ಬಳ್ಳಾರಿ

ಸೂಚನಾ ಫಲಕ ಅಳವಡಿಕೆ ಮೂಲಕ ಜಾಗೃತಿ

ಸೂಚನಾ ಫಲಕ ಅಳವಡಿಕೆ ಮೂಲಕ  ಜಾಗೃತಿ

ಬಳ್ಳಾರಿ 09: ನಗರದ 36ನೇ ವಾರ್ಡ್‌ನಲ್ಲಿ ತ್ಯಾಜ್ಯ ತುಂಬಿದ್ದ ತಿಪ್ಪೆಗುಂಡಿ ಪ್ರದೇಶವನ್ನು ಸ್ವಚ್ಛಗೊಳಿಸಿರುವ ವಾರ್ಡ್‌ನ ಪಾಲಿಕೆ ಸದಸ್ಯೆ ಕಲ್ಪನಾ ವೆಂಕಟರಮಣರೆಡ್ಡಿಯವರು, ಪಾಲಿಕೆ ವತಿಯಿಂದ ಅಲ್ಲೊಂದು ಸೂಚನಾ ಫಲಕವನ್ನು ಅಳವಡಿಸುವ ಮೂಲಕ ಜನರಲ್ಲಿ ಜಾಗೃತಿಯನ್ನೂ ಮೂಡಿಸಿದ್ದಾರೆ.  

36ನೇ ವಾರ್ಡ್‌ನಲ್ಲಿ ಜನರು ತಮ್ಮ ತಮ್ಮ ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ರಸ್ತೆ ಪಕ್ಕದಲ್ಲಿನ ತಿಪ್ಪೆಗುಂಡಿಗೆ ಎಸೆಯುತ್ತಿದ್ದರು. ತ್ಯಾಜ್ಯವನ್ನು ಬೇಕಾಬಿಟ್ಟಿಯಾಗಿ ಎಸೆಯುತ್ತಿದ್ದ ಹಿನ್ನೆಲೆಯಲ್ಲಿ ರಸ್ತೆ ತುಂಬೆಲ್ಲಾ ತ್ಯಾಜ್ಯ ಹರಡಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಇದು ಸೊಳ್ಳೆಗಳ ಉತ್ಪತ್ತಿಗೆ, ಹಂದಿಗಳಿಗೆ ಆವಾಸ ಸ್ಥಾನವಾಗಿ ಪರಿಣಮಿಸಿತ್ತು. ಪರಿಣಾಮ ಸ್ಥಳೀಯ ನಿವಾಸಿಗಳಿಗೂ ಇದು ಪ್ರತಿದಿನ ಕಿರಿಕಿರಿ ಉಂಟು ಮಾಡುತ್ತಿತ್ತು. ಇದೀಗ ಮಳೆಗಾಲ ಆರಂಭವಾಗುತ್ತಿರುವುದರಿಂದ ತ್ಯಾಜ್ಯದಿಂದ ಮಲೇರಿಯಾ, ಡೆಂಗ್ಯೂಗಳಂತಹ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದೆ. ಹಾಗಾಗಿ ಇದನ್ನು ಅರಿತ ವಾರ್ಡ್‌ನ ಪಾಲಿಕೆ ಸದಸ್ಯೆ ಕಲ್ಪನಾ ವೆಂಕಟರಮಣರೆಡ್ಡಿಯವರು ತಾವೇ ಸ್ವತಃ ಮುಂದೆ ಬಂದು ತ್ಯಾಜ್ಯವನ್ನು ಸ್ವಚ್ಛಗೊಳಿಸಿದ್ದಾರೆ. ಜನತೆಗೆ ಪಾಲಿಕೆಯಿಂದ ಸೂಚನಾ ಫಲಕವೊಂದನ್ನು ಅಳವಡಿಸಿ, ಇಲ್ಲಿ ತ್ಯಾಜ್ಯ ಎಸೆದರೆ 500 ರೂ. ದಂಡ ವಿಧಿಸುವುದಾಗಿಯೂ ಎಚ್ಚರಿಸಿದ್ದಾರೆ. ಜೊತೆಗೆ ಸ್ವಚ್ಛಗೊಂಡ ಸ್ಥಳದಲ್ಲಿ ಗಿಡವೊಂದನ್ನು ನಾಟಿ ಮಾಡಿ ಪರಿಸರ ಸಂರಕ್ಷಣೆಗೆ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ವಾರ್ಡ್‌ನ ಯಾರೊಬ್ಬರೂ ಸಹ ತ್ಯಾಜ್ಯವನ್ನು ಎಸೆಯದಂತೆ ಅವರು ಮನವಿ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪರಂದಾಮಯ್ಯ, ವಿಠ್ಠಲ್ ಮತ್ತು ಆರೋಗ್ಯ ನೀರೀಕ್ಷಕರಾದ ಶೆಹನಾಜ್ ಅವರು ಉಪಸ್ಥಿತರಿದ್ದರು. 


ಸುದ್ದಿ ಓದಿ