ನೂತನ ತಂತ್ರಜ್ಞಾನದೊಂದಿಗೆ ಬರುತ್ತಿದ್ದಾರೆ ‘ಭಾಗ್ಯವಂತರು'
ಬೆಂಗಳೂರು, ಜ 05 : ನಟಸಾರ್ವಭೌಮ ಡಾ. ರಾಜಕುಮಾರ್ ಹಾಗೂ ಬಿ.ಸರೋಜಾದೇವಿ ಅವರು ಅಭಿನಯಿಸಿದ್ದ 'ಭಾಗ್ಯವಂತರು' ಚಿತ್ರ ನೂತನ ತಂತ್ರಜ್ಞಾನದೊಂದಿಗೆ ಫೆಬ್ರವರಿ ಮೊದಲವಾರದಲ್ಲಿ ಮರು ಬಿಡುಗಡೆಯಾಗಲಿದೆ.ಸಿನಿಮಾ ಸ್ಕೋಪ್ 7.1 ಡಿ ಐ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ.ನರ್ತಕಿ ಚಿತ್ರಮಂದಿರ ಸೇರಿದಂತೆ ಕರ್ನಾಟಕದಾದ್ಯಂತ 100 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಭಾಗ್ಯವಂತರು ಚಿತ್ರ ಬಿಡುಗಡೆಯಾಗಲಿದೆ.ಈ ಹಿಂದೆ ಆಪರೇಷನ್ ಡೈಮಂಡ್ ರಾಕೆಟ್, ನಾನೊಬ್ಬ ಕಳ್ಳ, ರಾಜ ನನ್ನ ರಾಜ, ದಾರಿ ತಪ್ಪಿದ ಮಗ ಮುಂತಾದ ಚಿತ್ರಗಳ ವಿತರಣೆ ಮಾಡಿದ್ದ ಮುನಿರಾಜು ಅವರು ತಮ್ಮ ಮುನೇಶ್ವರ ಫಿಲಂಸ್ ಲಾಂಛನದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.ಪ್ರಸ್ತುತ ಕೃಷ್ಣಾಚಾರಿ ಚಿತ್ರದ ನಿರ್ಮಾಪಕರು ಆಗಿರುವ ಮುನಿರಾಜು ಅವರು 'ನನಗೆ ಡಾ. ರಾಜಕುಮಾರ್ ಮತ್ತು ಪಾರ್ವತಮ್ಮ ರಾಜ್ಕುಮಾರ್ ಅವರ ಬಗ್ಗೆ ವಿಶೇಷ ಗೌರವ. ಅವರೇ ನನಗೆ ಭಾಗ್ಯವಂತರು' ಎಂದಿದ್ದು, 1976ರಲ್ಲಿ ದ್ವಾರಕೀಶ್ ಅವರು ನಿರ್ಮಿಸಿ, ಭಾರ್ಗವ ಅವರು ನಿರ್ದೇಶಿಸಿದ್ದ ಈ ಚಿತ್ರ ಮರು ಬಿಡುಗಡೆಯಾಗಿ ಅಪಾರ ಯಶಸ್ಸು ಕಾಣಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.