ಲೇಖನಗಳು

ಬಿಸಿಲ ನಾಡಾಗುತ್ತಿರುವ ಬೆಳಗಾವಿ

ಬಿಸಿಲ ನಾಡಾಗುತ್ತಿರುವ ಬೆಳಗಾವಿ

ಬಿಸಿಲ ಬೇಗೆಯಲ್ಲಿ ಬೇಯುತ್ತಿರುವ ಬೆಳಗಾವಿಯಲ್ಲಿ ಮತ್ತೆ ಮೊದಲಿನಂತೆ ತಂಗಾಳಿ ತೀಡಬೇಕು. ಮತ್ತೆ ಮೊದಲಿನಂತೆಇದು ದಕ್ಷಿಣದ ಮಹಾಬಳೇಶ್ವರ ಎನ್ನಿಸಿಕೊಳ್ಳಬೇಕು. ತಂಪಿನ ತೋಟವಾಗಬೇಕು. ಕೋಗಿಲೆಯ ಕುಕಿಲು ಕೇಳಿಸಬೇಕು ಪೂತ ಸಂಪಿಗೆಯ, ಬಿರಿದ ಮಲ್ಲಿಗೆಯ ಕಂಪು  ಹರಡಬೇಕು, ಹಲಸು ಮಾವು ಚಿಕ್ಕೂ ಹಣ್ಣುಗಳ ಮಧುರ ವಾಸನೆಯನ್ನು ಹೊತ್ತ ಗಾಳಿ ಬೀಸಬೇಕು ಎಂದಾದರೆ ನಾವೆಲ್ಲಾ ಏನು ಮಾಡಬೇಕು?  

ನಾವು ಭಾರತೀಯರು. ಅದರಲ್ಲೂ ಕರ್ನಾಟಕದವರು. ‘ಸ್ವಲ್ಪ ಅಡ್ಜಸ್ಟ ಮಾಡ್ಕೊಳ್ಳಿ ಸ್ವಾಮೀ’ ಎಂಬ ತತ್ವದವರು. ಅದೇ ವಿದೇಶೀಯರು ಎಂಥ ಚಿಕ್ಕ ಪುಟ್ಟ ಸಮಸ್ಯೆಗಳೇ ಬರಲಿ, ಮೊದಲು ಯೋಚಿಸುವುದು ‘ಇದಕ್ಕೆ ಸಮಾಧಾನಕರ ಪರಿಹಾರ ಏನು’ ಎಂದು. ಕೊನೆಗೆ ಪರಿಹಾರವನ್ನೂ ಕಂಡು ಹಿಡಿದು ಸಮಸ್ಯೆಗಳಿಲ್ಲದ ಜೀವನ ಸಾಗಿಸುತ್ತಾರೆ. ಆದರೆ ನಾವು ಸ್ವಲ್ಪ ಅಡ್ಜಸ್ಟ ಮಾಡಿಕೊಂಡರಾಯಿತು ಎಂಬ ದಿಕ್ಕಿನಲ್ಲೇ ಸಾಗಿ ಆ ಸಮಸ್ಯೆಯನ್ನೇ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಬಿಡುತ್ತೇವೆ. ಈಗ ಆಗುತ್ತಿದ್ದುದೂ ಇದೇ. ಬಿಸಿಲಾದರೆ ರಾಗಿ ಅಂಬಲಿ ಕುಡಿಯಿರಿ. ಕಾಮಕಸ್ತೂರಿ ಬೀಜದ ಪಾಯಸ ಕುಡಿಯಿರಿ. ಹೆಸರು ಬೇಳೆಯನ್ನು ಹೆಚ್ಚು ಉಪಯೋಗಿಸಿ. ಸಾಕಷ್ಟು ನೀರು ಕುಡಿಯಿರಿ. ಓಡಲೆಣ್ಣೆಯನ್ನು ನೆತ್ತಿಗೆ ಹಾಕಿಕೊಳ್ಳಿ ಎಂದು ದಿಕ್ಕಿಗೊಂದು ಸಲಹೆಗಳು ಬರುತ್ತವೆ. ಇದೆಲ್ಲ ಪರಿಹಾರಗಳಾಯಿತು. ಸಮಸ್ಯೆ ಏನು? ಅದು ಬಿಸಿಲ ಬೇಗೆ. ಅಂದರೆ ನಾವು ಯೋಚಿಸಬೇಕಾದದ್ದು ‘ಇಷ್ಟೊಂದು ಬಿಸಿಲು ಬೀಳದಂತೆ ಏನು ಮಾಡಬೇಕು?’ ಎನ್ನುವುದನ್ನು. ಆ ಸಮಸ್ಯೆಯನ್ನು ಜೀವನದಲ್ಲಿ ಅಳವಡಿಕೊಂಡು ಬಿಡುವುದಲ್ಲ.   

ಕೆಲ ಸಮಾಜ ಸೇವಕರು ಗಿಡನೆಡುವುದು, ಪ್ರಯಾಣದ ಗುಂಟ ಬೀಜ ಚೆಲ್ಲುವುದು ಮುಂತಾದ ಕ್ರಮಗಳನ್ನು ಕೈಗೊಂಡಿದ್ದಾರೆ. ಅದು ಸ್ತುತ್ಯ. ಆದರೆ ಈ ಬೃಹತ್ ಸಮಸ್ಯೆಗೆ ಅದು ಅಳಿಲು ಸೇವೆ. ಸರ್ಕಾರವಂತೂ ಯಾರೂ ಕೇಳದ ‘ಕಡಿಮೆ ನೀರು ಬಳಸಿರಿ’ ಎಂಬ ಕೆಲಸಕ್ಕೆ ಬಾರದ ಉಪಾಯಗಳನ್ನು ಸೂಚಿಸುತ್ತ ಕುಳಿತಿರುತ್ತದೆ. ರಾಜಕಾರಣಿಗಳು ಏಸಿ ಯಿಂದ ಏಸಿಗೆ ಜಿಗಿಯುವದರಿಂದ ಅವರಿಗೆ ಸಮಸ್ಯೆ ಅರ್ಥವಾಗುವುದೇ ಇಲ್ಲ. ಅನುಭವಿಸುತ್ತಿರುವವರು ನಾವು. ನಾವೇ ಪರಿಹಾರ ಕಂಡು ಹಿಡಿಯಬೇಕು. ಹಾಗಾದರೆ ನಾವೇನು ಮಾಡಬೇಕು?     

ಹೊಸದಾಗಿ ಗೂಡು ಕಟ್ಟಿಕೊಳ್ಳುವ ಕನಸುಗಾರ:   

ತನ್ನ ಸ್ವಂತ ಮನೆಯಿರಬೇಕೆಂಬುದು ಪ್ರತಿಯೊಬ್ಬರ ಆಸೆ. ಅದು ಯೋಗ್ಯವಾದದ್ದೇ. ಆದರೆ ತಾನು ಹಣ ಕೊಟ್ಟು ಕೊಂಡುಕೊಂಡ ಜಾಗಕ್ಕಿಂತ ಹೆಚ್ಚಿನ ಜಾಗೆಯನ್ನು ಕಬಳಿಸುವುದು ತನ್ನ ಮೂಲಭೂತ ಹಕ್ಕು ಎಂದುಕೊಳ್ಳುತ್ತಾರಲ್ಲ ಅದು ತಪ್ಪು. ಗೇಟಿನ ಹೊರಗೆ ಹಾಕಿದ ಗಟಾರದೊಳಗೆ ಮಣ್ಣು ಹಾಕಿ ಅದರಲ್ಲಿ ಗಿಡ ಬೆಳೆಸುವ ಹವ್ಯಾಸವೇಕೆ? ಇದರಿಂದ ಮಳೆಯನೀರು, ನೀರು ಇಂಗುವ ಜಾಗದವರೆಗೆ ಹರಿದು ಹೋಗಲು ಅಡ್ಡಿಯಾಗಿ ನೀರೆಲ್ಲ ರಸ್ತೆಯ ಮೇಲೆ  ಹರಿದುಬರುತ್ತದೆ, ರಸ್ತೆಯ ಮೇಲಿನ ನೀರು ಆವಿಯಾಗಿಹೆಚ್ಚಿನ ಬಿಸಿಯನ್ನುಂಟು ಮಾಡುವುದಲ್ಲದೇ ನೀರು ನೆಲದಲ್ಲಿ ಇಂಗುವುದನ್ನು ತಡೆಯುತ್ತದೆ.    

ಗಿಡ ನೆಡುವುದು ಒಳ್ಳೆಯ ಹವ್ಯಾಸವೇ? ಆದರೆ ಅದನ್ನು ತನ್ನ ಮನೆಯ ಅಂಗಳದಲ್ಲಿ ಬೆಳೆಸಬೇಕು. ಮನೆಯ ಇಂಚಿಂಚು ಜಾಗವನ್ನು ಕಾಂಕ್ರೀಟಿನಿಂದ ಮುಚ್ಚುವ ಬದಲು ಕೈತೋಟಕ್ಕಾಗಿ ಸ್ವಲ್ಪ ಜಾಗವನ್ನು ಬಿಟ್ಟರೆ ಮನೆ ತಂಪಾಗಿ ಉಳಿಯುವುದು.  ಕಣ್ಣಿಗೂ ನೋಡಲು ಹಬ್ಬ. ರಸ್ತೆಯವರೆಗೂ ಸಿಮೆಂಟಿನಿಂದ ಮುಚ್ಚಿ, ಧೂಳು ಬರುವುದೆಂದು ಎಲ್ಲ ಕಿಟಕಿ ಬಾಗಿಲುಗಳನ್ನು ಹಾಕಿ, ಶಖೆಯಾಗುವುದೆಂದು ಏಸಿ ಹಚ್ಚಿ ಆ ಬಿಸಿಹವೆಯನ್ನೆಲ್ಲ ವಾತಾವರಣಕ್ಕೆ ಬಿಡುವುದು ಯಾತಕ್ಕಾಗಿ? ಅದರ ಬದಲು ಕೈತೋಟಕ್ಕಾಗಿ ಒಂದಿಷ್ಟು ಪುಟ್ಟ ಸ್ಥಳವನ್ನು ಬಿಟ್ಟರೆ, ಧೂಳನ್ನೂ, ಬಿಸಿಯನ್ನೂ ಗಿಡಗಳು ಹೀರಿಕೊಂಡು ವಾತಾವರಣ ಹಾಗೂ ಮನೆ ಎರಡನ್ನೂ ತಂಪಾಗಿರಿಸುತ್ತವೆ, ಅಲ್ಲದೇ ಅಲ್ಲಿ ಬೆಳೆಸುವ ಕರಿಬೇವು, ಚಟ್ನಿಯ ಮರುಗು, ಬಸಳೆ ತೊಂಡೆಯಂಥ ಬಳ್ಳಿಗಳು,  ಮಲ್ಲಿಗೆ, ನಿತ್ಯಪುಷ್ಪ ದಂತಹ ಗಿಡಗಳು ಮನೆಯ ಅಂದವನ್ನು ಹೆಚ್ಚಿಸುತ್ತವೆ.  ಸ್ನಾನದ, ಬಳಕೆಯ, ಬಟ್ಟೆಒಗೆದ ನೀರಿನ ಬಳಕೆಯನ್ನೂ ಪ್ರಯೋಜನಕಾರಿಯಾಗಿ ಮಾಡಬಹುದು. ನೀರನ್ನು ವಿಪರೀತವಾಗಿ ಹೀರಿಕೊಳ್ಳುವ ತೆಂಗಿನ ಮರದಂತಹ ಮರಗಳನ್ನು ಮಾತ್ರ ಸರ್ವಥಾ ಬೆಳೆಸಬಾರದು, ಅವು ಹೀರಿಕೊಳ್ಳುವ ನೀರಿನ ಖರ್ಚಿಗೆ ಹೋಲಿಸಿದರೆ ಎಳೆನೀರು ಹಾಗೂ ಕಾಯಿಗಳಿಂದ ಬರುವ ಉತ್ಪನ್ನ ತೀರಾ ಕಡಿಮೆ ಎಂದು ಲೆಕ್ಕ ಹಾಕಿ ಹೇಳಬಹುದು.   

ಮನೆ ಕಟ್ಟುವಾಗ ಲಕ್ಷಾಂತರ ರೂಪಾಯಿಗಳು ಖರ್ಚಾಗುತ್ತವೆ, ಅದೇ ಖರ್ಚಿನಲ್ಲಿ ಖರ್ಚು ಎಂದು ಮತ್ತೊಂದು ಲಕ್ಷ ಖರ್ಚು ಮಾಡಿ ತಮ್ಮ ಪುಟ್ಟ ಮನೆಯಲ್ಲೇ ‘ಮಳೆನೀರು ಕೊಯ್ಲು’ (ವಾಟರ್ ಹಾರ್ವೆಸ್ಟಿಂಗ್) ವ್ಯವಸ್ಥೆ ಮಾಡಿಕೊಂಡರೆ ಆ  ಮನೆಗೆ ಇಡೀ ವರ್ಷಕ್ಕಾಗುವಷ್ಟು ನೀರು ಖಂಡಿತವಾಗಿ ಪೂರೈಕೆಯಾಗುತ್ತದೆ. ಮಳೆಗಾಲದಲ್ಲಿ ಎಷ್ಟೇ ಅಲ್ಪ ಮಳೆಯಾದರೂ ಈ ವ್ಯವಸ್ಥೆಯಿಂದಾಗಿ ಒಂದು ತೊಟ್ಟೂ ನೀರು ಹಾಳಾಗದೇ ಎಲ್ಲವೂ ಆ ಮನೆಯ ಅಂಗಳದಲ್ಲೇ ಇಂಗಿ, ಆ ಮನೆಗಂತೂ ನೀರಿನ ಕೊರತೆ ಎಂದೂ ಉಂಟಾಗುವುದಿಲ್ಲ,  ಬೇಸಿಗೆಕಾಲದಲ್ಲಿ 800 ರೂ. ಗಳಿಗೆ ಒಂದು ಟ್ಯಾಂಕರಿನಂತೆ 15 ದಿನಕ್ಕೊಂದು ಟ್ಯಾಂಕರ್ ಹಾಕಿಸಿ, ಏಸಿ ಯ ಬಿಲ್ಲನ್ನು ಕೊಡುತ್ತಾ ಬಿಸಿಲ ಬೇಗೆಯನ್ನು ಸಹಿಸುವ ಬದಲು ಮನೆ ಕಟ್ಟುವಾಗಲೇ ಸ್ವಲ್ಪ ಖರ್ಚು ಮಾಡಿಬಿಡುವುದು ಜಾಣತನವಲ್ಲವೇ?    

ಪ್ರತಿ ಮನೆಯ ತಾರಸಿಯ ಮೇಲೆ ಸೌರಶಕ್ತಿಯ ವ್ಯವಸ್ಥೆಯನ್ನು ಅಳವಡಿಸುವುದು ಅಷ್ಟೇ ಮಹತ್ವದ್ದು. ಇದರಿಂದ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಿ ತನ್ಮೂಲಕ ವಿದ್ಯುತ್ ತಯಾರಿಕೆಯಲ್ಲಿ ಬಳಸಲಾಗುವ ವಸ್ತುಗಳಿಂದುಂಟಾಗುವ ಬಿಸಿಯನ್ನು ತಡೆಯಬಹುದು.    

ಮಹಡಿ ವಸತಿಯನೆ್ನು(ಅಪಾರ್ಟ್ಮಂಟ್) ಕೊಂಡುಕೊಳ್ಳುವವರು ಅಂತಹ ಸಂಕೀರ್ಣಗಳಲ್ಲಿ ಸೌರಶಕ್ತಿಯ, ಮಳೆಕೊಯ್ಲಿನ ವ್ಯವಸ್ಥೆಯನ್ನು ಅಳವಡಿಸಲಾಗಿದೆಯೇ ಎನ್ನುವುದನ್ನು ಖಚಿತ ಪಡಿಸಿಕೊಂಡೇ ಕೊಂಡುಕೊಳ್ಳಬೇಕು. ಹಣ ಪಡೆಯುವ ಅಧಿಕಾರಿಗಳು, ಹಣ ನೀಡುವ ಬಿಲ್ಡರುಗಳು ಹಣ ಕೊಟ್ಟು, ಮಳೆಕೊಯ್ಲು ಆಗಿದೆ ಎಂದು ಸುಳ್ಳು ಸರ್ಟಿಫಿಕೇಟ್ ನೀಡಿ/ಪಡೆದು ಕೊಂಡರೆ ಏನು ಮಾಡಲು ಸಾಧ್ಯ? ಆದ್ದರಿಂದ  ಅಂತಹ ಮಹಡಿ ವಸತಿಗಳು ಎಷ್ಟೇ ಕಡಿಮೆ ಬೆಲೆಗೆ ಸಿಕ್ಕರೂ ಅವುಗಳನ್ನು ಕೊಂಡುಕೊಳ್ಳಬಾರದು.    

ಇನ್ನು ಸಿರಿವಂತರು ಪೈಪ್ ಹಚ್ಚಿ ಕಾರು ತೊಳೆಯುವುದು, ಹೊರಗಿನ ಗೇಟ್ ಹಾಗೂ ಗ್ರಿಲ್ಲುಗಳನ್ನೆಲ್ಲ ನಿತ್ಯ ತೊಳೆಯುವುದು ಒಳಗಿನ ಹಾಗೂ ಹೊರಗಿನ ಅಂಗಳಕ್ಕೆಲ್ಲ ನಿತ್ಯ ನೀರು ಹಾಕುವುದು ಮುಂತಾದ ಚಟುವಟಿಕೆಗಳನ್ನು ನೀರಿನ ಸಂಗ್ರಹವನ್ನು ನೋಡಿ ನಿರ್ಧರಿಸಬೇಕು. ನೀರಿನ ಬಳಕೆ ಅತಿಯಾದರೆ ಈಗಿರುವ ನೀರಿನ ಸಂಗ್ರಹ ಕಡಿಮೆಬೀಳುವದು ಸ್ವಾಭಾವಿಕ.     

ಬಿಲ್ಡರುಗಳು:  

ಮಹಡಿ ವಸತಿಯಲ್ಲಿರುವವರು ತಮ್ಮ ಬಿಲ್ಡರ್ ಏನು ಕಟ್ಟುತ್ತಾನೋ ಅದರಮೇಲೆ ವಿಶ್ವಾಸವಿಡಬೇಕಾಗುತ್ತದೆ. ‘ಕಾಸ್ಟ್‌ ಕಟಿಂಗ್‌’ ಮಾಡುವುದನ್ನು ಬಿಲ್ಡರುಗಳು ತಮ್ಮ ಜನ್ಮಸಿದ್ಧ ಹಕ್ಕು ಎಂದುಕೊಳ್ಳುತ್ತಾರೆ. ಮಾಡಲಿ. ಆದರೆ ವಸತಿ ಸಂಕೀರ್ಣಗಳಲ್ಲಿ ಮಳೆಕೊಯ್ಲು  ಹಾಗೂ ಸೌರಶಕ್ತಿ ಅಳವಡಿಕೆಯ ವೆಚ್ಚದಲ್ಲಿ ಮಾತ್ರ  ಉಳಿತಾಯ ಮಾಡಕೂಡದು. ಇದು ನಾಡಭಕ್ತಿಗಾಗಿ ಮಾಡಬೇಕಾದ ಕೆಲಸ. ನಾಡಭಕ್ತಿ, ದೇಶಭಕ್ತಿ ಇವೆಲ್ಲ ಹಣದ ಮುಂದೆ ಅರ್ಥಹೀನ ಮಾತುಗಳು.  ಆದ್ದರಿಂದ ಕಟ್ಟಡ ಕಟ್ಟಲು ಅನುಮತಿ ನೀಡಬೇಕಾದ ಅಧಿಕಾರಿಗಳು ಮಳೆಕೊಯ್ಲನ್ನು ಅಳವಡಿಸದ ಬಿಲ್ಡರುಗಳಿಗೆ ಅನುಮತಿ ಕೊಡಬಾರದು.    

ಕಟ್ಟಡ ಕಟ್ಟುವಾಗ, ರಸ್ತೆ ಅಗಲೀಕರಣದ ಪ್ರಸಂಗಗಳಲ್ಲಿ ಬೆಳೆದ ಮರಗಳನ್ನು ಕಡಿಯುವುದು ಅನಿವಾರ್ಯ. ಹಾಗಿದ್ದಾಗ ಕಟ್ಟಡ ಕಟ್ಟಿದ ಮೇಲೆ ಅದರ ಸುತ್ತಲೂ ಅಷ್ಟೇ ಅಥವ ಅದಕ್ಕೂ ಹೆಚ್ಚಿನ ಮರಗಳನ್ನು ನೆಡುವುದು ಅನಿವಾರ್ಯ ಎಂದುಕೊಂಡು ಅದಕ್ಕೆ ಬೇಕಾದಷ್ಟು ಖಾಲಿ ಜಾಗೆಯನ್ನಿಟ್ಟುಕೊಂಡೇ ಕಟ್ಟಡದ ಯೋಜನೆ ಹಾಕಬೇಕು. ಕಟ್ಟಡದ ಸುತ್ತಲೂ ಕಂಪೌಂಡ ಗೋಡೆ ಕಟ್ಟುವ ಬದಲು ತಂತಿಬೇಲಿಯನ್ನು ಹಾಕಿ ಅದರ ಹಿಂದೆ ದಟ್ಟವಾಗಿ ಮರಗಳನ್ನು ಬೆಳೆಸಿದರೆ ಮರಗಳ ಸಂಖ್ಯೆ ಅಷ್ಟೇ ಉಳಿಯುವುದು. ಕಟ್ಟಡವೂ ತಂಪಾಗಿರುವುದು. ಬಹಳಷ್ಟು ಮರಗಳು ಪ್ರಾಣವಾಯುವನ್ನು ಪರಿಸರಕ್ಕೆ ನೀಡುವುದರಿಂದ ಅಲ್ಲಿಯ ನಿವಾಸಿಗಳ ಆರೋಗ್ಯವೂ ಉತ್ತಮಗೊಳ್ಳುವುದು. ಕಟ್ಟಡದ ಅನುಮತಿ ಪಡೆಯಲು ಇದು ಕಡ್ಡಾಯ ಎಂದು ಕಾನೂನು ಮಾಡಿದರಂತೂ ತುಂಬಾ ಒಳ್ಳೆಯದು.   

ಇದರಂತೆ ನೀರು ಮರುಬಳಕೆಯ ಪ್ಲಾಂಟಗಳನ್ನು ಅಳವಡಿಸುವುದರಲ್ಲೂ ಕಾಸ್ಟ್‌ ಕಟಿಂಗ್ ಮಾಡಬಾರದು. ಇದರಿಂದ ಪಾಯಖಾನೆಗಳನ್ನು ಫ್ಲಶ್ ಮಾಡಲು ಸಾಕಷ್ಟು ನೀರು ಲಭ್ಯವಾಗುತ್ತದೆ. ಆದರೆ ಇಂಥ ಪ್ಲಾಂಟುಗಳನ್ನು ವ್ಯವಸ್ಥೆ ಮಾಡುವಾಗ ಮಾತ್ರ ಉತ್ತಮ ತಾಂತ್ರಿಕತೆಯ ನೆರವನ್ನು ಪಡೆಯಬೇಕು. ಇಲ್ಲವಾದರೆ ಕಟ್ಟಡದ ತುಂಬಾ ದುರ್ವಾಸನೆ ಹರಡಿ ಅದರಲ್ಲಿ ವಾಸಿಸುವುದೇ ದುಸ್ತರವಾಗುತ್ತದೆ.   ಎಂಥೆಂಥ  ಐಷಾರಾಮಿ ಕಟ್ಟಡಗಳಿರುತ್ತವೆ.  ಅದರಲ್ಲೂ ಸರಕಾರಿ ಇಲಾಖೆಯ ಕಟ್ಟಡಗಳು. ಅಲ್ಲಿ ನಮ್ಮ ಕೆಲಸಕ್ಕೆ ಹೋದಾಗ ನಮ್ಮನ್ನು ಮೊದಲು ಸ್ವಾಗತಿಸುವುದು ಮೂತ್ರದ ವಾಸನೆ. ಇದನ್ನು ಹೋಗಲಾಡಿಸಲು ನೀರು ಮರುಬಳಕೆಯ ಪ್ಲಾಂಟ್ ಅಳವಡಿಕೆಯ ಜತೆಗೇ ಆಟೋ ಫ್ಲಶ್ ಗಳನ್ನೋ, ಮೋಷನ್ನ ಸೆನ್ಸರುಗಳನ್ನೋ ಅಥವಾ ಕಾಲಿನಿಂದ ಒತ್ತಿದಾಗ ಫ್ಲಶ್ ಆಗುವ ವ್ಯವಸ್ಥೆಯನ್ನೋ ಮಾಡಿ ಸಾಕಷ್ಟು ನೀರು ಪೂರೈಕೆಯ ವ್ಯವಸ್ಥೆಯೂ ಆದರೆ ನೀರಿನ ಉಳಿತಾಯದ ಜತೆಗೆ ಸ್ವಚ್ಛತೆಯ ಕಡೆಗೂ ಗಮನಕೊಟ್ಟಂತಾಗುತ್ತದೆ. ಇದೆಲ್ಲದರಿಂದ ಮತ್ತೆ ಒಂದೆರಡು ಲಕ್ಷ ಖರ್ಚಾಗಬಹುದು. ಆದರೆ ಬಿಸಿಲನ್ನು ಕಡಿಮೆಮಾಡುವ ನಮ್ಮ ಉದ್ದೇಶ ಸಫಲವಾಗುತ್ತದೆ.   

ರಾಜಸ್ಥಾನದಲ್ಲಿ ಬಿರು ಬೇಸಿಗೆಯಲ್ಲೂ ಮನೆಯ ಒಳಗೆ ತಂಪಾಗಿರುವಂತೆ ಮನೆ ಕಟ್ಟಿಸುತ್ತಾರೆ, ನಮ್ಮ ಬಿಲ್ಡರುಗಳು ಆ ತಾಂತ್ರಿಕತೆಯನ್ನು ಒಗ್ಗೂಡಿಸಿಕೊಂಡು ಇಲ್ಲಿಯ ಮನೆಗಳನ್ನೂ, ಮಹಡಿ ವಸತಿಗಳನ್ನೂ (ಅಪಾರ್ಟ್ಮಂಟ್ಸ್‌) ಕಟ್ಟಿದರೆ ವಾತಾನುಕೂಲಗಳು ವಾತಾವರಣಕ್ಕೆ ಬಿಡುವ ಶಾಖವನ್ನಾದರೂ ತಡೆಯಬಹುದಲ್ಲ.  ಮನೆಯಲ್ಲಿ ಗಾಳಿ ಬೆಳಕು ಯಥೇಷ್ಟವಾಗಿ ಬರುವಂತೆಯೇ ಯೋಜನೆ ಹಾಕಬೇಕು. ಇದರಿಂದ ವಿದ್ಯುತ್ ಬಳಕೆಯನ್ನು ಸಾಕಷ್ಟು ನಿಲ್ಲಿಸಬಹುದು.   

ಮನೆ ಅಥವಾ ಮಹಡಿ ವಸತಿಗಳನ್ನು ಕಟ್ಟುವಾಗ ಇಂತಿಷ್ಟು ಕಟ್ಟಡಗಳ ನಡುವೆ ಇಂತಿಷ್ಟು ಆಟದ ಮೈದಾನಗಳು ಇರಲೇಬೇಕು ಎಂಬ ನಿಯಮವನ್ನು ಪಾಲಿಸಬೇಕು. ಇದ್ದ ಬದ್ದ ಜಾಗಗಳನ್ನೆಲ್ಲ ಸಿಮೆಂಟು ಉಸುಕಿನಿಂದ ತುಂಬಿದರೆ? ಉಸಿರಾಡಿಸಲಾದರೂ ಸ್ವಲ್ಪ ಗಿಡಮರಗಳು ಬೇಕಲ್ಲವೇ?  

ನಗರಪಾಲಿಕೆಗಳು ಹಾಗೂ ರಾಜಕಾರಣಿಗಳು    

ಬಿಸಿಲ ಬೇಗೆ ಹಾಗೂ ಮರುಭೂಮಿ ನಿರ್ಮಾಣ ತಡೆಯುವದರಲ್ಲಿ ಇವರಿಬ್ಬರ ಪಾತ್ರ ಅತಿ ಮುಖ್ಯವಾದದ್ದು. ಕೆರೆ ಕಟ್ಟೆಗಳ ಒತ್ತೂವರೆ ಮಾಡಿ, ಅರಣ್ಯದ ಜಮೀನುಗಳನ್ನು ನುಂಗಿ, ರಸ್ತೆ ಬದಿಯಲ್ಲಿ ಬರುವ ಫಲವತ್ತಾದ ಹೊಲಗಳನ್ನು ಡಿನೋಟಿಫೈ ಮೂಲಕ ಎತ್ತಿಹಾಕಿಕೊಂಡು ಮರುಭೂಮಿ ನಿರ್ಮಾಣದಲ್ಲಿ ಇವರು ಸಾಕಷ್ಟು ಕೊಡುಗೆಯನ್ನು ನೀಡುತ್ತಿದ್ದಾರೆ.  ಹೊಲಗಳ ಸಂಖ್ಯೆ ಹಾಗೂ ಹೊಲದಲ್ಲಿ ಬೆಳೆಯುತ್ತಿರುವ ಬೆಳೆಗಳ ಸಂಖ್ಯೆ ಕಡಿಮೆಯಾದರೆ ತಿನ್ನುವುದೇನು? ಸಿಮೆಂಟು ಉಸುಕುಗಳಿಂದ ಹೊಟ್ಟೆ ತುಂಬುವುದೇ? ಆದ್ದರಿಂದ ಹೊಸ ಕಟ್ಟಡಗಳಿಗೆ ಅನುಮತಿ ಕೊಡುವಾಗ ನಗರಾಭಿವೃದ್ಧಿ ಇಲಾಖೆಯವರು, ನಗರ ಪಾಲಿಕೆಗಳು ಹಾಗೂ ರಾಜಕಾರಣಿಗಳು (ಅವರು ತಲೆಹಾಕದಿದ್ದರೂ ಒಳ್ಳೆಯ ಕೆಲಸವನ್ನೇ ಮಾಡಿದಂತೆ) ಸಭೆ ಸೇರಿ ಅನ್ನ ಬೆಳೆಸುವ ಹೊಲಗಳು ಹಾಗೂ ಕಟ್ಟಡಗಳ ನಿಶ್ಚಿತ ಅನುಪಾತಗಳನ್ನು ನಿರ್ಧರಿಸಿ ಅದರಂತೆಯೇ ಅನುಮತಿ ಪತ್ರಗಳನ್ನು ನೀಡಬೇಕು. ನಗರಗಳು ಸಿಕ್ಕಾಪಟ್ಟೆ ಬೆಳೆಯುವಂತೆ ಎಲ್ಲೆಂದರಲ್ಲಿ ಕಟ್ಟಡಗಳನ್ನು ಕಟ್ಟಿದರೆ, ಮಹಡಿ ವಸತಿ ಸಂಕೀರ್ಣಗಳಲ್ಲಿ ಎಷ್ಟೋ ಮನೆಗಳು ಕೊಳ್ಳುವವರಿಲ್ಲದೇ ಖಾಲಿ ಬಿದ್ದಿವೆ.  ಕೆಲವರಂತೂ ಕೇವಲ ಹಣತೊಡಗಿಸಿಡುವ (ಇನ್ ವ್ಹಸ್ಟ್ಮೆಂಟ್) ದೃಷ್ಟಿಯಿಂದ ಮನೆಗಳನ್ನು ಕೊಂಡಿರುತ್ತಾರೆ. ಅಂಥ ಮನೆಗಳೂ ಖಾಲಿ ಬಿದ್ದಿರುತ್ತವೆ.  ಪರಿಸ್ಥಿತಿ ಹೀಗಿದ್ದಾಗಲೂ ಹೊಲಗಳನ್ನು ಏನ್‌. ಏ. (ನೋನ್ ಅಗ್ರಿಕಲ್ಚರ್) ಮಾಡುವುದು, ಹೊಸ ಮಹಡಿ ಕಟ್ಟಡಗಳಿಗೆ, ಸಂಕೀರ್ಣಗಳಿಗೆ ಅನುಮತಿ ಕೊಡುವುದು, ಅವ್ಯಾಹತವಾಗಿ ನಡೆದೇ ಬಿಟ್ಟಿದೆ. ಇದನ್ನು ತಡೆಯಲು ನಾವು ಮತ ಹಾಕುವಾಗ ಅತಿ ಆಸೆಬುರುಕ ನುಂಗಣ್ಣರಿಗೆ ಮತ ಹಾಕದೇ ಕಿಂಚಿತ್ತಾದರೂ ನಾಡಭಕ್ತಿ, ದೇಶದ ಕುರಿತು ಕಳಕಳಿ ಇರುವ ವ್ಯಕ್ತಿಗಳಿಗೆ ಮತ ಹಾಕಬೇಕು.   

ನಗರ ಪಾಲಿಕೆಯವರು ಬೇಸಿಗೆಯ ಕೊನೆ ಕೊನೆ ದಿನಗಳಲ್ಲಿ ’ನಮ್ಮ ನೀರಿನ ಸಂಗ್ರಹ ಮುಗಿದಿದೆ. ನೀರನ್ನು ಮಿತವಾಗಿ ಬಳಸಿ’ ಎಂದು ಭಿಕ್ಷೆ ಬೇಡುತ್ತ ಹೋಗುವ ಬದಲು ತಮ್ಮ ನೀರು ಸಂಗ್ರಹಾಲಯದ ಕ್ಷಮತೆಯನ್ನು ಹೆಚ್ಚಿಸಿಕೊಳ್ಳಬೇಕು. ಪಾಲಿಕೆಯವರಿಗೆ, ’ಎಷ್ಟು ಹೊಸ ಕಟ್ಟಡಗಳಿಗೆ ಅನುಮತಿ ಕೊಟ್ಟಿದ್ದೇವೆ, ಅದಕ್ಕೆ ತಕ್ಕಂತೆ ಎಷ್ಟು ಜನವಸತಿ ಹೆಚ್ಚಾಗುತ್ತದೆ, ಅದಕ್ಕನುಸಾರವಾಗಿ ಎಷ್ಟು ಹೆಚ್ಚಿನ ನೀರಿನ ಬಳಕೆಯಾಗುತ್ತದೆ’ ಎಂದು ಲೆಕ್ಕ ಹಾಕಲು ಬರುವುದಿಲ್ಲವೇ? ಹೊಸ ಕಟ್ಟಡಗಳಿಗೆ ಅನುಮತಿ ಕೊಡುವಾಗ ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಅನುಮತಿ ನೀಡಿದರೆ ಇಷ್ಟೊಂದು ಸಮಸ್ಯೆಯಾಗಲಿಕ್ಕಿಲ್ಲ,   

ನೈಸರ್ಗಿಕ ಕೆರೆಗಳ ಹೂಳೆತ್ತಿ ಅವು ಮಳೆಗಾಲದಲ್ಲಿ ತುಂಬುವಂತೆ ನೋಡಿಕೊಳ್ಳಬೇಕು. ನಿಸರ್ಗ ಎಲ್ಲರಿಗೂ ಸಾಲುವಷ್ಟು ಮಳೆ ಸುರಿಸುತ್ತದೆ. ಅದರ ಸರಿಯಾದ ಬಳಕೆ ಮಾಡಬೇಕು ಅಷ್ಟೇ.   

ಜನಸಾಮಾನ್ಯರು     

ತಮ್ಮೂರಿನಲ್ಲಿ, ತಮ್ಮ ಪ್ರದೇಶದಲ್ಲಿ ಬರುವ ಕೆರೆಕಟ್ಟೆಗಳ ಹೂಳೆತ್ತುವುದನ್ನು, ಊರ ಹಿರಿಯರೆಲ್ಲ ಸೇರಿ ಮಳೆಕೊಯ್ಲಿನ ವ್ಯವಸ್ಥೆ ಮಾಡಿಕೊಳ್ಳುವುದನ್ನು ಅನೇಕರು ಮಾಡುತ್ತಿದ್ದಾರೆ.  ಅಂತಹ ಪ್ರದೇಶಗಳು ಜಲಸಮೃದ್ಧಿ ಹೊಂದಿ ಹಸುರಿನಿಂದ ಕಂಗೊಳಿಸುತ್ತಿವೆ.  ತಮ್ಮದೇ ಶ್ರಮದಿಂದ ಉಂಟಾದ ಹಸಿರು ಹಾಗೂ ಸಮೃದ್ಧ ಬೆಳೆಯಿಂದ ಆ ಪ್ರದೇಶದ ಜನರು ಸಂತುಷ್ಟರಾಗಿದ್ದರೆ.  ಅಂಥವರು ಸರಕಾರ ನೀಡುವ ಅಕ್ಕಿ ಭಿಕ್ಷೆಗೆ ಕೈಯೊಡ್ಡುವುದಿಲ್ಲ. ಭಿಕ್ಷಾನ್ನವನ್ನು ಸ್ವೀಕರಿಸುವುದು ತಮ್ಮ ಮಾನಕ್ಕೆ ಕುತ್ತು ಎಂದು ಕೊಳ್ಳುತ್ತಾರೆ.  ಅಂಥವರು ಯಾವ ಆಮಿಷಕ್ಕೂ ಬಲಿಯಾಗದೇ ದೂರದೃಷ್ಟಿಯುಳ್ಳ, ದೇಶದ ಹಿತ ಬಯಸುವ ಯೋಗ್ಯರನ್ನು ಆರಿಸುತ್ತಾರೆ. ಆ ಆತ್ಮಸಮ್ಮಾನ ನಮ್ಮಲ್ಲಿ ಬೆಳೆದರೆ ನಾವು ನಮ್ಮ ಭೂತಾಯಿಯ ಮೇಲೆ ಇಷ್ಟು ಅತ್ಯಾಚಾರವಾಗಲು ಬಿಡುವುದಿಲ್ಲ.    

‘ಕರ್ನಾಟಕ ಇನಿತರಲ್ಲೇ ಮರುಭೂಮಿಯಾಗಲಿದೆ’ ಎನ್ನುವುದು ದುಃಖದಾಯಕವಾದರೂ ಸತ್ಯ ಸಂಗತಿ. ಮರುಭೂಮಿ ತಯಾರಾಗಲು ಸುಮಾರಾಗಿ ಕೆಲ ವರ್ಷಗಳು ಹಿಡಿಯುತ್ತವೆ. ಆದರೆ ಒಂದು ನಿಶ್ಚಿತ ಮಟ್ಟವನ್ನು ಮುಟ್ಟಿದಾಗ ಕೇವಲ ಎರಡು ವರ್ಷಗಳಲ್ಲಿ ನಾಡು ಬೆಂಗಾಡುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ಅದರ ಲಕ್ಷಣಗಳು ಬೆಳಗಾವಿಯಲ್ಲಂತೂ ಕಾಣುತ್ತಿವೆ. ಒಂದು ಕಾಲಕ್ಕೆ ದಕ್ಷಿಣದ ಮಹಾಬಳೇಶ್ವರ ಎನ್ನಿಸಿಕೊಳ್ಳುತ್ತಿದ್ದ ಬೆಳಗಾವಿ ಇಂದು ಬಿಸಿಲನಾಡಾಗಿದೆ. ಖಾನಾಪುರದ ದಟ್ಟಡವಿಯಲ್ಲಿ ಕೇಳಿಬರುತ್ತಿದ್ದ ಬಿದಿರು ಮೆಳೆಯ ಮಧ್ಯದ ಗುಠ್ ಗಾನ ಎಲ್ಲೋ ಅಡಗಿ ಬಟ್ಟಬಯಲಾಗಿರುವ ಭೂಮಿಯಲ್ಲಿ ಬಿಸಿಲ ಕೋಲುಗಳು ಕಾಣುತ್ತಿವೆ. ಸಂಪಿಗೆ ಮಾವುಗಳ ನವಿರಾದ ಸುಗಂಧದಿಂದ ಸುತ್ತುವರಿಯಲ್ಪಟ್ಟ ವಿಶಾಲ ಪ್ರದೇಶದ ಮಧ್ಯದ ತಂಪಿನಲ್ಲಿ ಕಟ್ಟಿರುವ ಮನೆಗಳೊಳಗೆ ಚಳಿಯಾಕೆಯ ಹಿತವಾದ ಅಪ್ಪುಗೆಯಲ್ಲಿ ಅಗ್ಗಿಷ್ಟಿಕೆಯ ಬಿಸಿಯಲ್ಲಿ ಸುಟ್ಟ, ಲಿಂಬೆ ಉಪ್ಪುಗಳನ್ನು ಸವರಿದ ಗೋವಿನಜೋಳವನ್ನು ಮೆಲ್ಲುತ್ತಿದ್ದ ಬೆಳಗಾವಿಗರು ಇಂದು ’ಅಯ್ಯೋ! ಈ ಬಿಸಿಲು ತಡೆಯಲಾಗುತ್ತಿಲ್ಲ’ ಎಂದು ಉದ್ಗಾರ ಹೊರಡಿಸುತ್ತ ಕುಳಿತಿದ್ದಾರೆ.    

ನಾವೇ ಯೋಚಿಸೋಣ. ನಾವು ದಕ್ಷಿಣದ ರಾಜಸ್ಥಾನವಾಗೋಣವೇ? ಎಲ್ಲರಿಗೂ ನಾವು ಹೇಳಲು ಶಕ್ಯವಿಲ್ಲ.  ಕೊನೆಯ ಪಕ್ಷ ಬೆಳಗಾವಿಗರಾದರೂ ಬೆಳಗಾವಿಯ ’ದಕ್ಷಿಣದ ಮಹಾಬಳೇಶ್ವರ’ ಎಂಬ ಬಿರುದನ್ನು ಉಳಿಸಿಕೊಳ್ಳಲು ಪ್ರಯತ್ನಿಸೋಣ.   

- ಭಾರತಿ ಭೀಮಸೇನ ತೊರಗಲ್ಲ   

ಬೆಳಗಾವಿ   

9481521150 

- * * * -   


ಸುದ್ದಿ ಓದಿ