ಅನುದಾನದ ಸದುಪಯೋಗ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು: ಪ್ರವೀಣ
ಮುಂಡಗೋಡ : ಎನ್ಆರ್ಎಲ್ಎಮ್ ಯೋಜನೆಯಲ್ಲಿ ರಚನೆಯಾದ ಗುಂಪುಗಳು ಅನುದಾನದ ಸದುಪಯೋಗವನ್ನು ಪಡೆದುಕೊಂಡು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಕಟ್ಟಿ ಹೇಳಿದರು.
ಅವರು ತಾಲೂಕಿನ ಚವಡಳ್ಳಿ ಗ್ರಾ.ಪಂ. ಸಭಾಭವನದಲ್ಲಿ ಆತ್ಮಾ ಯೋಜನೆಯಡಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೃಷಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಎನ್ಆರ್ಎಲ್ಎಮ್, ತಾಲೂಕು ಪಂಚಾಯತ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ 2021-22ನೇ ಸಾಲಿನ ಕಿಸಾನಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ದೀಪಾ ಬಂಗೇರ ಇವರು ಇಲಾಖೆಯ ಯೋಜನೆಗಳ ಬಗ್ಗೆ ಹಾಗೂ ರೈತ ಮಹಿಳೆಯರಿಗೆ ಸಿಗುವ ಲಾಭಗಳ ಬಗ್ಗೆ ಹಾಗೂ ರೈತ ಮಹಿಳೆಯರು ಸತ್ವಭರಿತ ಜೀವಸತ್ವದ ಸಮತೋಲನದ ಆಹಾರ ಪದಾರ್ಥಗಳನ್ನು ಉಪಯೋಗಿಸುವುದರ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು. ಸಹಾಯಕ ಕೃಷಿ ನಿರ್ದೇಶಕರಾದ ಎಮ್.ಎಸ್.ಕುಲಕರ್ಣಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಥಮ ಬಾರಿಗೆ ಎನ್ಆರ್ಎಲ್ಎಮ್ ಯೋಜನೆಯ ಒಕ್ಕೂಟದ ಗುಂಪುಗಳಿಗೆ ಕೃಷಿ ಇಲಾಖೆ ಮುಖಾಂತರ ಸಿಎಚ್ಸಿ ಕೇಂದ್ರ ಮಂಜೂರಾಗಿದ್ದು ಇದರ ಉಪಯೋಗವನ್ನು ಎಲ್ಲ ರೈತರು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು. ನರೇಗಾ ಯೋಜನೆಯ ಸಂಯೋಜಕರಾದ ಪೂರ್ಣಿಮಾ ಗೌಡ ಇವರು ನರೇಗಾ ಯೋಜನೆಯಡಿ ಮಹಿಳೆಯರಿಗೆ ಸಿಗುವ ಸೌಲಭ್ಯಗಳನ್ನು ಸವಿಸ್ತಾರವಾಗಿ ತಿಳಿಸಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಚವಡಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷರಾದ ನೇತ್ರಾವತಿ ಬಿಸವಣ್ಣವರ, ಪಿಡಿಒ ಗಣಪತಿ ಪಿಲ್ಲೋಜಿ ಹಾಗೂ ಮುಂತಾದವರಿದ್ದರು.
ಕಾರ್ಯಕ್ರಮದ ಸ್ವಾಗತ ವಂದನಾರೆ್ಣಯನ್ನು ಎನ್ಆರ್ಎಲ್ಎಮ್ ಮೇಲ್ವಿಚಾರಕರಾದ ಶ್ಯಾಮಲಾ ನಾಯ್ಕ ನೇರವೇರಿಸಿದರು. ಆತ್ಮಾಯೋಜನೆಯ ನಿವೃತ್ತ ತಾಲೂಕು ತಾಂತ್ರಿಕ ವ್ಯವಸ್ಥಾಪಕರಾದ ಕೋಪಣ್ಣ ಭಜಂತ್ರಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಸುಮಾರು 75ರಿಂದ80 ರೈತ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.