ಇಂಚಗೇರಿ ಮಠದ ಜಾತ್ಯತೀತ ಪರಂಪರೆ: ಶಂಕ್ರೆಪ್ಪ ಮಹಾರಾಜ
ಲೋಕದರ್ಶನ ವರದಿ
ಯರಗಟ್ಟಿ, 08: ಅಸಂಖ್ಯಾತ ಭಕ್ತರನ್ನು ಹೊಂದಿರುವ ಇಂಚಗೇರಿ ಮಠದ ಜಾತ್ಯತೀತ ಪರಂಪರೆಯನ್ನು ಮನಗಂಡ ರಾಜ್ಯ ಸರ್ಕಾರವು ‘ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ’ ನೀಡಿ ಗೌರವಿಸಿರುವುದು ಹೆಮ್ಮೆಯ ಸಂಗತಿ. ಇಂತಹ ಪವಿತ್ರ ಕ್ಷೇತ್ರಕ್ಕೆ ಸದ್ಭಕ್ತರು ಭೇಟಿ ನೀಡಬೇಕು ಎಂದು ಇಂಚಗೇರಿ ಮಠದ ಶಂಕ್ರೆಪ್ಪ ಮಹಾರಾಜರು ಹೇಳಿದರು.
ಸಮೀಪದ ತಲ್ಲೂರ ಗ್ರಾಮದ ಶ್ರೀ ಸಮರ್ಥ ಸದ್ಗುರು ಗೀರೀಶ ಆಶ್ರಮದಲ್ಲಿ ಗುರುವಾರ ನಡೆದ ಮಾಧವಾನಂದ ಪ್ರಭುಜಿಯವರ 111ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಾತಿ ಪದ್ಧತಿ ಹೋಗಲಾಡಿಸಲು 18 ಸಾವಿರ ಅಂತರ್ಜಾತಿ ವಿವಾಹಗಳನ್ನು ಮಾಡಿಸುವ ಮೂಲಕ ಭಾವೈಕ್ಯತೆ ಸಾರಲಾಗಿದೆ. ಶ್ರೀ ರೇವಣಸಿದ್ದೇಶ್ವರ ಮಹಾರಾಜರು ಸಾಮೂಹಿಕ ಬೇಸಾಯ ಹಾಗೂ ಸಹಪಂಕ್ತಿ ಭೋಜನದ ಮೂಲಕ ಸಾಮಾಜಿಕ ಸಾಮರಸ್ಯಕ್ಕೆ ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ತೊರಗಲ್ಲ ಮಠದ ದೀಪಕ ಸ್ವಾಮಿ ಮಾತನಾಡಿ, ಮಾಧವಾನಂದ ಪ್ರಭುಜಿಯವರು ಎಲ್ಲ ಧರ್ಮೀಯರನ್ನು ಸಮಾನ ಭಾವದಿಂದ ಕಾಣುವ ಮೂಲಕ ಸಮಾನತೆಯ ಸಂದೇಶ ಸಾರಿದ್ದಾರೆ ಎಂದರು.
ಇದಕ್ಕೂ ಮುನ್ನ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಿಂದ ವಾದ್ಯಮೇಳಗಳೊಂದಿಗೆ ಗೀರೀಶ ಆಶ್ರಮದವರೆಗೆ ಮೆರವಣಿಗೆ ನಡೆಯಿತು. ಸಪ್ತಾಹದ ಅಂಗವಾಗಿ ಎರಡು ದಿನಗಳ ಕಾಲ ಆಶ್ರಮದಲ್ಲಿ ಭಜನೆ, ಕಾಕಡಾರತಿ, ಪುಷ್ಪವೃಷ್ಟಿ, ಆಧ್ಯಾತ್ಮಿಕ ಬೋಧನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು. ಭಕ್ತರಿಗೆ ಅನ್ನಪ್ರಸಾದ ವಿತರಿಸಲಾಯಿತು. ಹುಬ್ಬಳ್ಳಿಯಿಂದ ಇಂಚಗೇರಿ ಮಠದವರೆಗೆ ಸಾಗುವ ಶ್ರೀ ಮಾಧವ ರಥೋತ್ಸವದ ಪಾದಯಾತ್ರಿಕರನ್ನು ಬೀಳ್ಕೊಡಲಾಯಿತು.
ಇಂಚಗೇರಿ ಮಠದ ಸುಭಾಷ ಮಹಾರಾಜರು, ಸದಾಶಿವ ಮಹಾರಾಜರು, ದತ್ತಾತ್ರೇಯ ಮಹಾರಾಜರು, ಸಂಗಪ್ಪ ಸಾಲಿಮಹಾರಾಜರು, ಗ್ರಾಪಂ ಮಾಜಿ ಉಪಾಧ್ಯಕ್ಷ ಬಾಬುಗೌಡ ಅಣ್ಣಿಗೇರಿ, ಮುಖಂಡ ಶಂಕರಗೌಡ ಪಾಟೀಲ, ಈರಣ್ಣ ಹುಡ್ಡಾರ, ಶಂಕರ್ಪ ಗಾಣಿಗೇರ, ಕಾಳಸಿದ್ದಪ್ಪ ಮುರಗೋಡ, ಭಾವುರಾಜ ಸಾಲಿ, ಸಚಿನ್ ಹೊಳಿ, ಗಿರೆಪ್ಪ ಮಣ್ಣಿಕೇರಿ, ಶೇಟ್ಟೆಪ್ಪ ಮುರಗೋಡ, ಉಮೇಶ ಬೆನಕಟ್ಟಿ, ಮೋಹನ ಇಂಚಗೇರಿ, ಮಂಜುನಾಥ ಒಳಸಂಗ, ಗುರುಬಸವ ಸಾಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.