ಚಿಕ್ಕೋಡಿ

ಕಕ್ಷಿದಾರರು ರಾಜೀ ಸಂಧಾನದಿಂದ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಿ

ಕಕ್ಷಿದಾರರು ರಾಜೀ ಸಂಧಾನದಿಂದ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಿ
ಚಿಕ್ಕೋಡಿ: ಲೋಕ ಅದಾಲತ್ ಕಾರ್ಯಕ್ರಮವನ್ನು ಏಳನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎಲ್.ಚವ್ಹಾನ ಉದ

ನ್ಯಾಯಾಧೀಶ ಎಸ್.ಎಲ್.ಚವ್ಹಾನ ಸಲಹೆ: ಬೃಹತ್ ಲೋಕ ಅದಾಲತ್ ಕಾರ್ಯಕ್ರಮ

ಚಿಕ್ಕೋಡಿ 27: ನ್ಯಾಯಾಲಯದಲ್ಲಿ ದೀರ್ಘಕಾಲದ ವ್ಯಾಜ್ಯಗಳನ್ನು ಕಕ್ಷಿದಾರರು ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಂಡು ಪ್ರೀತಿ ವ್ಯಾತ್ಸಲ್ಯದಿಂದ ಜೀವನ ನಡೆಸಬೇಕು ಎಂದು ಏಳನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎಲ್.ಚವ್ಹಾನ ಸಲಹೆ ನೀಡಿದರು.

ಇಲ್ಲಿನ ನ್ಯಾಯಾಲಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕಾ ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿ ವತಿಯಿಂದ ಶನಿವಾರ ನಡೆದ ಬೃಹತ್ ಲೋಕ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಕೌಟುಂಬಿಕ, ಸಂಘ ಸಂಸ್ಥೆ ಸೇರಿದಂತೆ ಏನೇ ಸಮಸ್ಯೆ ಇದ್ದರೂ ಅವುಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಲು ಲೋಕ ಅದಾಲತ್ ಒಳ್ಳೆಯ ಅವಕಾಶವಾಗಿದೆ. ನ್ಯಾಯಾಲಯದಲ್ಲಿ ಪ್ರಕರಣಗಳು ಇತ್ಯರ್ಥವಾಗಲು ವಿಳಂಭವಾಗುತ್ತದೆ ಎನ್ನುವುದು ಇತ್ತು. ಆದರೆ ಇದೀಗ ಕಾನೂನಿನ ಅನೇಕ ತಿದ್ದುಪಡೆ ಮೂಲಕ ನ್ಯಾಯಾಲಯದ ಪ್ರಕರಣಗಳು ಶೀಘ್ರವಾಗಿ ಇತ್ಯರ್ಥ ಕಾಣುತ್ತದೆ. ಶೀಘ್ರವಾಗಿ ಪ್ರಕರಣ ಇತ್ಯರ್ಥಪಡಿಸಲು ಲೋಕ ಅದಾಲತ್ ತುಂಭಾ ಅನುಕೂಲವಾಗಿದೆ. ಕಕ್ಷಿದಾರರು ಸಮಸ್ಯೆ ಬಗೆಹರಿಸಿಕೊಂಡು ರಾಜೀ ಸಂಧಾನ ಮಾಡಿಕೊಂಡು ಶಾಂತಿ ಸಹಭಾಳ್ವೆಯಾಗಿ ಜೀವನ ನಡೆಸಬೇಕು ಎಂದರು.

ಲೋಕ ಅದಾಲತ್ ಮೂಲಕ ಸಾರ್ವಜನಿಕರು, ಕ್ಷಕಿದಾರರು, ಬ್ಯಾಂಕ ಮತ್ತು ವಿವಿಧ ಸಂಸ್ಥೆಗಳು ತಮ್ಮ ವ್ಯಾಜ್ಯಗಳಿಂದ ರಾಜೀಯಾಗಬಹುದು. ವ್ಯಾಜ್ಯ ಪೂರ್ವ ಹಾಗೂ ಬಾಕಿ ಇರುವ ಪ್ರಕರಣಗಳನ್ನು ಅಂದರೆ ಚೆಕ್ ಅಮಾನ್ಯ ಪ್ರಕರಣ, ವಾಹನ ಅಪಘಾತ ಪರಿಹಾರ, ಸಾಲ ವಸೂಲಾತಿ, ಕೌಟುಂಬಿಕ ಮತ್ತು ಜೀವನಾಂಶ(ವಿಚ್ಚೇಧನ ಹೊರತು ಪಡಿಸಿ) ಪ್ರಕರಣಗಳನ್ನು ಅದಾಲತ್‍ನಲ್ಲಿ ಅತೀ ಶೀಘ್ರವಾಗಿ ಇತ್ಯರ್ಥಗೊಳಿಸಿ ಪರಿಹಾರ ಪಡೆದುಕೊಳ್ಳಲು ಅದಾಲತ್ ಒಂದು ಸುವರ್ಣ ಅವಕಾಶ ಆಗಿರುತ್ತದೆ. ನ್ಯಾಯಾಲಯದಲ್ಲಿ ಹಳೆದಾದ ಪ್ರಕರಣ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ನ್ಯಾಯಾಧೀಶರು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿಗಳ ಸಂಘದ ಅಧ್ಯಕ್ಷ ನಾಗೇಶ ಕಿವಡ ಮಾತನಾಡಿ, ಸಣ್ಣಪುಟ್ಟ ವಿಷಯಗಳನ್ನು ದೊಡ್ಡದಾಗಿ ಮಾಡಬಾರದು. ಏನೇ ಪ್ರಕರಣ ಸಣ್ಣದಿರುವಾಗಲೇ ಬಗೆಹರಿಸಿಕೊಂಡು ನೆಮ್ಮದಿ ಜೀವನ ನಡೆಸಬೇಕು ಎಂದರು.

ನ್ಯಾಯಾಧೀಶರಾದ ಶ್ರೀಕಾಂತ.ಟಿ, ವಿಜಯಕುಮಾರ ಬಾಗಡೆ, ಮಂಜುಳಾ.ಬಿ, ಯೋಗೇಶ.ಕೆ, ಡಿವೈಎಸ್‍ಪಿ ಮನೋಜ ನಾಯಿಕ, ಸಿಪಿಐ ಆರ್.ಆರ್.ಪಾಟೀಲ, ಸರಕಾರಿ ಅಭಿಯೋಜಕರಾದ  ಆರ್.ಐ.ಖೋತ, ಸರಕಾರಿ ಅಭಿಯೋಜಕ ವೈ,ಜಿ,ತುಂಗಳ, ಜಿ.ಐ.ಪಾಟೀಲ, ಸಂಘದ ಕಾರ್ಯದರ್ಶಿ ಎಸ್.ವೈ.ಪಾಟೀಲ, ನ್ಯಾಯವಾದಿ ಬಿ.ಎ.ಅಮಾತೆ, ಮಾನಿಕಮ್ಮ ಕಬಾಡಗಿ  ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. 

ನ್ಯಾಯಾಧೀಶರ ಮುಂದೆ ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಂಡ ಕಕ್ಷಿಧಾರರು ಹಸ್ತಲಾಘವ ಮಾಡಿಕೊಂಡರು.

ನ್ಯಾಯವಾದಿ ಎಂ.ಬಿ.ಪಾಟೀಲ ಸ್ವಾಗತಿಸಿದರು. ನ್ಯಾಯವಾದಿ ಸುದರ್ಶನ ತಮ್ಮನ್ನವರ ನಿರೂಪಿಸಿದರು.

ಸುದ್ದಿ ಓದಿ