ಲೇಖನಗಳು

ಕಥೆಗಳನ್ನು ಓದುವುದಕ್ಕೂ ಮೊದಲು...

ಕಥೆಗಳನ್ನು ಓದುವುದಕ್ಕೂ ಮೊದಲು...

ನಾನು ತಮಗೆಲ್ಲ ಅನೇಕರ ಕಥೆ ಹೇಳುತ್ತೇನೆ. ಇವುಗಳು ನಾನು ಬರೆದ ಕಾಲ್ಪನಿಕ ಕಥೆಗಳಲ್ಲ.  ನಮ್ಮ ಕಣ್ಣೆದುರೇ ನಡೆದ,ನಡೆಯುತ್ತಿರುವಂತಹವುಗಳು. ಮುಂದೆಯೂ ಹೀಗೇ ಮುಂದುವರೆಯಬಹುದೆಂದು ನಿಖರವಾಗಿ ಹೇಳುವಂಥ ಘಟನೆಗಳು. ಸಾತ್ವಿಕ ಹೆಣ್ಣುಮಕ್ಕಳ ಕಥೆಗಳು. ಸಂಭಾವಿತ ಗಂಡು ಹುಡುಗರ ಕಥೆಗಳು. ಈ ಕಥೆಗಳಲ್ಲಿಯ ಪಾತ್ರಗಳಲ್ಲಿ ಬರುವ ಅನೇಕರು 40-45-50-52 ರ ಆಸುಪಾಸಿನ ವಯಸ್ಸಿನವರು. ಬೇರೆ ಮದುವೆ ಮಾಡಿಕೊಳ್ಳುವ ವಯಸ್ಸಿನವರಲ್ಲ. ಈ ವಯಸ್ಸಿನಲ್ಲಿ ಬೇರೆ ಹೆಣ್ಣು ಅಥವಾ ಗಂಡು ಮನಸ್ಸನ್ನಾಕರ್ಷಿಸುವ ಸಾಧ್ಯತೆಗಳು ಕಡಿಮೆ. ಎಲ್ಲಿಯೋ ಅಪ್ಪಿ ತಪ್ಪಿ ಬಹಳೇ ಸಂಪರ್ಕ ಬಂದು ಒಂದು ವೇಳೆ ಆಕರ್ಷಣೆ ಎನ್ನಿಸಿದರೂ ಮದುವೆಯಾಗಿ ಅದರ ಭಾರಗಳನ್ನು ಹೊರುವ, ಅದರ ಆಘಾತಗಳನ್ನು ಸಹಿಸುವ ಮನಸ್ಸಿಲ್ಲದವರು. ಆದರೆ ಜತೆಗಾರರ ಒಡನಾಟವಿಲ್ಲದೇ ಒಂಟಿಯಾಗಿ ಜೀವನ ಕಳೆಯುವ ಮಾನಸಿಕತೆಗೆ ಭಯಪಡುವವರು. ಪರಿಪೂರ್ಣ ಸಂಸಾರ ಹೊಂದಿರುವವರನ್ನು ನೋಡಿ ತಮ್ಮ ಒಡೆದುಹೋದ ಸಂಸಾರವನ್ನು ನೆನೆದು ಅಸಹಾಯಕತೆಯಿಂದ ಕಣ್ಣೀರಿಡುವವರು. ಹಾಗೆಂದು ಸಮಾಜದ ಅಸಮಂಜಸ ವ್ಯವಸ್ಥೆಯ ವಿರುದ್ಧ ಸಿಡಿದು ನಿಂತು ನಿರ್ಭೀತರಾಗಿ ದಿಟ್ಟ ಹೆಜ್ಜೆಗಳನ್ನಿಟ್ಟರೋ ಸಮಾಜದಿಂದ ಬಹಿಷ್ಕೃತರಾಗುವವರು.    

ಸುಳ್ಳಿಗೆ ಸಂಗಾತಿಗಳು ಬಹಳವಂತೆ. ಸತ್ಯ ಯಾವಾಗಲೂ ಒಂಟಿಯಂತೆ. ಆ ಜಾಣ್ನುಡಿಯಂತೆ ಈ ನೊಂದ ಆತ್ಮಗಳೆಲ್ಲ ಸಂಗಾತಿಗಳಿಲ್ಲದ ಸತ್ಯವಂತರು. ಎಂತಲೇ ಇಂಥ ಜೀವಿಗಳ ಧ್ವನಿಗೆ ಬೆಲೆಯಿಲ್ಲ. ಇವರದೆಲ್ಲ ಮೂಕ ರೋದನ.  ಈ ಸಮಾಜ ಅವರ ಮನದ ಭಾವನೆಗಳಿಗೆ ಯಾವರೀತಿಯೂ ಸ್ಪಂದಿಸುವುದಿಲ್ಲ, ಅವರ ಮನಸ್ಸಿನ ಮಿಡಿತವನ್ನು ಅರ್ಥ ಮಾಡಿಕೊಳ್ಳುವುದೂ ಇಲ್ಲ. ಇದಕ್ಕೆ ವಿಪರೀತವಾಗಿ ಇವರೆಲ್ಲ, ಹೊರನೋಟಕ್ಕೆ ಕಂಡದ್ದನ್ನೇ ಸತ್ಯವೆಂದು ನಂಬಿ-ನಂಬಿಸಿ ನಡೆಯುವ ಸಮಾಜದ ಜನಗಳ ಮೂದಲಿಕೆಗೆ ಗುರಿಯಾಗುತ್ತಾರೆ.  ಮಾಡಲು ಬೇರೆ ಕೆಲಸವಿಲ್ಲದೇ ಸಮಾಜದ ನೈತಿಕತೆಯ ಹೊಣೆಯನ್ನು ಹೊತ್ತವರು ತಾವೇ ಎಂದು ಬೀಗುವ ಜನಗಳ ಕೆಂಗಣ್ಣಿಗೆ ಇವರೇ ಆಹಾರ.     

ಈ ಕಥೆಗಳನ್ನು ಓದಿದ ನಂತರ ಇಂಥವರಿಗೆ ಯಾಕೆ ನ್ಯಾಯ ದೊರಕಿಲ್ಲ ಎಂದು ನಿಮ್ಮ ಮನ ಮಿಡಿದರೆ ನನ್ನ ಪ್ರಯತ್ನ ಸಾರ್ಥಕ. ಹಾಗೊಂದು ವೇಳೆ ನೊಂದವರಿಗಾಗಿ ನಿಮ್ಮ ಹೃದಯ ಮಿಡಿಯುತ್ತಿದ್ದರೆ ಅಂಥವರಿಗೆ ಬಾಳು ಕೊಡಲು ಪ್ರಯತ್ನಿಸಿ. ಅದು ಸಾಧ್ಯವಾಗದಿದ್ದರೆ ಅವರೇ ಕಂಡುಕೊಂಡ ದಾರಿಯಲ್ಲಿ ಅವರನ್ನು ಹೋಗಗೊಡಿ. ವಿಘ್ನಗಳನ್ನು ತರಬೇಡಿರಿ.  ಅಂಥವರ ಕುರಿತು ಯಾವುದೇ ಅಭಿಪ್ರಾಯಕ್ಕೆ ಬರುವ ಮೊದಲು ನಿಮ್ಮ ವಿಚಾರ ದೃಷ್ಟಿಯನ್ನು, ಅಂಥವರ ಕುರಿತ ನಿಮ್ಮ ಚಿಂತನೆಯನ್ನು ಬದಲಾಯಿಸಿಕೊಳ್ಳಿರಿ.  ಆಗ ಸುಂದರ ಸಮಾಜ ನಿರ್ಮಾಣದಲ್ಲಿ ನಿಮ್ಮ ಅಳಿಲು ಸೇವೆಯನ್ನು ಸಲ್ಲಿಸಿದ ಸಾರ್ಥಕ ಭಾವ ನಿಮ್ಮದಾಗುತ್ತದೆ  

ಸಮಾಜದ ಕೆಲವು ಅಲಿಖಿತ ನಿಯಮಗಳಿವೆ. ಅವುಗಳನ್ನುಯಾರೂ ಎಲ್ಲಿಯೂ ಬರೆದಿಟ್ಟಿಲ್ಲ. ಆದರೂ ಎಲ್ಲರೂ ಅವುಗಳನ್ನು ತಪ್ಪದೆ ಪಾಲಿಸುತ್ತಾರೆ. ಅವುಗಳನ್ನು ಮೀರಿ ನಡೆದಾಗ ಸಮಾಜ ರಕ್ಷಕರು ಎಂದು ತಮ್ಮನ್ನೇ ತಾವು ಕರೆದುಕೊಳ್ಳುವ ಕೆಲವರು ಅಂಥವರಿಗೆ ತಮಗೆ ತಿಳಿದಂತೆ ಶಿಕ್ಷೆ ಕೊಡಲು ಸ್ವಯಂ ಸ್ಫುರ್ತಿಯಿಂದ ಮುಂದಾಗಿಬಿಡುತ್ತಾರೆ.  ಆದರೆ ಯಾರಿಗೆ ಶಿಕ್ಷೆ ಕೊಡುತ್ತಾರೆ? ತಪ್ಪಿತಸ್ಥರಿಗೋ? ನೊಂದವರಿಗೋ? ನಿಯಮ ಬಾಹಿರವಾಗಿ ನಡೆದುಕೊಂಡವರಿಗೋ? ನಿಯಮಗಳನ್ನು ಪಾಲಿಸಿದವರಿಗೋ? ಶಿಕ್ಷೆ ಕೊಡುವ ಅಧಿಕಾರವನ್ನುಇವರಿಗೆ ಯಾರು ನೀಡಿದರು?  

ಇಷ್ಟಕ್ಕೂ ಈ ಅಲಿಖಿತ ನಿಯಮಗಳ ಕರ್ತೃ ಯಾರು? ಅವು ಎಲ್ಲರ ಹಿತವನ್ನು ರಕ್ಷಿಸುವಂತೆ ರೂಪಿಸಲ್ಪಟ್ಟಿವೆಯೇ? ಕೇವಲ ಪುರುಷರ ಹಿತಕ್ಕಾಗಿ ರಚಿಸಲ್ಪಟ್ಟಿವೆಯೇ? ಕೇವಲ ಸ್ತ್ರೀಯರ ಹಿತಕ್ಕಾಗಿ ರಚಿಸಲ್ಪಟ್ಟಿವೆಯೇ? ಇಂಥ ತಪ್ಪಿತಸ್ಥರಿಗಾಗಲೀ, ಸ್ವಯಂಘೋಷಿತ ಸಮಾಜದ ರಕ್ಷಕರಿಗಾಗಲೀ ಶಿಕ್ಷೆಯೇ ಇಲ್ಲವೇ? ಶಿಕ್ಷೆಯಾದರೂ ಅವುಗಳನ್ನು ಜಾರಿಗೊಳಿಸುವ ವ್ಯವಸ್ಥೆಯೇ ಇಲ್ಲವಲ್ಲ!  

ಒಂದಾನೊಂದು ಕಾಲಕ್ಕೆ ಪ್ರಸ್ತುತವೆನಿಸುವ ಕೆಲವು ನಿಯಮಗಳು ಇಂದು ಅಪ್ರಸ್ತುತವಾಗಿವೆ ಎನ್ನುವುದು ಎಲ್ಲರಿಗೂ ಗೊತ್ತು. ಅಂಥ ಅಪ್ರಸ್ತುತ ನಿಯಮಗಳನ್ನು ಕಿತ್ತೊಗೆದು, ’ಇವತ್ತಿನ ದಿನಕ್ಕೆ ಇದು ಸಮಂಜಸ’ ಎಂದು ಹೇಳುವ ಧೈರ್ಯವಂತ ’ಮನು’ಗಳಂತೂ ಯಾರೂ ಇಲ್ಲ.  ಆ ರೀತಿ ಧೈರ್ಯ ತೋರಿದವರನ್ನು ಸಮಾಜದಿಂದ ಬಹಿಷ್ಕೃತಗೊಳಿಸುವದನ್ನೇ ಪುರುಷತ್ವ ಎಂದುಕೊಳ್ಳುವ ಭಂಡರೇ ಸಮಾಜದಲ್ಲಿ ತುಂಬಿಕೊಂಡಿದ್ದಾರೆ.   

ನಿಯಮಗಳಿದ್ದರೆ ಅದಕ್ಕೆ ಪ್ರತಿಯಾಗಿ ಶಿಕ್ಷೆಗಳನ್ನೂ ರೂಪಿಸಬೇಕು. ನಿಯಮಗಳನ್ನು ರೂಪಿಸಿದ ಈ ಸಮಾಜ ಅದನ್ನು ಪಾಲಿಸದವರಿಗೆ ಶಿಕ್ಷೆಗಳನ್ನು ರೂಪಿಸಿದೆಯೇ? ಪಾಲಿಸಿಯೂ ಸಂಕಷ್ಟಗಳಿಗೆ ಒಳಗಾಗುವವರ ರಕ್ಷಣೆಗೆ ಧಾವಿಸಿದೆಯೇ? ಯಾರು ತಪ್ಪಿತಸ್ಥರು ಎನ್ನುವುದನ್ನು ನಿರ್ಧರಿಸುವವರಾರು ಎಂದು ಎಲ್ಲಿಯಾದರೂ ನಮೂದಾಗಿದೆಯೇ?   

ಎಲ್ಲಿ ಸ್ಪಷ್ಟ ಚಿಂತನೆಯೋ ಅಲ್ಲಿ ಸುಂದರ ಸಮಾಜ ನಿರ್ಮಾಣ ಸಾಧ್ಯ. ಶಿಕ್ಷೆ ಜಾರಿಯಾಗುವಲ್ಲಿ ಸಮಾನತೆಯೂ ಇರಬೇಕು, ಅಂಥ ಸಮಾಜ ಮಾತ್ರ ಆರೋಗ್ಯಪೂರ್ಣವಾಗಿ ಬೆಳೆಯುತ್ತದೆ. ಸದ್ಯದ ಸಮಾಜದ ಆರೋಗ್ಯ ಹದಗೆಟ್ಟಿರುವುದು ಈ ಎಲ್ಲವುಗಳ ಲೋಪಕ್ಕಾಗಿ ಎಂದು ನನಗನ್ನಿಸುತ್ತದೆ.  

ಮುಂದಿನ ವಾರದಿಂದ ನೊಂದವರ ಕಥೆಗಳನ್ನು ಹೇಳುತ್ತೇನೆ.   ದಯವಿಟ್ಟು ಮನಸ್ಸುಗೊಟ್ಟು ಓದಿರಿ.   ಬದಲಾದ ವಿಚಾರಧಾರೆ, ಬದಲಾದ  

ದೃಷ್ಟಿಕೋನ ಅನೇಕ ನೊಂದ ಜೀವಗಳನ್ನು  ಸಮಾಧಾನಗೊಳಿಸಬಲ್ಲದು.   

- ಭಾರತಿ ತೊರಗಲ್ಲ  

ಬೆಳಗಾವಿ    

9481521150 

- * * * -   


ಸುದ್ದಿ ಓದಿ