ಸಾರಿಗೆ ನಗರದಲ್ಲಿ ಯಶಸ್ವಿಯಾಗಿ ಜರುಗಿದ ರಕ್ತದಾನ ಹಾಗೂ ಎನ್.ಸಿ.ಡಿ ಶಿಬಿರ
ಗದಗ 21 : ರಕ್ತವನ್ನು ಯಾವುದೇ ಕಾರ್ಖಾನೆಯಲ್ಲಿ ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ ಇದನ್ನು ಕೇವಲ ಮಾನವರಿಂದ ಮಾತ್ರ ಪಡೆಯಲು ಸಾಧ್ಯ. ಯಾವುದೇ ಜಾತಿ ಮತ ಭೇದವಿಲ್ಲದೆ ಒಬ್ಬರ ರಕ್ತ ಇನ್ನೊಬ್ಬರ ಜೀವ ಉಳಿಸುವುದರಿಂದ ಇದು ಸಮಾಜದಲ್ಲಿ ಮಾನವೀಯತೆ ಮತ್ತು ಒಗ್ಗಟ್ಟನ್ನು ಬೆಳೆಸುತ್ತದೆ. 18 ರಿಂದ 65 ವರ್ಷದೊಳಗಿನ ಆರೋಗ್ಯವಂತ ವ್ಯಕ್ತಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಸುರಕ್ಷಿತವಾಗಿ ರಕ್ತದಾನ ಮಾಡಬಹುದಾಗಿದೆ. ರಕ್ತದಾನ ಮಾಡಿದ ನಂತರ ದೇಹವು ವೇಗವಾಗಿ ಹೊಸ ರಕ್ತದ ಕಣಗಳನ್ನು ಉತ್ಪಾದಿಸುತ್ತದೆ ಇದು ದೇಹವನ್ನು ಹೆಚ್ಚು ಸುಸ್ತು ರಹಿತವಾಗಿ ಮತ್ತು ಚುರುಕಾಗಿರಲು ಸಹಾಯಮಾಡುತ್ತದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳಾದ ಡಾ. ರಾಜೇಂದ್ರ ಎಸ್ ಗಡಾದ ಅವರು ಹೇಳಿದರು.
ಇಲ್ಲಿಯ ಕಳಸಾಪುರ ರಸ್ತೆಯಲ್ಲಿಯ ಸಾರಿಗೆ ನಗರದ ಈಶ್ವರ ದೇವಸ್ಥಾನದಲ್ಲಿ ಸಾರಿಗೆ ನಗರ ಯುಥ್ ಅಸೋಸಿಯೇಷನ್, ಗದಗ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಪ್ರಾಥಮಿಕ ಆರೋಗ್ಯ ಕೇಂದ್ರ ನಾಗಾವಿ ,ಕೆ ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬಾಸಲ್ ಮಿಷನ್ ಆಸ್ಪತ್ರೆ ಹಾಗೂ ಸುರಕ್ಷಾ ಸ್ಕಿನ್ ಕೇರ್ ಕ್ಲಿನಿಕ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರಿ್ಡಸಲಾಗಿದ್ದ ರಕ್ತದಾನ ಶಿಬಿರ ಹಾಗೂ ಎನ್ ಸಿ ಡಿ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮೇಲಿನಂತೆ ಮಾತನಾಡಿದ ಡಾ. ಗಡಾದವರು,
ಮುಂದುವರೆದು ಮಾತನಾಡುತ್ತಾ ರಕ್ತದಾನವು ಮಾನವಕುಲಕ್ಕೆ ನೀಡಬಹುದಾದ ಅತ್ಯಂತ ಶ್ರೇಷ್ಠ ಕೊಡುಗೆಯಾಗಿದೆ ತೀವ್ರ ಅಪಘಾತಗಳು ಶಸ್ತ್ರಚಿಕಿತ್ಸೆಗಳು ಮತ್ತು ಪ್ರಸವದ ಸಮಯದಲ್ಲಿ ರಕ್ತದ ಅಗತ್ಯವಿರುವ ರೋಗಿಗಳಿಗೆ ರಕ್ತದಾನವು ಹೊಸ ಜೀವನವನ್ನು ನೀಡುತ್ತದೆ .ಕ್ಯಾನ್ಸರ್, ಥೇಲಸೆಮೀಯಾ ಮತ್ತು ಹಿಮೋಫಿಲಿಯಾದಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ನಿಯಮಿತವಾಗಿ ರಕ್ತದ ಅವಶ್ಯಕತೆಗಳನ್ನು ನೀಡುತ್ತದೆ ಎಂದರು.