾರಿಸ್‌ನಲ್ಲಿಯೇ  ಇದ್ದರೂ ಅಲ್ಲಿಂದಲೂ ಭಾರತದ ಸ್ವಾತಂತ್ರ್ಯಕ್ಕಾಗಿ ಅವಿರತ ಶ್ರಮಿಸುತ್ತಿದ್ದಳು. ಮುಂದೆ ಆಕೆ ಭಾರತಕ್ಕೆ ಬರಬೇಕೆಂದಾಗ ಬ್ರಿಟಿಷರು ಆಕೆಗೆ ಶರತ್ತನ್ನು ವಿಧಿಸಿದರು. ಆಕೆ ಯಾವುದೇ ಕ್ರಾಂತಿಕಾರಿಗಳೊಂದಿಗೆ ಸಂಪರ್ಕವೇರಿ​‍್ಡಸ ಕೂಡದೆಂದೂ, ಯಾವುದೇ ಚಳುವಳಿಯಲ್ಲಿ ಭಾಗವಹಿಸಬಾರದೆಂದು ಶರತ್ತು ನೀಡಿ ಭಾರತಕ್ಕೆ ಹೋಗಲು ಅನುಮತಿ ನೀಡಿದರು. ಆದರೆ ಆಕೆ 1936 ಆಗಸ್ಟ್‌ 13ರಂದು ಮುಂಬೈಯಲ್ಲಿ ಇಹಲೋಕ ತ್ಯಜಿಸಿದರು. ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮೊದಲೇ ಕ್ರಾಂತಿಯ ಕಿಡಿಯೊಂದು ಅಸ್ತಂಗತವಾಯಿತು.  

ಅಝೀಝಾನ್ ಬಾಯಿ  

1857ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಮುಖ್ಯ ಮಹಿಳಾ ನಾಯಕಿಯರಲ್ಲಿ ಅಝೀಝಾನ್ ಬಾಯಿ ಹೆಸರೂ ಕೂಡ ಮುಂಚೂಣಿಯಲ್ಲಿದೆ. ಅಝೀಝಾನ್‌ಳ ತಾಯಿ ವ್ಯೇಶ್ಯ ಆಗಿದ್ದಳು. ಆಕೆ ಬೇಗನೆ ತೀರಿಕೊಂಡಳು. ನಂತರ ಅಝೀಝಾನ್ ಕೂಡ ತನ್ನ ವೇಶ್ಯಾಗೃಹ ತೆಗೆದಳು. ಆದರೆ ಅದು ಹೆಸರಿಗೆ ಮಾತ್ರ ವೇಶ್ಯಾ ಗೃಹವಾಗಿದ್ದು ಆಕೆ ಕ್ರಾಂತಿ ಯೋಧರ ಶುಶ್ರೂಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು. ಆಕೆಯ ಮನೆ ಎಲ್ಲ ಕ್ರಾಂತಿಕಾರರ ಸಭೆ ನಡೆಸುವ ತಾಣವಾಗಿತ್ತು ಎಂದರೆ ಸುಳ್ಳಲ್ಲ. ಆಕೆ ಸ್ವತಹ ಒಂದು ಮಹಿಳಾ ಸೈನ್ಯವನ್ನು ಕಟ್ಟಿದ್ದು ಅವರ ಕೆಲಸ ಕ್ರಾಂತಿಕಾರರು ಗಾಯಾಳುವಾಗಿ ಬಂದರೆ ಆರೈಕೆ ಮಾಡುವುದು  ಶಸ್ತ್ರಾಸ್ತ್ರಗಳನ್ನು ಪೂರೈಸುವುದು,  ಅವರನ್ನು ಹುರಿದುಂಬಿಸುವಂತಹ ಕೆಲಸಮಾಡ ಬೇಕಾಗುತ್ತಿತ್ತು. ಬ್ರಿಟಿಷರು ಮನೆಯ ಮೇಲೆ ದಾಳಿ ಮಾಡಿ ಆಕೆಯ ಎಲ್ಲ ಸಂಪತ್ತನ್ನು ಲೂಟಿ ಮಾಡಿದರು. "ನಿನ್ನ ತಪ್ಪುಗಳನ್ನು ಒಪ್ಪಿಕೊಂಡರೆ ನಿನಗೆ ಜೀವ ದಾನ ನೀಡುತ್ತೇನೆ" ಎಂದು ಆಸೆ  ಹುಟ್ಟಿಸಿದ ಹ್ಯಾವ್ಲಾಕ್‌. ಎಂದಿಗೂ ಆಸೆಗೆ ಬಲೀಬೀಳದಂತಿದ್ದಳು  ಅಝೀಝಾನ್‌. ಕೊನೆಗೆ ಬ್ರಿಟಿಷ್ ಸರ್ಕಾರ ಆಕೆಯನ್ನು ನೇಣಿಗೇರಿಸಿತು. ಎಂತಹ  ಚಿಕ್ಕವಯಸ್ಸಿನಲ್ಲಿಯೇ ಮಹತ್ವದ ಹೋರಾಟದಲ್ಲಿ ಭಾಗವಹಿಸಿ ಸ್ವಾತಂತ್ರ್ಯದ ಕಿಡಿ ಮೂಡಿಸಿದ ಅಝೀಝಾನ್ ಜಾನ್ ಹೆಸರು ಕಾನ್ಪುರದ ಜನತೆಯ ಮನದಲ್ಲಿ ಇಂದಿಗೂ ಹಚ್ಚಹಸಿರಾಗಿದೆ  

-   ದೀಪಿಕಾ ಚಾಟೆ 

    ಬೆಳಗಾವಿ  


- * * * - 


ಸುದ್ದಿ ಓದಿ