ಯರಗಟ್ಟಿ

ಎಸ್‌.ಬಿ. ಜಕಾತಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಕಾರ್ಯಕ್ರಮ

ಎಸ್‌.ಬಿ. ಜಕಾತಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಕಾರ್ಯಕ್ರಮ

ಲೋಕದರ್ಶನ ವರದಿ 

ಯರಗಟ್ಟಿ 1: ಪಟ್ಟಣದ ಎಸ್‌.ಬಿ. ಜಕಾತಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಹಾಗೂ ಮೊಬೈಲ್ ಆಪ್ಗಳ ಅತಿಯಾದ ಬಳಕೆಯಿಂದ ಉಂಟಾಗುವ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.  ಕಾರ್ಯಕ್ರಮದಲ್ಲಿ ಮುಖ್ಯವಾಗಿ ಮೊಬೈಲ್ ಆಪ್ಗಳ ಅತಿಯಾದ ಹಾಗೂ ನಿಯಂತ್ರಣವಿಲ್ಲದ ಬಳಕೆ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ವಿವರಿಸಲಾಯಿತು. ಅನಧಿಕೃತ ಹಾಗೂ ಅಪ್ರಮಾಣಿತ ಆಪ್ಗಳನ್ನು ಡೌನ್ಲೋಡ್ ಮಾಡುವುದರಿಂದ ವೈಯಕ್ತಿಕ ಮಾಹಿತಿ ಸೋರಿಕೆ ಹಾಗೂ ಆರ್ಥಿಕ ವಂಚನೆ ಸಂಭವಿಸುವ ಸಾಧ್ಯತೆ ಹೆಚ್ಚುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದರು.  

ಮಾದಕ ವಸ್ತುಗಳ ಸೇವನೆ ಕೇವಲ ವ್ಯಕ್ತಿಯ ಆರೋಗ್ಯವನ್ನಷ್ಟೇ ಅಲ್ಲ, ಕುಟುಂಬ ಹಾಗೂ ಸಮಾಜದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ತಿಳಿಸಲಾಯಿತು. ದೈಹಿಕ, ಮಾನಸಿಕ, ಆರ್ಥಿಕ ಹಾಗೂ ಸಾಮಾಜಿಕ ಹಾನಿಗೆ ಇದು ಕಾರಣವಾಗುತ್ತದೆ ಎಂದು ಒತ್ತಿ ಹೇಳಲಾಯಿತು.  ಸಿಪಿಐ ಎಂ.ಬಿ. ಮಠಪತಿ ಮಾತನಾಡಿ, ಮಾದಕ ವಸ್ತುಗಳಿಂದ ದೂರವಿರುವುದು ವಿದ್ಯಾರ್ಥಿಗಳ ಜವಾಬ್ದಾರಿ ಎಂದು ತಿಳಿಸಿದರು. ಇಂತಹ ವ್ಯಸನಗಳಿಂದ ಮುಕ್ತವಾಗಲು ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಕೇಂದ್ರಗಳ ಸಹಾಯ ಪಡೆಯಬಹುದೆಂದು ಸಲಹೆ ನೀಡಿದರು.  

ಕಾರ್ಯಕ್ರಮದಲ್ಲಿ ಹೆಲ್ಮೆಟ್ ಜಾಗೃತಿ ಕುರಿತು ಸಹ ವಿದ್ಯಾರ್ಥಿಗಳಿಗೆ ಸಂದೇಶ ನೀಡಲಾಯಿತು. ಬೈಕ್ ಸವಾರರು ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡುವುದು ಅಪಾಯಕರವಾಗಿದ್ದು, ರಸ್ತೆ ಅಪಘಾತಗಳಲ್ಲಿ ಜೀವಹಾನಿ ಸಂಭವಿಸುವ ಸಾಧ್ಯತೆ ಹೆಚ್ಚುತ್ತದೆ ಎಂದು ತಿಳಿಸಲಾಯಿತು.  ಕಾರ್ಯಕ್ರಮದಲ್ಲಿ ಪ್ರಾಚಾರ್ಯರು, ಉಪನ್ಯಾಸಕರು, ಪೊಲೀಸ್ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ