ಮುಂದಗೋಡ

ಈಜಿನಲ್ಲಿ ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪುಟ್ಟ ಪೋರನ ಸಾಧನೆ

ಈಜಿನಲ್ಲಿ ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪುಟ್ಟ ಪೋರನ ಸಾಧನೆ

ಪಾಂಡಿಚೇರಿ ತರಬೇತಿ ಕೇಂದ್ರದಲ್ಲಿ ತರಬೇತಿಗೆ ಚಿಗಳ್ಳಿಯ ಓಂಕಾರ ಆಯ್ಕೆ  

ಶಶಿಧರ ಕುಲಕರ್ಣಿ  

ಮುಂಡಗೋಡ 04: 12ವರ್ಷದ ಪುಟ್ಟ ಪೋರನೊಬ್ಬ ಈಜಿನಲ್ಲಿ ಮಿಲಿಟರಿ ಗರಡಿಯಲ್ಲಿ ಪಳಗಿ ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಸಾಧನೆ ತೋರಿ ಪಾಂಡಿಚೇರಿ ಕೇಂದ್ರಾಡಳಿತದಲ್ಲಿ ಬರುವ ಯಾನಮ್‌ನ ಸಾಯಿ ಸ್ಪೋರ್ಟ್ಸ್‌ ಅಥಾರಿಟಿ ಆಫ್ ಇಂಡಿಯಾ ತರಬೇತಿ ಕೇಂದ್ರದಲ್ಲಿ ಈಜು ತರಬೇತಿಗೆ ಆಯ್ಕೆಯಾಗುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾನೆ.   

ಗಡಿ ಭದ್ರತಾ ಪಡೆಯ ನಿವೃತ್ತ ಯೋಧ ತಾಲೂಕಿನ ಚಿಗಳ್ಳಿ ಗ್ರಾಮದ ಶಂಭುಲಿಂಗ ಕೀರ್ತಪ್ಪನವರ ರಕ್ಷಾ ದಂಪತಿ ಪುತ್ರ ತಾಲೂಕಿನ ಕರಗಿನಕೊಪ್ಪದ ಲೊಯೋಲ ಕೇಂದ್ರೀಯ ವಿದ್ಯಾಲಯದಲ್ಲಿ 6ನೇ ಇಯತ್ತೆಯಲ್ಲಿ ಓದುತ್ತಿದ್ದ ಓಂಕಾರ ಈಜುವುದರಲ್ಲಿ ಪ್ರವೀಣ. ಇವರ ಇನ್ನೊಬ್ಬ ಪುತ್ರ ಸ್ವಯಂ ಇದೇ ವಿದ್ಯಾಲಯದಲ್ಲಿ 4ನೇ ತರಗತಿ ಓದುತ್ತಿದ್ದಾನೆ.  ಬಾಲ್ಯದಿಂದಲೂ ಈಜಿನಲ್ಲಿ ಹೊಂದಿದ್ದ ಈತನ ಆಸಕ್ತಿಗೆ ತಂದೆ ಶಂಭುಲಿಂಗ ನೀರೆರೆದು ಪೋಷಿಸುತ್ತಾ ಬಂದರು. ನಾಲ್ಕೂವರೆ ವರ್ಷದವನಿದ್ದಾಗಲೇ ಓಂಕಾರ ಈಜು ಕಲಿಯಲು ಆರಂಭಿಸಿದ. ಐದೂವರೆ ವರ್ಷದವನಿದ್ದಾಗ ಜಿಲ್ಲಾಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ್ದನು. ಆಗಲೇ ಸುಮಾರು 1080ಮೀ. ಉದ್ದದ ನೀರಿನಲ್ಲಿ ಸತತವಾಗಿ ಈಜಿ ಆಶ್ಚರ್ಯ ಮೂಡಿಸಿದ್ದನು. ಏಳೂವರೆ ವರ್ಷದವನಿದ್ದಾಗ ಈತ ತನ್ನ ಗ್ರಾಮ ಚಿಗಳ್ಳಿಯಿಂದ ಎಲ್ಲಿಯೂ ನಿಲ್ಲದೇ ತಾಲೂಕಿನ ನ್ಯಾಸರ್ಗಿ ಪ್ಲಾಟ್‌ವರೆಗೂ ಸುಮಾರು 11ಕಿ.ಮೀ. ಓಡಿ ಆತ್ಮ ವಿಶ್ವಾಸ ತೋರಿದ್ದನು. ಮಾನಸಿಕ, ದೈಹಿಕವಾಗಿ ಬಲಿಷ್ಠವಾಗಿರಲಿ ಮುಂದೆ ಸಾಧನೆಗೆ ಅನುಕೂಲವಾಗಲಿ ಎಂದು ಈತನ ತಂದೆ 1ನೇ ತರಗತಿಯಿಂದ 4ನೇ ತರಗತಿವರೆಗೆ ಜೋಧಪುರ ಮಿಲಿಟರಿ ತರಬೇತಿ ಕೇಂದ್ರ(ಎಸ್‌ಟಿಸಿ)ದಲ್ಲಿ ಈಜು ತರಬೇತಿ ಕೊಡಿಸಿದ್ದರು.  

ಪ್ರತಿನಿತ್ಯ ಬೆಳಗ್ಗೆ ಚಿಗಳ್ಳಿ ಶಾಲೆಯ ಆಟದ ಬಯಲಲ್ಲಿ ವ್ಯಾಯಾಮ ಮತ್ತು 200ಮೀ. ಮತ್ತು 800ಮೀ. ಓಟದ ಪರೀಕ್ಷೆ ಕೊನೆಗೆ ಈಜು ಪರೀಕ್ಷೆ ಸತತ ಅಭ್ಯಾಸ ಇದ್ದಿದ್ದರಿಂದ ಈಜಲು ಕಠಿಣ ಎನಿಸಲಿಲ್ಲ. 2019ರಲ್ಲಿ 25ಮೀ. ಅಂತರದ ಈಜು ಸ್ಪರ್ಧೆಯಲ್ಲಿ ರಾಜಸ್ಥಾನದಿಂದ ಎರಡು ಬಾರಿ ರಾಜ್ಯಮಟ್ಟ ಮತ್ತು ಒಮ್ಮೆ ರಾಷ್ಟ್ರಮಟ್ಟದ 50ಮೀ. ಅಂತರದ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ ಈತನ ಸಾಧನೆ ಪರಿಗಣಿಸಿ ಭಾರತ ಸರ್ಕಾರದಿಂದ ಯಾನಮ್‌ನ ಸಾಯಿ ಸ್ಪೋರ್ಟ್ಸ್‌ ಅಥಾರಿಟಿ ಆಫ್ ಇಂಡಿಯಾ ತರಬೇತಿ ಕೇಂದ್ರದಲ್ಲಿ ಈಜು ತರಬೇತಿಗೆ ಆಯ್ಕೆಯಾಗುವ ಅವಕಾಶ ದೊರೆತಿದ್ದು ಈತನ ಪದವಿ ಶಿಕ್ಷಣ ಮುಗಿಯುವವರೆಗೂ ಅಲ್ಲಿಯೇ ಈಜಿನ ತರಬೇತಿ ನೀಡಲಾಗುತ್ತದೆ. 

ಭವಿಷ್ಯದಲ್ಲಿ ಓಂಕಾರನ ಈಜು ತರಬೇತಿ ಯಶಸ್ವಿಯಾಗಲಿ ಎಂಬುದು ತಾಲೂಕಿನ ಜನತೆಯ ಹಾರೈಕೆಯಾಗಿದೆ.  

ಶಂಭುಲಿಂಗ ಕೀರ್ತಪ್ಪನವರ, ಓಂಕಾರನ ತಂದೆ, ಗಡಿ ಭದ್ರತಾ ಪಡೆಯ ನಿವೃತ್ತ ಯೋಧ: ಮೊದಲಿನಿಂದಲೂ ನನಗೆ ಕ್ರೀಡೆಗಳಲ್ಲಿ ತುಂಬಾ ಆಸಕ್ತಿ ಇತ್ತು. ನನ್ನಿಂದ ಸಾಧಿಸಲು ಸಾಧ್ಯವಾಗಲಿಲ್ಲ. ಆದರೆ ನನ್ನ ಮಗನ ಈಜಿಗೆ ಪ್ರೋತ್ಸಾಹ ನೀಡುತ್ತಾ ಬಂದೆ. ಅವನು ಹೀಗೆಯೇ ಮುಂದುವರಿದು ಸಾಧನೆ ಮಾಡಿ ಈಜಿನಲ್ಲಿ ಯಶಸ್ಸು ಕಂಡು ತಾಲೂಕಿನ ಹೆಸರು ತರುವಂತಾಗಲಿ. 


ಸುದ್ದಿ ಓದಿ