ಸುಳ್ಳು, ಪೋಕಳ ನಕಾಶೆ ತಯಾರಿಸಿ ಬಿನ್ ಶೇತ್ಕಿ: ತಕರಾರು ಅರ್ಜಿ
ಮುಂಡಗೋಡ: ಪಟ್ಟಣದ ಸ.ನಂ.129 ಮತ್ತು 130ರ ಮಾಲೀಕರಾದ ಎಲ್.ಶಡೈಯಿ ಸೊಸೈಟಿಯವರು ಅಮ್ಮಾಜಿ ಕೆರೆಯ ಕಾಲುವೆ ಮುಚ್ಚಿ ನಕ್ಷೆಯಿಂದ ತೆಗೆಯಿಸಿ ಅದರ ವಡ್ಡಿನ ಮೇಲೆ ಇರುವ ದಾರಿಯನ್ನು ಬಂದ್ ಮಾಡಿ ಜಿಲ್ಲಾಧಿಕಾರಿಯಲ್ಲಿ ಶೇತ್ಕಿ ಜಮೀನಿನ ಸುಳ್ಳು ಮತ್ತು ಪೋಕಳ ನಕಾಶೆ ತಯಾರಿಸಿ ಬಿನ್ ಶೇತ್ಕಿ ಮಾಡುತ್ತಿರುವುದಕ್ಕೆ ಪಟ್ಟಣದ ಸ.ನಂ.129 ಮತ್ತು 130ರ ಅಕ್ಕ-ಪಕ್ಕದ ಜಮೀನಿನ ರೈತರು ತಹಶೀಲ್ದಾರ ಶಂಕರ ಗೌಡಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ತಕರಾರು ಅರ್ಜಿ ಸಲ್ಲಿಸಿದರು.
ಪಟ್ಟಣದ ಯಲ್ಲಾಪುರ ರಸ್ತೆಯ ಅಮ್ಮಾಜಿ ಕೆರೆಯ ಉಬ್ಬು ನೀರು ಹರಿಯುವ ಕಾಲುವೆ ಸ.ನಂ.113ರಿಂದ ಹಾದು 114, 124, 125, 126, 127, 128, 129, 130ರಿಂದ131 ನೇ ಕೆರೆಗೆ ಬಿಟ್ಟು ಅಲ್ಲಿಂದ ಮುಂದೆ 95, 94, 89, 88, 86 ಮೂಲಕ ಹಾದು ತಟ್ಟಿಹಳ್ಳಿ ಕೆರೆಗೆ ಹೋಗಿ ಅಲ್ಲಿಂದ ಮುಂದೆ ತೇಗಿನಕೊಪ್ಪ ಹಳ್ಳಕ್ಕೆ ಬಿದ್ದು ಮುಂದೆ ಸಾಗುತ್ತದೆ. ಕಾಲುವೆ ದೊಡ್ಡದಾಗಿದ್ದು ಕಾಲುವೆಯ ವಡ್ಡಿನ ಮೇಲೆ ರೈತರು ತಮ್ಮ ದಿನನಿತ್ಯದ ಕೃಷಿ ಚಟುವಟಿಕೆಯ ಪರಿಕರಗಳನ್ನು ತಗೆದುಕೊಂಡು ಹೋಗಿ ತಮ್ಮ ಚಟುವಟಿಕೆಗಳನ್ನು ಅನಾದಿ ಕಾಲದಿಂದ ಮಾಡುತ್ತಾ ಬಂದಿದ್ದಾರೆ. ಇತ್ತೀಚೆಗೆ ಎಲ್.ಶಡೈಯಿ ಸೊಸೈಟಿಯವರು ಸ.ನಂ. 129, 130ರ ಮೂಲ ಮಾಲೀಕ ರಾಯ್ಕರ ಇವರಿಂದ ಖರೀದಿಸಿದ ನಂತರ ಜಮೀನಿನಲ್ಲಿ ಹಾದು ಹೋಗಿರುವ ಕೆರೆಯ ಉಬ್ಬು ನೀರಿನ ಕಾಲುವೆಯನ್ನು ಮುಚ್ಚಿದ್ದು ಅಲ್ಲದೆ ತಮ್ಮ ನಕಾಶೆಯಲ್ಲಿ ಸಹಿತ ಈ ಮೊದಲು ಇರುವ ಗ್ರಾಮ ನಕಾಶೆಯ ನೈಜತೆಯನ್ನು ಸರ್ವೇ ಅಧಿಕಾರಿಗಳೊಂದಿಗೆ ಮಿಲಾಪಿಯಾಗಿ ತಿದ್ದುಪಡಿ ಮಾಡಿ ಸ.ನಂ.129 ಮತ್ತು 130ರಲ್ಲಿ ಯಾವುದೇ ಕಾಲುವೆ ಇಲ್ಲದ ರೀತಿಯಲ್ಲಿ ನಕ್ಷೆ ತಯಾರಿಸಿಕೊಂಡು ಜಿಲ್ಲಾಧಿಕಾರಿಯವರಲ್ಲಿ ನಿಜಾಂಶ ಮುಚ್ಚಿಟ್ಟು ಸುಳ್ಳು ದಾಖಲಾತಿಗಳನ್ನು ಮುಂದೆ ಮಾಡಿ ಜಮೀನನ್ನು ಬಿನ್ ಶೇತ್ಕಿಯಾಗಿ ಪರಿವರ್ತನೆ ಮಾಡಲು ಅರ್ಜಿಯನ್ನು ಸಲ್ಲಿಸಿರುವ ಬಗ್ಗೆ ತಿಳಿದು ಬಂದಿರುತ್ತದೆ. ಎಲ್.ಶಡೈಯಿ ಸೊಸೈಟಿಯವರು ಆರ್ಥಿಕ ಮತ್ತು ರಾಜಕೀಯ ಪ್ರಭಾವ ಬೀರಿ ತಮಗೆ ಬೇಕಾದ ರೀತಿಯಲ್ಲಿ ನಕಾಶೆಯಲ್ಲಿರುವ ಅಮ್ಮಾಜಿ ಕೆರೆಯ ಉಬ್ಬು ನೀರಿನ ಕಾಲುವೆ ಗುರುತುಗಳನ್ನು ಸರ್ವೆ ಅಧಿಕಾರಿಗಳೊಂದಿಗೆ ಕೂಡಿಕೊಂಡು ಬೇಕಾಯ್ದೆಯಾಗಿ ರದ್ದುಪಡಿಸಿ ಸರ್ವೇ ನಕಾಶೆ ಮಾಡಿಕೊಂಡಿದ್ದಾರೆ. ಕಾಲುವೆಯನ್ನು ಮುಚ್ಚಿ ರೈತರಿಗೆ ಅನ್ಯಾಯ ಎಸಗುತ್ತಿದ್ದಾರೆ. ಮನವಿಯೊಂದಿಗೆ ನಕಾಶೆ ಹಾಜರುಪಡಿಸಿದ್ದು ಎಲ್.ಶಡೈಯಿ ಸೊಸೈಟಿಯವರು ಬಿನ್ ಶೇತ್ಕಿ ಮಾಡಲು ಸಲ್ಲಿಸಿರುವ ಜಮೀನಿನ ನಕ್ಷೆಯೊಂದಿಗೆ ಪರೀಶೀಲನೆ ಮಾಡಬೇಕು. ನೈಜ ದಾಖಲಾತಿಯನ್ನು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ತಿದ್ದು ಪಡಿಯ ಮೂಲಕ ರದ್ದು ಪಡಿಸಿ ಪೋಕಳ ನಕಾಶೆ ಮೂಲಕ ಬಿನ್ ಶೇತ್ಕಿ ಅರ್ಜಿ ಸಲ್ಲಿಸಿದ್ದಕ್ಕಾಗಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಅರ್ಜಿಯನ್ನು ಮೋಸದಿಂದ ಕೂಡಿದ ಅರ್ಜಿ ಎಂದು ಪರಿಗಣಿಸಿ ಅದನ್ನು ಕಿತ್ತು ಹಾಕಬೇಕು. ಮೂಲ ನಕಾಶೆಯಂತೆ ರೈತರಿಗೆ ನ್ಯಾಯ ಒದಗಿಸಬೇಕು. ಇಲ್ಲದೆ ಹೋದಲ್ಲಿ ಎಲ್.ಶಡೈಯಿ ಸೊಸೈಟಿಯವರ ವಿರುದ್ಧ ಕಾನೂನು ಕ್ರಮಕ್ಕಾಗಿ ಉಗ್ರ ಹೋರಾಟ ಮಾಡಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ವೇಳೆ ಮಹಮ್ಮದ್ಹನೀಫ್ ಅಂದಲಗಿ, ದೇವರಾಜ ಪಾಟೀಲ, ಎಸ್.ಎಸ್.ವಾಲಿಶೆಟ್ಟರ, ಮೆಹಬೂಬಸಾಬ ಗನ್ನುಮಿಯಾ, ಅಬ್ದುಲ್ರಜಾಕ್ ಗನ್ನುಮಿಯಾ, ಹುಸೇನ್ಸಾಬ್ ಗನ್ನುಮಿಯಾ, ಇಮಾಮ್ಜಾಫರ್ ಗನ್ನುಮಿಯಾ, ಗೌಸ್ಮೊಹಿದ್ದೀನ್ ಗನ್ನುಮಿಯಾ, ದೇವೇಂದ್ರ್ಪ ಬೆಂಡಲಗಟ್ಟಿ, ಹಸನ್ಬೇಗ್ ತಡಸ, ಎಮ್.ಎ.ನಂದಿಕಟ್ಟಿ, ದೇವೇಂದ್ರ್ಪ ಸಾಲಗಾಂವ, ಪರಶುರಾಮ ರಾಣಿಗೇರ ಮುಂತಾದವರು ಉಪಸ್ಥಿತರಿದ್ದರು.