ಬಳ್ಳಾರಿ

ಸ್ವಾತಂತ್ರ್ಯ ಹೋರಾಟದಲ್ಲಿ ಬಳ್ಳಾರಿ ಜಿಲ್ಲೆ ಕೊಡುಗೆ ಅಪಾರ: ಡಿಸಿ ಮಾಲಪಾಟಿ

ಸ್ವಾತಂತ್ರ್ಯ ಹೋರಾಟದಲ್ಲಿ ಬಳ್ಳಾರಿ ಜಿಲ್ಲೆ ಕೊಡುಗೆ ಅಪಾರ: ಡಿಸಿ ಮಾಲಪಾಟಿ

ಬಳ್ಳಾರಿ 16:  ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳು ತಮ್ಮದೇ ಆದ ಮಹತ್ತರ ಕಾಣಿಕೆ ನೀಡಿವೆ. ಸ್ವಾತಂತ್ರ್ಯ ಹೋರಾಟದ ದೃಷ್ಟಿಯಿಂದ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳು ಜಾಗ್ರತ ಹಾಗೂ ಚೈತನ್ಯ ಶೀಲ ಜಿಲ್ಲೆಗಳಾಗಿದ್ದವು ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಸ್ಮರಿಸಿದರು. 


75ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಪಥ ಸಂಚಲನ ವೀಕ್ಷಿಸಿ ಮತ್ತು ಗೌರವ ಸ್ವೀಕರಿಸಿ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು.  

  

 ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳು ಸ್ವಾತಂತ್ರ್ಯ ಹೋರಾಟವು ರಾಷ್ಟ್ರೀಯ ಭಾವೈಕ್ಯತೆಯ ಸಂಕೇತವಾಗಿದೆ. ಕನ್ನಡ ಹಾಗೂ ತೆಲುಗು ಮಾತನಾಡುವ ಜನರು ಭಾಷಾ ಭೇದವನ್ನು ಮರೆತು ಹೋರಾಡಿದ್ದು, ದ್ವಿಭಾಷಾ ಸಂಸ್ಕೃತಿಗೆ ಒಳಗಾಗಿರುವ ನಾಡಿನಲ್ಲಿ ವಿಶಿಷ್ಟ ಸಂಗತಿಯಾಗಿದೆ. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳು ಸ್ವಾತಂತ್ರ್ಯ ಹೋರಾಟವು ಮೂಲಭೂತವಾಗಿ”ಗಾಂಧಿವಾದ” ಸ್ವರೂಪದಾಗಿತ್ತು,. ಯಾವುದೇ ಹಿಂಸೆಗೆ ಅವಕಾಶ ನೀಡದಂತೆ, ಅಹಿಂಸಾವಾದವನ್ನು ಅನುಸರಿಸಿ ಇಲ್ಲಿನ ಜನರು ಹೋರಾಟ ನಡೆಸಿದ್ದರು ಎಂದು ಅವರು ಹೇಳಿದರು. 

       

 ಬಳ್ಳಾರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದಲ್ಲಿ ಟಿ.ಸುಬ್ರಮಣ್ಯಂ, ಟಿ.ಬಿ.ಕೇಶವರಾವ್, ಕೊಟ್ಟೂರಿನ ಗೋರಿ​‍್ಲ ಶರಣಪ್ಪ, ಗೋರಿ​‍್ಲ ರುದ್ರಮ್ಮ, ಡಾ. ಎ. ನಂಜಪ್ಪ, ಚಿದಾನಂದ ಶಾಸ್ತ್ರಿ, ಕೊ. ಚನ್ನಬಸಪ್ಪ, ಗೌಡಪ್ಪ, ಬಿಂಧು ಮಾದವರಾವ್, ಬುರಿ​‍್ಲ ಶೇಷಣ್ಣ, ಬೆಲ್ಲದ ಚೆನ್ನಪ್ಪ, ಬೂಸಲ ಸಾಂಬಮೂರ್ತಿ, ಹಡಪದ ತಿಮ್ಮಪ್ಪ, ಬಂಡಿಹಟ್ಟಿ ವೆಂಕೋಬರಾವ್, ಲಕ್ಷ್ಮಿದೇವಿ ಇನ್ನು ಮುಂತಾದ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರನ್ನು ನಾವಿಂದು ನೆನೆಯಬೇಕಾಗಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು, ಬಾಲ ಗಂಗಾಧರ ತಿಲಕ್ ರಂತಹ ರಾಷ್ಟ್ರ ನಾಯಕರುಗಳು ಬಳ್ಳಾರಿಗೆ ಅಗಮಿಸಿದ್ದರು ಎನ್ನುವುದು ರೋಚಕದ ಸಂಗತಿಯಾಗಿದೆ ಎಂದರು. 

    

ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಈ ಶುಭ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ಕೊಡುಗೆಗಳನ್ನು ನೆನಪಿಸಿಕೊಳ್ಳುವುದು ಹಾಗೂ ಅವರಿಗೆ ನಮ್ಮ ಕೃತಜ್ಞತೆಗಳನ್ನು ಸಲ್ಲಿಸುವುದು ಅಭಿಮಾನದ ಸಂಗತಿಯಾಗಿದೆ ಹಾಗೂ ಅದು ನಮ್ಮ ಆದ್ಯ ಕರ್ತವ್ಯವೂ ಆಗಿದೆ ಎಂದು ಹೇಳಿದ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ  


ರಾಷ್ಟ್ರಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸರ್‌ದಾರ್ ವಲ್ಲಬಾಯಿ ಪಟೇಲ್, ನೆಹರು, ಸುಭಾಸ್ ಚಂದ್ರ ಭೋಸ್,  ದಾದಾಬಾಯಿ ನವರೋಜಿ, ವೀರಸಾವರ್‌ಕರ್, ಮೌಲಾನ ಅಬುಲ್ ಕಲಾಂ ಆಝಾದ,  ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಭಗತ್‌ಸಿಂಗ್, ಚಂದ್ರಶೇಖರ ಅಜಾದ್, ರಾಜ್‌ಗುರು, ಸುಖ್‌ದೇವ್ ಹಾಗೂ ಸಾವಿರಾರು ವೀರ ಯೋಧರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು. 

ಸ್ವಾತಂತ್ರ್ಯ ಬಂದ ನಂತರ ದೇಶದ ಸಮಸ್ಯೆಗಳನ್ನು ಬಗೆಹರಿಸಲು ಪಂಚವಾರ್ಷಿಕ ಯೋಜನೆಗಳನ್ನು ಹಾಕಿಕೊಂಡು ಅಭಿವೃದ್ಧಿಯತ್ತ ಪ್ರಯತ್ನ ಸಾಗಿತು.  ಎಲ್ಲಾ ಸವಾಲುಗಳ ಮಧ್ಯದಲ್ಲಿಯೂ ಈ ವರ್ಷದ ಕೋವಿಡ್ 2 ನೇ ಅಲೆಯ ಸಂಧಿಗ್ದ ಪರಿಸ್ಥಿತಿಯಲ್ಲಿ ಭಾರತ ಬಲಿಷ್ಠ ರಾಷ್ಟ್ರವಾಗಿ ರೂಪಗೊಂಡಿದೆ. ಆಹಾರ ಉತ್ಪಾದನೆಯಲ್ಲಿ ಸ್ವಾವಲಂಭನೆ, ಕೈಗಾರಿಕೆ, ಕೃಷಿ, ಸಾಕ್ಷರತೆ, ತಂತ್ರಜ್ಞಾನ, ಆರೋಗ್ಯ, ಗ್ರಾಮಾಂತರ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ, ಬಾಹ್ಯಾಕಾಶ ವಿಜ್ಞಾನ, ಅಣುವಿಜ್ಞಾನ ಕ್ಷೇತ್ರಗಳಲ್ಲಿ ವಿಶ್ವದ ಗಮನ ಸೆಳೆಯುವಂತಹ ಪ್ರಗತಿ ಸಾಧಿಸಲಾಗಿದೆ ಎಂದರು. 

ಇದಕ್ಕೂ ಮುಂಚೆ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಎಚ್‌.ಆರ್‌.ಗವಿಯಪ್ಪ ವೃತ್ತದಲ್ಲಿರುವ 150ಅಡಿ ಎತ್ತರದ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು ಮತ್ತು ವಿಮ್ಸ್‌ ಆವರಣದಲ್ಲಿರುವ ಮಹಾತ್ಮಗಾಂಧೀಜಿ ಅವರ ಪ್ರತಿಮೆಗೆ ಮಾಲಾರೆ​‍್ಣ ಮಾಡಿದರು. 


ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಅರಣ್ಯ ಇಲಾಖೆಯ ವಾಹನಗಳಿಗೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಂಬ್ಯುಲೆನ್ಸ್‌ಗಳಿಗೆ ಚಾಲನೆ ನೀಡಿದರು. ಶಾಸಕ ಜಿ.ಸೋಮಶೇಖರ ರೆಡ್ಡಿ, ಬಿ.ನಾಗೇಂದ್ರ,  ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರ​‍್ಪ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹನುಮಂತಪ್ಪ, ಜಿಪಂ ಸಿಇಒ ಕೆ.ಆರ್‌.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಅಪರ ಜಿಲ್ಲಾಧಿಕಾರಿ ಪಿ.ಎಸ್‌.ಮಂಜುನಾಥ ಮತ್ತಿತರರು ಇದ್ದರು. 


ಸುದ್ದಿ ಓದಿ