ತಾಳಿಕೋಟಿ

ಬಿಜೆಪಿ ದುರಾಡಳಿತ ಕೊನೆಗೊಳ್ಳಲಿದೆ: ಸುಣಗಾರ

ಬಿಜೆಪಿ ದುರಾಡಳಿತ ಕೊನೆಗೊಳ್ಳಲಿದೆ: ಸುಣಗಾರ

ತಾಳಿಕೋಟಿ: ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವ ರಾಜ್ಯದಲ್ಲಿರುವ ಬಿಜೆಪಿ ಸರಕಾರ ಜನಸಾಮಾನ್ಯರ ಹಿತವನ್ನು ಮರೆತಿದೆ. ಅಗತ್ಯ ವಸ್ತುಗಳ ಬೆಲೆಗಳು ವಿಪರೀತವಾಗಿ ಏರಿರುವದರಿಂದ ಬಡವರು ಬದುಕುವುದೇ ದುಸ್ತರವಾಗಿದೆ. ಇದೊಂದು ಜನವಿರೋಧಿ ಸರಕಾರವಾಗಿದ್ದು, ಇದರ ದುರಾಡಳಿತ ಕೊನೆಗೊಳ್ಳಲಿದೆ ಎಂದು ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಶರಣಪ್ಪ ಸುಣಗಾರ ಹೇಳಿದರು.

ದೇವರ ಹಿಪ್ಪರಗಿ ವಿಧಾನಸಭೆ ಮತಕ್ಷೇತ್ರದ ತುಂಬಗಿ ಗ್ರಾಮದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವೈಫಲ್ಯಗಳನ್ನು ಕ್ಷೇತ್ರದ ಜನರಿಗೆ ಮನವರಿಕೆ ಮಾಡಿಕೊಡಲು ಪಕ್ಷದ ವತಿಯಿಂದ ಹಮ್ಮಿಕೊಂಡ ಜನಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶದಲ್ಲಿ ಮೋದಿ ಸರಕಾರದಲ್ಲಿ ಆರ್ಥಿಕ ದುಸ್ಥಿತಿ ಎದುರಾಗಿದೆ. ದೇಶದಲ್ಲಿ ಇಂಧನ, ಕೃಷಿ ಪರಿಕರಗಳು, ರಸಗೊಬ್ಬರ ಬೆಲೆ ನಿರಂತರವಾಗಿ ಏರುತ್ತಲೇ ಇವೆ. ಗೃಹ ಬಳಕೆಯ ಗ್ಯಾಸ್ ಬೆಲೆ ಜನರನ್ನು ಕಂಗೆಡಿಸಿದೆ. ಇದರ ಬಗ್ಗೆ ಪ್ರಧಾನಿ ಮೋದಿಯವರು ಮಾತನಾಡುವದಿಲ್ಲ. ಅವರು ತಮ್ಮ ಮನ್ಕಿ ಬಾತ್ ಹೇಳುತ್ತಾರೆ ಹೊರತು ಜನರ ಮನಸ್ಸಿನ ಮಾತು ಹೇಳುವುದಿಲ್ಲ ಎಂದರು.

ರಾಜ್ಯದಲ್ಲಿ ಆಡಳಿತ ಸಂಪೂರ್ಣವಾಗಿ ಕುಸಿದಿದೆ, ಭ್ರಷ್ಟಾಚಾರ ಮಿತಿಮೀರಿದೆ. ಇದೊಂದು ಶೇ.40 ಕಮೀಷನ್ ಸರಕಾರವೆಂದು ಜನಸಾಮಾನ್ಯರೇ ಹಾದಿ-ಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಬಿಜೆಪಿ ಆಡಳಿತದಲ್ಲಿ ಮುಂದುವರೆಯುವ ನೈತಿಕ ಹಕ್ಕು ಕಳೆದುಕೊಂಡಿದೆ. ಮತ್ತೇ ಈ ರಾಜ್ಯದಲ್ಲಿ ನಾವೆಲ್ಲರೂ ಸೇರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಲ್ಲಿ ತರಬೇಕಾಗಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ಹೇಳಿದರು.

ಈ ಸಮಯದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಳನಗೌಡ ಪಾಟೀಲ, ಟಿಕೇಟ್ ಆಕಾಂಕ್ಷಿಗಳಾದ ಸುಜಾತಾ ಕಳ್ಳಿಮನಿ, ಡಾ. ಪ್ರಭುಗೌಡ ಲಿಂಗದಳ್ಳಿ, ಮುಖಂಡರಾದ ಸೋಮನಾಥ ಕಳ್ಳಿಮನಿ, ಸುರೇಶ ಬಾಬುಗೌಡ ಬಿರಾದಾರ (ಪೀರಾಪೂರ), ಬಾಲು ತಳವಾರ, ಎಚ್.ಬಿ. ಬಿರಾದಾರ, ಮೈನು ಕಲಕೇರಿ, ಪ್ರಭುಗೌಡ ಬಿರಾದಾರ ಇದ್ದರು. 

ಸುದ್ದಿ ಓದಿ