ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸ್ ನೀಡಿಕೆ ಆರಂಭ
ಬಳ್ಳಾರಿ 10: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಆರೋಗ್ಯ ಕಾರ್ಯಕರ್ತರು ಹಾಗೂ ಮಂಚೂಣಿ ಕಾರ್ಯರ್ತರಿಗೆ ಹಾಗೂ ಸಹ ಅಸ್ವಸ್ಥತೆ ಹೊಂದಿರುವ 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್-19 ಮುನ್ನಚ್ಚರಿಕೆ ಡೋಸ್(ಬೂಸ್ಟರ್ ಡೋಸ್) ನೀಡುವ ಕಾರ್ಯಕ್ರಮ ಸೋಮವಾರದಿಂದ ಆರಂಭವಾಗಿದೆ.
ಬಳ್ಳಾರಿಯ ಜಿಲ್ಲಾಸ್ಪತ್ರೆ ಸೇರಿದಂತೆ,ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು,ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಹಾಗೂ ವಿಜಯನಗರ ಜಿಲ್ಲೆಯ ತಾಲೂಕು ಆರೋಗ್ಯ ಕೇಂದ್ರಗಳು,ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ನೀಡುವ ಕಾರ್ಯ ಆರಂಭವಾಗಿದೆ.
ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಸೋಮವಾರ ಏರಿ್ಡಸಿದ್ದ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಚಾಲನೆ ನೀಡಿದರು. ಜೊತೆಗೆ ಅವರು ಸಹ ಬೂಸ್ಟರ್ ಡೋಸ್ ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಎಸ್ಪಿ ಸೈದುಲು ಅಡಾವತ್,ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಅವರು ಸಹ ಮನ್ನಚ್ಚರಿಕೆ ಲಸಿಕೆ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು, ಆರೋಗ್ಯ ಕಾರ್ಯಕರ್ತರು ಹಾಗೂ ಮಂಚೂಣಿ ಕಾರ್ಯರ್ತರಿಗೆ ಹಾಗೂ ಸಹ ಅಸ್ವಸ್ಥತೆ ಹೊಂದಿರುವ 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್-19 ಮುನ್ನಚ್ಚರಿಕೆ ಡೋಸ್(ಬೂಸ್ಟರ್ ಡೋಸ್) ನೀಡಲಾಗುತ್ತಿದೆ.
ಅವಳಿ ಜಿಲ್ಲೆಗಳಲ್ಲಿ 22 ಸಾವಿರ ಆರೋಗ್ಯ ಕಾರ್ಯಕರ್ತರು, 20 ಸಾವಿರ ಕಂದಾಯ ಇಲಾಖೆ,ಪೊಲೀಸ್ ಇಲಾಖೆ,ನಗರ ಸ್ಥಳೀಯ ಸಂಸ್ಥೆಗಳು,ಜಿಪಂ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಂಚೂಣಿ ಕಾರ್ಯಕರ್ತರಿದ್ದಾರೆ. ಇದರ ಜೊತೆಗೆ ಸಹ ಅಸ್ವಸ್ಥತೆ ಹೊಂದಿರುವ 60 ವರ್ಷ ಮೇಲ್ಪಟ್ಟವರಿಗೂ ಬೂಸ್ಟರ್ ಡೋಸ್ ನೀಡಲಾಗುತ್ತಿದೆ ಎಂದರು.
ಅವಳಿ ಜಿಲ್ಲೆಗಳಲ್ಲಿ ಲಸಿಕೆ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ ಡಿಸಿ ಮಾಲಪಾಟಿ ಅವರು 80 ಸಾವಿರ ಕೋವಿಶಿಲ್ಡ್, 25 ಸಾವಿರ ಕೊವ್ಯಾಕ್ಸಿನ್ ಲಸಿಕೆ ಸಂಗ್ರಹ ಇದೆ ಎಂದರು.
ಜಿಲ್ಲೆಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.ಜನರು ಕೂಡ ಕೋವಿಡ್ ನಿಯಮಾವಳಿಗಳಿಗೆ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್,ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್, ಸಹಾಯಕ ಆಯುಕ್ತ ಡಾ.ಆಕಾಶ ಶಂಕರ್, ಡಿಎಚ್ಒ ಡಾ.ಎಚ್.ಎಲ್.ಜನಾರ್ಧನ್, ಜಿಲ್ಲಾಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಆರ್ಸಿಚ್ ಅಧಿಕಾರಿ ಡಾ.ಅನಿಲಕುಮಾರ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಈಶ್ವರ ದಾಸಪ್ಪನವರ್ ಸೇರಿದಂತೆ ಅನೇಕರು ಇದ್ದರು.