ಮುಂದಗೋಡ

ಭಾಗ್ಯಲಕ್ಷ್ಮೀ ಯೋಜನೆಯಿಂದ ಹೆಣ್ಣುಮಕ್ಕಳ ಕೀಳರಿಮೆ ದೂರ: ಸಚಿವ ಹೆಬ್ಬಾರ

ಭಾಗ್ಯಲಕ್ಷ್ಮೀ ಯೋಜನೆಯಿಂದ ಹೆಣ್ಣುಮಕ್ಕಳ ಕೀಳರಿಮೆ ದೂರ: ಸಚಿವ ಹೆಬ್ಬಾರ

ಮುಂಡಗೋಡ 31: ಸಮಾಜದಲ್ಲಿನ ಪ್ರತಿಯೊಬ್ಬ ಬಡ ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂಬ ಉದ್ದೇಶದಿಂದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ  ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದು, ಹೆಣ್ಣು ಮಕ್ಕಳ ಬಗ್ಗೆ ಕೀಳರಿಮೆ ದೂರ ಮಾಡಿದ್ದಾರೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು. 

ಶನಿವಾರ ಪಟ್ಟಣದ ನಗರ ಸಭಾಭವನದಲ್ಲಿ ಶಿಶು ಅಭಿವೃದ್ಧಿ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಭಾಗ್ಯಲಕ್ಷ್ಮಿ ಬಾಂಡ್ ವಿತರಣಾ ಸಮಾರಂಭದಲ್ಲಿ ಪಲಾನುಭವಿಗಳಿಗೆ ಬಾಂಡ್ ವಿತರಿಸಿ ಮಾತನಾಡಿದರು.

ಕೋವಿಡ್ 19 ನಿಂದಾಗಿ ಹಲವು ಕಾರ್ಯಗಳು ವಿಳಂಭವಾಗಿವೆ. ಈಗ ದೇಶ ಕೋವಿಡ್ ಬಯದಿಂದ ಮುಕ್ತವಾಗಿದೆ. ವಿಶ್ವದಲ್ಲಿಯೇ ಮೊದಲು ಕೋವಿಡ್ ಲಸಿಕೆ ವಿತರಿಸುವಲ್ಲಿ ನಮ್ಮ ದೇಶ ಯಶಸ್ವಿಯಾಗಿದ್ದು, ವಿಶ್ವ ಸಂಸ್ಥೆಯ ಹೆಗ್ಗಳಿಗೆ ಪಾತ್ರವಾಗಿದೆ. ಮಕ್ಕಳ ಶಿಕ್ಷಣಕ್ಕಿಂತ ಜೀವ ಮುಖ್ಯ ಹಾಗಾಗಿ ಅಂಗನವಾಡಿ ಹಾಗೂ ಪ್ರಾಥಮಿಕ ಮಕ್ಕಳನ್ನು ಶಾಲೆಗೆ ಕಳಿಸಲು ಮಾನಸಿಕವಾಗಿ ಸಿದ್ದವಾಗುವವರೆಗೂ ಯಾರಿಗೂ ಕೂಡ ಒತ್ತಾಯ ಮಾಡುವುದಿಲ್ಲ. ಕೋವಿಡ್ ಹೋಯಿತು ಎಂದು ಯಾರು ಕೂಡ ಮೈ ಮರೆಯಬಾರದು ಎಚ್ಚರಿಯಿಂದಿರಬೇಕು ಎಂದರು. 

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ ಮಾತನಾಡಿ, ಭಾಗ್ಯ ಲಕ್ಷ್ಮಿ ಯೋಜನೆಯಡಿಯಲ್ಲಿ ಸರ್ಕಾರವೇ ಹಣ ತುಂಬಿ ಹೆಣ್ಣು ಮಕ್ಕಳಿಗೆ ಭದ್ರತೆ ನೀಡುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಸಬಲರಾಗಬೇಕಿದೆ. ಹೆಣ್ಣು ಮಕ್ಕಳ ಮೇಲಿನ ಬರವಸೆಯಿಂದ ಸರ್ಕಾರ ಬಹುತೇಕ ಯೋಜನೆಗಳನ್ನು ಹೆಣ್ಣು ಮಕ್ಕಳ ಹೆಸರಲ್ಲಿ ನೀಡುತ್ತಿದೆ. ಬಾಂಡ್ ಪಡೆದವರು ಕಡ್ಡಾಯವಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದರು.

ಪ.ಪಂ ಅಧ್ಯಕ್ಷೆ ರೇಣುಕಾ ಹಾವೇರಿ, ಉಪಾಧ್ಯಕ್ಷ ಮಂಜುನಾಥ ಹರ‍್ಮಲಕರ, ಜಿ.ಪಂ ಸದಸ್ಯ ಎಲ್.ಟಿ.ಪಾಟೀಲ, ತಾ.ಪಂ ಅಧ್ಯಕ್ಷೆ ರಾಧಾಬಾಯಿ ಸಿಂಗನಳ್ಳಿ, ಎ.ಪಿ.ಎಮ್.ಸಿ ಅಧ್ಯಕ್ಷ ಮಂಜುನಾಥ ವೆರ್ಣೇಕರ, ತಹಸೀಲ್ದಾರ ಶ್ರೀಧರ ಮುಂದಲಮನಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ದೀಪಾ ಬಂಗೇರಾ, ಶ್ರೀಕಾಂತ ಸಾನು, ನಾಗಭೂಷಣ ಹಾವಣಗಿ, ಉಮೇಶ ಬಿಜಾಪುರ ಮುಂತಾದವರು ಉಪಸ್ಥಿತರಿದ್ದರು.

ಸುದ್ದಿ ಓದಿ