ಬಸವರಾಜ ಹೊರಟ್ಟಿ ಶೈಕ್ಷಣಿಕ ಸಮಸ್ಯೆ ಬಗೆಹರಿಸಿಲ್ಲ: ಗಡದಿನ್ನಿ
ಮುಂಡರಗಿ 11: ಬಸವರಾಜ ಹೊರಟ್ಟಿಯವರು ಎಲ್ಲಾ ಪಕ್ಷದೊಂದಿಗೆ ಶ್ಯಾಮಿಲಾಗಿ ಕೇವಲ ತಮ್ಮ ಬೆಳವಣಿಗೆಯ ಹಿತದೃಷ್ಟಿಯಿಂದ ಶಿಕ್ಷಕಕರನ್ನು ಬಳಸಿಕೊಳ್ಳುತ್ತಿದ್ದಾರೆ ಹೊರತು ಶಿಕ್ಷಕರ ಪರವಾಗಿ ಯಾವುದೇ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಲಿಲ್ಲ ಎಂದು ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶ್ರೀಶೈಲ ಗಡದಿನ್ನಿ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಜೂ. 13ರಂದು ನಡೆಯುವ ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆಯ ಪ್ರಯುಕ್ತ ಶಿಕ್ಷಕರ ಮತಯಾಚನೆ ಕುರಿತು ಮಾತನಾಡಿದ ಅವರು, ಬಸವರಾಜ ಹೊರಟ್ಟಿಯವರನ್ನು ಕಳೆದ 42 ವರ್ಷಳಿಂದಲೂ ಏಕಮೇವ ನಮ್ಮ ಪ್ರತಿನಿಧಿಯನ್ನಾಗಿ ಆಯ್ಕೆ ಮಾಡುತ್ತಾ ಬಂದಿದ್ದೇವೆ. ಅವರ ಮೇಲೆ ಶಿಕ್ಷಕರು ಇಟ್ಟಂತಹ ಪ್ರೀತಿ, ವಿಶ್ವಾಸ, ನಂಬಿಕೆ ಅವರನ್ನು ಮತ್ತೆ ಮತ್ತೆ ಆಯ್ಕೆ ಮಾಡಲು ಕಾರಣವಾಯಿತು. ಆದರೆ ಸುದೀರ್ಘ ಅವಧಿ ಸಿಕ್ಕಾಗಲೂ ನಮ್ಮ ಪ್ರತಿನಿಧಿ ಮಂತ್ರಿಯಾಗಿ, ಸಭಾಪತಿಯಾಗಿ ಅಧಿಕಾರ ಸಿಕ್ಕಾಗಲೂ ಸಹ ನೀರೀಕ್ಷೆ ಮಾಡಿದಷ್ಟು ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರವನ್ನು ಕಾಣದೇ ಇರುವ ಶಿಕ್ಷಕರು ತಮ್ಮ ಅಭಿಪ್ರಾಯವನ್ನು ಬದಲಾವಣೆ ಮಾಡಲು ಕಾಯುತ್ತಾ ಇದ್ದಾರೆ.
ನಾನು ಅವರೊಂದಿಗೆ 5 ಚುನಾವಣೆಯಲ್ಲಿ ಅವರ ಪರವಾಗಿ ದುಡಿದಿದ್ದೇನೆ. ಅವರನ್ನು ನಮ್ಮ ಪ್ರತಿನಿಧಿಯನ್ನಾಗಿ ಗುರುತಿಸಿ ಅವರನ್ನು ಎತ್ತರಮಟ್ಟಕ್ಕೆ ಬೆಳೆಸಲು ಹಾಗೂ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಹೊರಟ್ಟಿಯವರೊಂದಿಗೆ ಸಾಕಷ್ಟು ಭಾರಿ ಹೋರಾಟವನ್ನು ಸಹ ಮಾಡಿದ್ದೇನೆ. ಆದರೆ ಹೊರಟ್ಟಿಯವರಿಗೆ ತಾವು ಬೆಳೆಯುವದು ಮಾತ್ರ ಗೊತ್ತು ಇನ್ನೊಬ್ಬರನ್ನು ಬೆಳೆಸುವ ಗುಣ ಅವರಿಗೆ ಎಂದಿಗೂ ಬರಲಿಲ್ಲ.
1986 ರ ಚುನಾವಣೆಯಲ್ಲಿ ಕಡಿಮೆಯಾದ ಮತಧಾನದ ಪ್ರಮಾಣ ಬರುಬರುತ್ತಾ ಇನ್ನೂ ಕಡಿಮೆಯಾಗುತ್ತಾ ಬಂರುತ್ತಿದೆ. ಬರೀ ತಂತ್ರಗಾರಿಕೆಯಿಂದ ಗೆಲುವ ಸಾಧಿಸುತ್ತಾ ಬಂದಿದ್ದಾರೆ. ಆದರೆ ಇನ್ನ ಮೇಲೆ ಆ ತಂತ್ರಗಾರಿಕೆ ಫಲಕೊಡುವುದಿಲ್ಲ. ಅವರಿಗೆ ವಯಸ್ಸಾಗಿದೆ ಅವರನ್ನು ಬದಲಿಸುವ ಅಭಿಪ್ರಾಯವನ್ನು ಈಗಿನ ಶಿಕ್ಷಕರಿಂದ ಕೇಳಿಬರುತ್ತಿದೆ. ಅವರು ಬರಿ ದೊಡ್ಡಮಟ್ಟದ ವ್ಯಕ್ತಿಗಳನ್ನು ಹಾಗೂ ಹಣಬಲವಿರುವ ವ್ಯಕ್ತಿಗಳನ್ನು ಮಾತ್ರ ಗೌರವಿಸುತ್ತಾರೆ. ಕೆಳಮಟ್ಟದವರನ್ನು ಗೌರವಿಸುವುದಿಲ್ಲ. ನಮ್ಮ ಶಿಕ್ಷಕರು ಸೂಕ್ಷ್ಮ ಮನಸ್ಸಿನವರು, ಅವರನ್ನು ಬೆದರಿಸಿ, ಹೆದರಿಸಿ ಅವರನ್ನು ಮನವೊಲಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
ಹೀಗಾಗಿ ಶಿಕ್ಷಕರು ಸಂಕಷ್ಟದಿಂದ ಹೊರಬಂದು ನೆಮ್ಮದಿಯ ಜೀವನವನ್ನು ನಡೆಸಬೇಕೆಂಬ ಅಭಿಲಾಷೆಯಿಂದ ಈ ಸಲ ನಾನು ಪ್ರಯತ್ನಿಸುತ್ತಿದ್ದೇನೆ. ಹೆಚ್ಚು ಶಿಕ್ಷಕರು ದೈಹಿಕವಾಗಿ ನನ್ನನ್ನು ಬೇಟಿ ನೀಡದೇ ಮಾನಸಿಕವಾಗಿ ನಿಮ್ಮ ಬೆಂಬಲಕ್ಕೆ ನಾವು ಇದ್ದೇವೆ ಎಂದು ನನಗೆ ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೊರಟ್ಟಿಯವರು ಈ ಸಲ ತಾವು ಸೋಲುತ್ತೇನೆ ಎಂಬ ಭಯಕ್ಕೆ ಬಿಜೆಪಿ ಪಕ್ಷಕ್ಕೆ ಸೇರೆ್ಡಯಾಗಿದ್ದಾರೆ. ಹೀಗಾಗಿ ಹೊರಟ್ಟಿಯವರ ಸೋಲು ಖಚಿತ, ನನ್ನ ಗೆಲುವು ಸುಲಭವಾಗುತ್ತದೆ ಎಂದು ಭರವಸೆ ನೀಡಿದರು.
ಈ ವೇಳೆ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಅಂದಾನಯ್ಯ ಕುರ್ತಕೋಟಿಮಠ, ಮುಂಡರಗಿ ತಾಲೂಕಾ ಅಧ್ಯಕ್ಷ ಗುರುಲಿಂಗಯ್ಯ ಕೊಳ್ಳಿಮಠ, ಜೆಡಿಎಸ್ ಮುಖಂಡರಾದ ಎಂ.ಆರ್.ಸೋಂಪೂರ, ಎಚ್.ಎಂ.ಕಂಚಗಾರ, ಅಶೋಕ ತ್ಯಾಮಾನವರ, ಪ್ರಭು ಸಂಗನಾಳ, ಜೆ.ಕುರಗೋಡ, ಉಮೇಶ ಹಿರೇಮಠ, ಮಂಜುನಾಥ ದೊಡ್ಡಮನಿ, ಶೇಖರ್ ಗೌರಿಪುರ, ಮೌಲಾಹುಸೇನ ತಾಂಬೋಲಿ ಯಲ್ಲಪ್ಪ ಜಿಡ್ಡಿ ಇತರರು ಇದ್ದರು.