ಕನ್ನಡ ವಿಶ್ವವಿದ್ಯಾಲಯದ ಕುಟುಂಬಕ್ಕೆ ಅಪಾರ ನಷ್ಟ: ಡಾ. ರಮೇಶ
ಬಳ್ಳಾರಿ 27: ಕನ್ನಡದ ಅಕ್ಷರ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಹಾಗೂ ಕನ್ನಡ ವಿಶ್ವವಿದ್ಯಾಲಯವನ್ನು ಶೈಕ್ಷಣಿಕ, ಬೌದ್ಧಿಕ ಮತ್ತು ಭೌತಿಕವಾಗಿ ಶ್ರೀಮಂತಗೊಳಿಸಿದ ಮಹಾನ್ ವ್ಯಕ್ತಿ ಡಾ.ಎಚ್.ಜೆ.ಲಕ್ಕಪ್ಪಗೌಡರು. ಇವರ ಅಗಲಿಕೆಯಿಂದ ಕನ್ನಡ ವಿಶ್ವವಿದ್ಯಾಲಯದ ಕುಟುಂಬಕ್ಕೆ ತುಂಬಾ ನೋವುಂಟಾಗಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಸ.ಚಿ.ರಮೇಶ ಅವರು ತಮ್ಮ ನೋವನ್ನು ತೋಡಿಕೊಂಡರು.
ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯ ಸಭಾಂಗಣದಲ್ಲಿ ಆಯೋಜಿಸಿದ್ದ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದ ಅವರು ಡಾ.ಎಚ್.ಜೆ.ಲಕ್ಕಪ್ಪಗೌಡರು ಬಡವರು ಮತ್ತು ಶೋಷಿತ ವರ್ಗದವರ ಬಗ್ಗೆ ಅಪಾರ ಕಾಳಜಿವಹಿಸಿದ ವ್ಯಕ್ತಿ. ಕವಿಯಾಗಿ, ವಿಮರ್ಶಕರಾಗಿ, ಪ್ರಾಧ್ಯಾಪಕರಾಗಿ, ಆಡಳಿತಗಾರರಾಗಿ ಅವರು ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳ ಜೊತೆಯಲ್ಲಿ ಸ್ನೇಹಜೀವಿಯಾಗಿದ್ದರು. ಸುಮಾರು 70ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರ ಅಗಲಿಕೆಯಿಂದ ಕನ್ನಡ ವಿಶ್ವವಿದ್ಯಾಲಯವು ಬಡವಾಗಿದೆ. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ನೀಡಲೆಂದು ಕನ್ನಡ ವಿಶ್ವವಿದ್ಯಾಲಯದ ಪರವಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ನುಡಿದರು. ಡಾ. ವಿಠಲರಾವ್ ಗಾಯಕ್ವಾಡ್ ಅವರು ಡಾ. ಎಚ್.ಜೆ. ಲಕ್ಕಪ್ಪಗೌಡ ಅವರ ಕುರಿತು ಮಾತನಾಡಿದರು.
ಈ ಸಂತಾಪ ಸೂಚಕ ಸಭೆಯಲ್ಲಿ 2 ನಿಮಿಷ ಮೌನಾಚರಣೆ ಮಾಡಲಾಯಿತು. ಸಂತಾಪ ಸೂಚಕ ಸಭೆಯಲ್ಲಿ ವಿವಿಧ ನಿಕಾಯಗಳ ಡೀನರು ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಆಡಳಿತ ಸಿಬ್ಬಂದಿಗಳು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಉಪಸ್ಥಿತರಿದ್ದರು.